Third Biggest Diamond: ವಿಶ್ವದ ಮೂರನೇ ಅತಿ ದೊಡ್ಡ 1,098 ಕ್ಯಾರಟ್ ವಜ್ರ ದಕ್ಷಿಣ ಆಫ್ರಿಕಾದ ಬೋಟ್ಸ್ವಾನದಲ್ಲಿ ಪತ್ತೆ
ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ರತ್ನದ ಗುಣಮಟ್ಟದ 1098 ಕ್ಯಾರಟ್ನ ವಜ್ರ ದಕ್ಷಿಣ ಆಫ್ರಿಕಾದ ಬೋಟ್ಸ್ವಾನ್ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮತ್ತಷ್ಟು ವಿವರ ಇಲ್ಲಿದೆ.
ದಕ್ಷಿಣ ಆಫ್ರಿಕಾದ ಬೋಟ್ಸ್ವಾನ ಎಂಬ ಸ್ಥಳದ ಹೆಸರು ಕೇಳಿದ್ದೀರಾ? ಅಲ್ಲಿ ಈಗ 1,098 ಕ್ಯಾರಟ್ ವಜ್ರ ದೊರೆತಿದೆ. ಈ ತನಕ ಪತ್ತೆ ಆಗಿರುವುದರಲ್ಲೇ ಮೂರನೇ ಅತಿ ದೊಡ್ಡ, ಗುಣಮಟ್ಟದ ರತ್ನದ ಕಲ್ಲು ಬೋಟ್ಸ್ವಾನ್ನಲ್ಲಿ ಸಿಕ್ಕಿದೆ. ಆಂಗ್ಲೋ ಅಮೆರಿಕನ್ ಡಿ ಬೀರ್ಸ್ ಮತ್ತು ಸರ್ಕಾರದ ಜಂಟಿ ಸಹಯೋಗದಲ್ಲಿ ನಡೆದ ಗಣಿಗಾರಿಕೆ ಇದು. ಈ ರತ್ನವನ್ನು ಅಧ್ಯಕ್ಷ ಮೊಕ್ವಿಟ್ಸಿ ಮೈಸಿಸಿಗೆ ಡೆಬ್ಸವಾನ ಡೈಮಂಡ್ ಕಂಪೆನಿಯ ಹಂಗಾಮಿ ಮ್ಯಾನೇಜಿಂಗ್ ಡೈರೆಕ್ಟರ್ ಲೈನೆಟ್ ಆರ್ಮ್ಸ್ಟ್ರಾಂಗ್ ನೀಡಿದ್ದಾರೆ. ಇದು ವಿಶ್ವದ ಮೂರನೇ ಅತಿ ದೊಡ್ಡ ವಜ್ರ. ಮೊದಲನೆಯದು 3,106 ಕ್ಯಾರಟ್ನ ಕಲಿನನ್ ವಜ್ರ, ಅದು 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆಗಿತ್ತು. ಎರಡನೆಯದು 1,109 ಕ್ಯಾರಟ್ನ ಲೆಸೆಡಿ ರೊನವನ್ನು 2015ರಲ್ಲಿ ಬೋಟ್ಸ್ವಾನದಲ್ಲಿ ಲುಕಾರ ಡೈಮಂಡ್ಸ್ ಪತ್ತೆ ಮಾಡಿತ್ತು. ಐವತ್ತು ವರ್ಷಕ್ಕೂ ಹೆಚ್ಚು ಸಮಯದ ತನ್ನ ಇತಿಹಾಸದಲ್ಲಿನ ಕಾರ್ಯಾಚರಣೆಯಲ್ಲಿ ಡೆಬ್ಸವಾನ ಪತ್ತೆ ಮಾಡಿದ ಅತಿ ದೊಡ್ಡ ವಜ್ರ ಇದು ಎಂದು ಆರ್ಮ್ಸ್ಟ್ರಾಂಗ್ ಹೇಳಿದ್ದಾರೆ.
“ನಮ್ಮ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರವಾಗಿ ಇದು ವಿಶ್ವದ ಮೂರನೇ ಅತಿ ದೊಡ್ಡ ರತ್ನದ ಗುಣಮಟ್ಟದ ಕಲ್ಲು. ಇದನ್ನು ಡಿಬೀರ್ಸ್ ಚಾನೆಲ್ ಮೂಲಕ ಮಾರಬೇಕೋ ಅಥವಾ ಸರ್ಕಾರ ಸ್ವಾಮ್ಯದ ಒಕವಂಗೋ ಡೈಮಂಡ್ ಕಂಪೆನಿ ಮೂಲಕ ಮಾರಬೇಕೋ ನಿರ್ಧಾರ ಕೈಗೊಳ್ಳಬೇಕು,” ಎಂದು ಆರ್ಮ್ಸ್ಟ್ರಾಂಗ್ ಹೇಳಿದ್ದಾರೆ. ಖನಿಜ ಮಂತ್ರಿ ಲೆಫೊಕೊ ಮೊವೊಗಿ ಮಾತನಾಡಿ, ಇನ್ನೂ ಹೆಸರಿಡದ ಈ ವಜ್ರವು 73 ಮಿಲಿ ಮೀಟರ್ ಉದ್ದ ಹಾಗೂ 52 ಮಿಲಿ ಮೀಟರ್ ಅಗಲ, 27 ಮಿಲಿ ಮೀಟರ್ ದಪ್ಪವಾಗಿದೆ. 2020ರಲ್ಲಿ ಕೊವಿಡ್- 19 ಬಿಕ್ಕಟ್ಟಿನ ಸಂದರ್ಭದಲ್ಲಿ ವಜ್ರದ ವ್ಯಾಪಾರಕ್ಕೆ ಹೊಡೆತ ಬಿದ್ದ ಸಂದರ್ಭದಲ್ಲಿ ಈ ವಜ್ರ ದೊರೆಯಲಿಲ್ಲ.
ಸರ್ಕಾರಕ್ಕೆ ಶೇ 80ರಷ್ಟು ಆದಾಯ ಡೆಬ್ಸವಾನ ಮಾರಾಟದ ಡಿವಿಡೆಂಡ್, ರಾಯಲ್ಟೀಸ್ ಹಾಗೂ ತೆರಿಗೆಗಳಿಂದ ಬರುತ್ತದೆ. 2020ರಲ್ಲಿ ಡೆಬ್ಸವಾನ ಉತ್ಪಾದನೆ ಶೇ 20ರಷ್ಟು ಕಡಿಮೆಯಾಗಿ, 16.6 ಮಿಲಿಯನ್ ಕ್ಯಾರಟ್ ತಲುಪಿತು. ಮಾರಾಟ ಪ್ರಮಾಣ ಶೇ 30ರಷ್ಟು ಇಳಿಕೆಯಾಗಿ 2.1 ಬಿಲಿಯನ್ ಅಮೆರಿಕನ್ ಡಾಲರ್ಗೆ ಕುಸಿಯಿತು. 2021ರಲ್ಲಿ ಡೆಬ್ಸವಾನ ಉತ್ಪಾದನೆ ಹೆಚ್ಚಿಸಲು ಯೋಜನೆ ರೂಪಿಸಿದೆ. ಕೊರೊನಾ ಬಿಕ್ಕಟ್ಟಿನ ಮುಂಚೆ 23 ಮಿಲಿಯನ್ ಕ್ಯಾರಟ್ ಇತ್ತು. ಅದಕ್ಕಿಂತ ಶೇ 38ರಷ್ಟು ಉತ್ಪಾದನೆ ಹೆಚ್ಚಿಸುವ ಬಗ್ಗೆ ಆಲೋಚನೆ ಇದೆ. ಪ್ರಯಾಣ ನಿರ್ಬಂಧಗಳನ್ನು ಸಲೀಸು ಮಾಡುವ ಜತೆಗೆ ಹಾಗೂ ಮತ್ತು ಆಭರಣ ಮಳಿಗೆಗಳು ಪುನರಾರಂಭ ಆಗುವುದರೊಂದಿಗೆ ಜಾಗತಿಕ ವಜ್ರದ ಮಾರುಕಟ್ಟೆ ಸುಧಾರಿಸುತ್ತಿದೆ.
ಇದನ್ನೂ ಓದಿ: ಇಡೀ ವಿಶ್ವಕ್ಕೆ ‘ಪಿಂಕ್ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?
(World third largest diamond discovered in South Africa’s Botswana. Here is the complete details)
Published On - 7:22 pm, Fri, 18 June 21