Ratan Tata: ಏರ್ ಇಂಡಿಯಾ ಪ್ರಯಾಣಿಕರಿಗೆ ರತನ್ ಟಾಟಾ ವಿಶೇಷ ಸಂದೇಶ; ಅದು ಏನೆಂದು ಪರಿಶೀಲಿಸಿ?
ಏರ್ ಇಂಡಿಯಾದಲ್ಲಿ ಉದ್ಯಮಿ ರತನ್ ಟಾಟಾ ಅವರ ವಿಶೇಷ ಧ್ವನಿ ಸಂದೇಶ ಪ್ರಸಾರ ಮಾಡಲಾಗುತ್ತದೆ. ಅದೇನು ಎಂಬ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿನ ಲೇಖನ ಓದಿ.
ಏರ್ ಇಂಡಿಯಾ (Air India) ವಿಮಾನಕ್ಕೆ ಪ್ರಯಾಣಿಕರನ್ನು ಸ್ವಾಗತಿಸುವ ವಿಶೇಷ ಸಂದೇಶವೊಂದನ್ನು ರತನ್ ಟಾಟಾ ಬಿಡುಗಡೆ ಮಾಡಿದ್ದಾರೆ. ಟಾಟಾ ಸಮೂಹದಿಂದ ಏರ್ ಇಂಡಿಯಾವನ್ನು ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ಈ ಸಂದೇಶ ಬಿಡುಗಡೆಗೊಳಿಸಲಾಗಿದೆ. ಬುಧವಾರ ಬೆಳಗ್ಗೆಯಂದು ಏರ್ ಇಂಡಿಯಾದ ಟ್ವಿಟರ್ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ. “ಏರ್ ಇಂಡಿಯಾದ ಹೊಸ ಗ್ರಾಹಕರನ್ನು ಟಾಟಾ ಸಮೂಹವು ಸ್ವಾಗತಿಸುತ್ತದೆ ಮತ್ತು ಪ್ರಯಾಣಿಕರ ಆರಾಮ ಹಾಗೂ ಸೇವೆ ವಿಚಾರಕ್ಕೆ ಏರ್ ಇಂಡಿಯಾವೇ ಆಯ್ಕೆ ಆಗುವಂತೆ ಮಾಡಲು ಒಟ್ಟಾಗಿ ಕೆಲಸ ಮಾಡುವುದಕ್ಕೆ ಸಂತೋಷವಾಗುತ್ತದೆ,” ಎಂದು ಹೇಳಿರುವ ರತನ್ ಟಾಟಾ ಅವರ ಆಡಿಯೋ ಸಂದೇಶವನ್ನು ಏರ್ ಇಂಡಿಯಾದ ವಿಮಾನದ ಹಾರಾಟ ಸಂದರ್ಭದಲ್ಲಿ ತೋರಿಸಲಾಗುತ್ತದೆ.
ಕಳೆದ ವಾರ ಏರ್ ಇಂಡಿಯಾವನ್ನು ಟಾಟಾ ಸಮೂಹವು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಟಾಟಾ ಸಮೂಹವು ಸ್ಮಾರ್ಟ್ ಮತ್ತು ಚಂದದ ಕ್ಯಾಬಿನ್ ಸಿಬ್ಬಂದಿ ಸದಸ್ಯರ ಮೇಲೆ ಗಮನ ಕೇಂದ್ರೀಕರಿಸಿದೆ. ಇದರ ಜತೆಗೆ ವಿಮಾನಗಳ ಉತ್ತಮವಾದ ಹಾಗೂ ಸರಿಯಾದ ಸಮಯಕ್ಕೆ ಕಾರ್ಯ ನಿರ್ವಹಣೆ, ಪ್ರಯಾಣಿಕರನ್ನು “ಅತಿಥಿಗಳು” ಎಂದು ಕರೆಯುವುದು ಮತ್ತು ವಿಮಾನದಲ್ಲಿನ ಊಟದ ಸೇವೆಯನ್ನು ವೃದ್ಧಿಸುತ್ತದೆ. ಏರ್ ಇಂಡಿಯಾವನ್ನು ಕಳೆದ ಗುರುವಾರ ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಯಿತು. ಸುಮಾರು 69 ವರ್ಷಗಳ ಹಿಂದೆ ಅದನ್ನು ಇದೇ ಸಂಸ್ಥೆಯಿಂದ ತೆಗೆದುಕೊಳ್ಳಲಾಗಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಏರ್ ಇಂಡಿಯಾ ಬಿಡ್ ಅನ್ನು ಗೆದ್ದ ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್, ಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡ ಏರ್ ಇಂಡಿಯಾ ಕಚೇರಿಗೆ ತೆರಳುವ ಮೊದಲು ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಸ್ವಲ್ಪ ಸಮಯದ ನಂತರ ಹೊಸ ನಿರ್ದೇಶಕರ ಮಂಡಳಿಯು ಸಭೆ ಸೇರಿ, ನಿರ್ವಹಣೆಯ ಸ್ವಾಧೀನವನ್ನು ಔಪಚಾರಿಕಗೊಳಿಸಲಾಯಿತು. ಟಾಟಾ ಸಮೂಹಕ್ಕೆ ಏರ್ ಇಂಡಿಯಾವು ಮೂರನೇ ವಿಮಾನಯಾನ ಸಂಸ್ಥೆ ಆಗಲಿದೆ. ಈಗಾಗಲೇ ಸಿಂಗಾಪೂರ್ ಏರ್‌ಲೈನ್ಸ್ ಮತ್ತು ಏರ್‌ಏಷ್ಯಾ ಇಂಡಿಯಾದೊಂದಿಗೆ ಏರ್‌ಏಷ್ಯಾ ಗ್ರೂಪ್‌ನ ಸಹಭಾಗಿತ್ವದ ಜಂಟಿ ಉದ್ಯಮದಲ್ಲಿ ವಿಸ್ತಾರಾವನ್ನು ನಿರ್ವಹಿಸುತ್ತಿದೆ. ಟಾಟಾದಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್‌ನಲ್ಲಿ ರೂ. 15,300 ಕೋಟಿ ಸಾಲವನ್ನು ತೆಗೆದುಕೊಂಡರೆ, ಉಳಿದ ರೂ. 46,262 ಕೋಟಿ ಸಾಲ ಮತ್ತು ಪಾವತಿಸದ ಇಂಧನ ಬಿಲ್‌ಗಳಿಗೆ ಸುಮಾರು ರೂ. 15,000 ಕೋಟಿ ಬಾಕಿಯನ್ನು ಸರ್ಕಾರ ಪಾವತಿಸಿದೆ.
ಏರ್ ಇಂಡಿಯಾವು ಟಾಟಾ ಸಮೂಹಕ್ಕೆ ಬೆಲೆ ಬಾಳುವಂಥ ಹಾರುವ ಹಕ್ಕುಗಳು ಮತ್ತು ಲ್ಯಾಂಡಿಂಗ್ ಸ್ಲಾಟ್‌ಗಳಿಗೆ ತಕ್ಷಣದಿಂದ ಪ್ರವೇಶವನ್ನು ನೀಡುತ್ತದೆ. ಇದರಿಂದ ಕಡಿಮೆ-ವೆಚ್ಚದ, ಅಲ್ಪಾವಧಿಯ ಅಂತರರಾಷ್ಟ್ರೀಯ ವಿಮಾನ ಯಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ನಿಯಂತ್ರಣವನ್ನು ಪಡೆಯುತ್ತದೆ. SATS ಲಿಮಿಟೆಡ್‌ನೊಂದಿಗೆ ನೆಲ ನಿರ್ವಹಣೆ ಕಂಪೆನಿಯಲ್ಲಿ ಶೇ 50ರಷ್ಟು ಪಾಲನ್ನು ಪಡೆಯುತ್ತದೆ. ಒಪ್ಪಂದದ ನಿಯಮಗಳ ಪ್ರಕಾರ, ಟಾಟಾದಿಂದ ಯಾವುದೇ ಉದ್ಯೋಗಿಯನ್ನು ಕನಿಷ್ಠ ಒಂದು ವರ್ಷದವರೆಗೆ ತೆಗೆದುಹಾಕುವಂತಿಲ್ಲ.
ಟಾಟಾ ಸಮೂಹದ ಸಂಸ್ಥಾಪಕ ಜೆಆರ್‌ಡಿ ಟಾಟಾ ಮೂಲತಃ 1932ರಲ್ಲಿ ರಾಷ್ಟ್ರದ ಮೊದಲ ವಿಮಾನಯಾನವನ್ನು ಪ್ರಾರಂಭಿಸಿದರು. ಆಗಿನ ಅವಿಭಜಿತ, ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿನ ಬಾಂಬೆ ಮತ್ತು ಕರಾಚಿ ಮಧ್ಯೆ ವಿಮಾನ ಹಾರಾಟ ನಡೆಯುತ್ತಿತ್ತು. ಇದನ್ನು 1953ನೇ ಇಸವಿಯಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು.
ಇದನ್ನೂ ಓದಿ: Air India: ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರಿಸುವ ಕಾರ್ಯ ಸಂಪೂರ್ಣ ಎಂದು ಘೋಷಿಸಿದ ತುಹಿನ್ ಕಾಂತ್ ಪಾಂಡೆ