ಷೇರುಪೇಟೆಯು ಪ್ರತಿದಿನ ಹೊಸಹೊಸ ದಾಖಲೆಗಳನ್ನು ಬರೆಯುತ್ತಿದೆ. ಪ್ರತಿ ಸಲ ಷೇರುಪೇಟೆಯ ಸಾಧನೆ ಉನ್ನತಮಟ್ಟದಲ್ಲಿದ್ದಾಗ ಮ್ಯೂಚುವಲ್ ಫಂಡ್ ಕಂಪನಿಗಳು ಹೊಸ ಫಂಡ್ಗಳನ್ನು ಪರಿಚಯಿಸುವುದು ವಾಡಿಕೆ. ಈ ವರ್ಷವು ಇದು ಮುಂದುವರಿದಿದೆ. ಐಸಿಐಸಿಐ, ಕೆನರಾ ರೊಬೆಕೊ, ಎಸ್ಬಿಐ ಸೇರಿದಂತೆ ಹಲವು ಕಂಪನಿಗಳು ಎನ್ಎಫ್ಒಗಳ (New Fund Offer -NFO) ಮೂಲಕ ಹೊಸ ಫಂಡ್ಗಳನ್ನು ಘೋಷಿಸಿವೆ. ಎಸ್ಬಿಐ ಮ್ಯೂಚುವಲ್ ಫಂಡ್ನ ಬ್ಯಾಲೆನ್ಸ್ಡ್ ಅಡ್ವಾಂಟೇಟ್ ಫಂಡ್ ಎನ್ಎಫ್ಒ ಮೂಲಕ ₹ 13,000 ಕೋಟಿ ನಿಧಿ ಸಂಗ್ರಹಿಸಿ ಇತಿಹಾಸವನ್ನೇ ನಿರ್ಮಿಸಿತು.
ಈ ಎನ್ಎಫ್ಒಗಳ ಭರಾಟೆಯಲ್ಲಿ ಡಿಎಸ್ಪಿ ಮ್ಯೂಚುವಲ್ ಫಂಡ್ ಕಂಪನಿಯು ವಿಭಿನ್ನ ಪ್ರಯತ್ನದಿಂದ ಗಮನ ಸೆಳೆಯುತ್ತಿದೆ. ಹಲವು ವರ್ಷಗಳಿಂದ ಉತ್ತಮ ಸಾಧನೆ ತೋರಿರುವ ಡಿಎಸ್ಪಿ ಫ್ಲೆಕ್ಸಿಕ್ಯಾಪ್ ಫಂಡ್ನ (ಹಿಂದಿನ ಡಿಎಸ್ಪಿ ಈಕ್ವಿಟಿ) ಒಎಫ್ಒ (Old Fund Offer – OFO) ಘೋಷಿಸಿದೆ. 1997ರಿಂದ ಅಸ್ತಿತ್ವದಲ್ಲಿರುವ ಈ ಫಂಡ್ ಅನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸದಾಗಿ ಬರುವುದಷ್ಟೇ ಒಳಿತಲ್ಲ, ಸಾಕಷ್ಟು ಉತ್ತಮ ಹಳೆಯ ಫಂಡ್ಗಳೂ ಭಾರತೀಯ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿವೆ ಎಂದು ಸಾರಿ ಹೇಳಲು ಪ್ರಯತ್ನಿಸಿದೆ.
ಒಎಫ್ಒ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಎಸ್ಪಿ ಇನ್ವೆಸ್ಟ್ಮೆಂಟ್ ಮ್ಯಾನೇಜರ್ಸ್ ಕಂಪನಿಯ ಎಂಡಿ ಮತ್ತು ಸಿಇಒ ಕಲ್ಪೆನ್ ಪಾರೇಖ್, ‘ಒಳ್ಳೆಯದಾಗಿದ್ದರೂ ಹಳೆಯದು ಎನ್ನುವ ಕಾರಣಕ್ಕೆ ಹಲವು ಸಲ ಕೆಲವನ್ನು ನಾವು ನಿರ್ಲಕ್ಷಿಸುತ್ತೇವೆ. ಒಎಫ್ಒ ಪ್ರಯತ್ನದ ಮೂಲಕ ನಾವು ಸುಮಾರು 25 ವರ್ಷಗಳ ಅವಧಿಯಲ್ಲಿ ಮಾರುಕಟ್ಟೆ ಏರಿಳಿತಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಫಂಡ್ ಒಂದನ್ನು ಹೂಡಿಕೆದಾರರಿಗೆ ಮತ್ತೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ. ಲಾಭಕರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉತ್ತಮ ಮ್ಯಾನೇಜ್ಮೆಂಟ್ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಈ ಫಂಡ್ನ ಉದ್ದೇಶ’ ಎಂದು ಹೇಳಿದರು.
55ರಿಂದ 65 ಕಂಪನಿಗಳ ಷೇರುಗಳು ಈ ಫಂಡ್ನ ಪೋರ್ಟ್ಫೋಲಿಯೊದಲ್ಲಿದ್ದು, ಶೇ 60-70ರಷ್ಟು ಲಾರ್ಜ್ಕ್ಯಾಪ್, ಶೇ 30ರಿಂದ 40ರಷ್ಟು ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಿವೆ. ಫಂಡ್ ಆರಂಭದಿಂದ ಇಲ್ಲಿಯವರೆಗೆ ಶೇ 19.3ರ ಪ್ರತಿಫಲ ನೀಡಿದೆ. 29ನೇ ಏಪ್ರಿಲ್ 1997ರಲ್ಲಿ ಆರಂಭವಾದ ಈ ಫಂಡ್ನಲ್ಲಿ ಪ್ರಸ್ತುತ ₹ 5687 ಕೋಟಿ ನಿಧಿ, ಅಂದರೆ ಎಯುಎಂ (Asset Under Manangement – AUM) ಸಂಗ್ರಹವಾಗಿವೆ. ಅತುಲ್ ಭೋಲೆ ಮತ್ತು ಅಭಿಷೇಕ್ ಘೋಷ್ ಈ ಫಂಡ್ನ ಮ್ಯಾನೇಜರ್ಗಳು. ಬ್ಯಾಂಕ್ (ಶೇ 20), ಗ್ರಾಹಕ ಉತ್ಪನಗನಳು (ಶೇ 9), ವಿಮೆ (8), ಹಣಕಾಸು (ಶೇ 7) ಮತ್ತು ಸಾಫ್ಟ್ವೇರ್ (ಶೇ 7) ಕ್ಷೇತ್ರಗಳಲ್ಲಿ ಈ ಫಂಡ್ನ ಹೂಡಿಕೆ ಗಮನಾರ್ಹ ಪ್ರಮಾಣದಲ್ಲಿದೆ.
(ಸೂಚನೆ: ಈಕ್ವಿಟಿ ಆಧರಿತ ಮ್ಯೂಚುವಲ್ ಫಂಡ್ಗಳು ಷೇರುಪೇಟೆ ಏರಿಳಿತಗಳಿಂದ ಪ್ರಭಾವಿತವಾಗುತ್ತವೆ. ಈ ಬರಹದ ಮೂಲಕ ಯಾವುದೇ ಫಂಡ್ನಲ್ಲಿ ಹೂಡಿಕೆ ಮಾಡಬೇಕು ಎಂದು ಟಿವಿ9 ಕನ್ನಡ ಡಿಜಿಟಲ್ ಶಿಫಾರಸು ಮಾಡುತ್ತಿಲ್ಲ)
(Old Fund Offer from DSP Flexicap Fund a new Initiative from a fund house)
ಇದನ್ನೂ ಓದಿ: SBI NFO: 13 ಸಾವಿರ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿ ಹೊಸ ದಾಖಲೆ ಬರೆದ ಎಸ್ಬಿಐ ಮ್ಯೂಚುವಲ್ ಫಂಡ್
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ ಎನ್ಎಫ್ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?