SBI NFO: 13 ಸಾವಿರ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿ ಹೊಸ ದಾಖಲೆ ಬರೆದ ಎಸ್ಬಿಐ ಮ್ಯೂಚುವಲ್ ಫಂಡ್
ಪ್ರತಿ ಅರ್ಜಿಗಳಿಂದ ಸಂಗ್ರಹವಾದ ಮೊತ್ತ ಕಡಿಮೆಯಿದ್ದರೂ, ಗಮನಾರ್ಹ ಪ್ರಮಾಣದಲ್ಲಿ ಹೂಡಿಕೆದಾರರು ಆಸಕ್ತಿ ತೋರಿದ ಕಾರಣ ಹೊಸ ದಾಖಲೆ ಬರೆಯಲು ಸಾಧ್ಯವಾಯಿತು.
ಮುಂಬೈ: ಭಾರತದ ಅತಿದೊಡ್ಡ ಬ್ಯಾಂಕರ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಸಮೂಹದ (State Bank of India – SBI) ಎಸ್ಬಿಐ ಮ್ಯೂಚುವಲ್ ಫಂಡ್ ತನ್ನ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ನ (Balanced Advantage Fund) ಆರಂಭಿಕ ಕೊಡುಗೆ ಅಂದರೆ ಎನ್ಎಫ್ಒ (New Fund Offer – NFO) ಮೂಲಕ ₹ 13 ಸಾವಿರ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿ ಹೊಸ ದಾಖಲೆ ಬರೆದಿದೆ. ಈ ವಿಚಾರವನ್ನು ಹಲವು ವಾಣಿಜ್ಯ ಸುದ್ದಿತಾಣಗಳು ವರದಿ ಮಾಡಿವೆ.
ಆಗಸ್ಟ್ 12ರಂದು ಸಾರ್ವಜನಿಕರ ಹೂಡಿಕೆಗೆ ಮುಕ್ತವಾಗಿದ್ದ ಎಸ್ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ನ ಎನ್ಎಫ್ಒ ಆಗಸ್ಟ್ 25ರ ರಾತ್ರಿ 12 ಗಂಟೆಗೆ ಮುಕ್ತಾಯವಾಯಿತು. ಯಾವುದೇ ಎನ್ಎಫ್ಒ 15 ದಿನಗಳಿಗಿಂತ ಹೆಚ್ಚಿನ ಅವಧಿಗೆ ಮುಂದುವರಿಯುವಂತಿಲ್ಲ ಎಂದು ಸೆಬಿ ನಿಯಮ ಜಾರಿ ಮಾಡಿದೆ.
ಇದು ಓಪನ್ ಎಂಡೆಂಡ್ ಫಂಡ್ ಆಗಿರುವುದರಿಂದ ಎನ್ಎಫ್ಒ ಅವಧಿ ಮುಕ್ತಾಯವಾದ ನಂತರವೂ ಸಾರ್ವಜನಿಕರು ಹಣ ಹೂಡಿಕೆ ಮಾಡಲು ಅವಕಾಶವಿದೆ. ಐಸಿಐಸಿಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯು ಕಳೆದ ಜುಲೈನಲ್ಲಿ ಘೋಷಿಸಿದ್ದ ಫ್ಲೆಕ್ಸಿ ಕ್ಯಾಪ್ ಫಂಡ್ ಎನ್ಎಫ್ಒ ಮೂಲಕ ₹ 10,000 ಕೋಟಿ ಸಂಗ್ರಹಿಸಿದ್ದು ಈವರೆಗಿನ ಅತಿದೊಡ್ಡ ಮೊತ್ತ ಎನಿಸಿತ್ತು.
ಆದರೆ ಈ ಬಾರಿ ಎಸ್ಬಿಐ ಈ ದಾಖಲೆಯನ್ನು ಮೀರಿ ಹಣ ಸಂಗ್ರಹಿಸಿದೆ. ಮಾರುಕಟ್ಟೆಯಲ್ಲಿ ಏರಿಳಿತದ ಪ್ರಮಾಣ ಹೆಚ್ಚಾಗಿರುವುದು ಮತ್ತು ಚಿಲ್ಲರೆ ಹೂಡಿಕೆದಾರರು (Retail Investors) ಷೇರುಪೇಟೆ ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿರುವುದು ಎಸ್ಬಿಐ ಎಂಎಫ್ ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯ ವಿಪರೀತ ಹೊಯ್ದಾಟದ ನಡುವೆಯು ಎಸ್ಬಿಐ ಮ್ಯೂಚುವಲ್ಫಂಡ್ನ ಹಲವು ಯೋಜನೆಗಳು ಅತ್ಯುತ್ತಮ ಸಾಧನೆ ಮಾಡಿದ್ದವು. ಸಾಕಷ್ಟು ವೈಯಕ್ತಿಕ ಹಣಕಾಸು ತಜ್ಞರು ಎಸ್ಬಿಐ ಫಂಡ್ಗಳನ್ನು ಹೂಡಿಕೆಗೆ ಶಿಫಾರಸು ಮಾಡಲು ಆರಂಭಿಸಿದ್ದರು. ಇದೂ ಸಹ ನಿಧಿ ಸಂಗ್ರಹದ ಮೊತ್ತ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಈ ಯೋಜನೆಯ ಮೂಲಕ ಎಸ್ಬಿಐ ಎಂಎಫ್ ಗ್ರಾಹಕರಿಗೆ ಹೊಸದೊಂದು ಆಯ್ಕೆಯನ್ನು ನೀಡುತ್ತಿದೆ. ಅದರಂತೆ ಗ್ರಾಹಕರು ತಮ್ಮ ಹೂಡಿಕೆಯ ನಿರ್ದಿಷ್ಟ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಹೂಡಿಕೆ ಮೊತ್ತದ ಶೇ 0.5ರಷ್ಟನ್ನು ಪ್ರತಿ ತಿಂಗಳು, ಶೇ 3ರಷ್ಟನ್ನು ಪ್ರತಿ ಆರು ತಿಂಗಳಿಗೆ ಅಥವಾ ಶೇ 6ರಷ್ಟನ್ನು ಪ್ರತಿ ವರ್ಷ ಹಿಂಪಡೆಯಬಹುದಾಗಿದೆ. ಫಂಡ್ ಈ ಪ್ರಮಾಣದ ಪ್ರತಿಫಲ ನೀಡದಿದ್ದರೆ ಹೂಡಿಕೆದಾರರ ಅಸಲಿನಿಂದ ಈ ಮೊತ್ತವನ್ನು ಕಟಾವಣೆ ಮಾಡಿ, ಪಾವತಿಸಲಾಗುತ್ತದೆ.
ಈ ಬಾರಿ ಎನ್ಎಫ್ಒಗೆ ದೇಶದ ವಿವಿಧೆಡೆಯಿಂದ 3 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಅರ್ಜಿಗಳ ಸಂಖ್ಯೆ ಹೆಚ್ಚಾಗಿದ್ದರೂ ಹೂಡಿಕೆಯ ಮೊತ್ತ ಕಡಿಮೆಯಿತ್ತು ಎಂದು ಎಸ್ಬಿಐ ಎಂಎಫ್ನ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯ ಹೇಳಿಕೆಯನ್ನು ಮಿಂಟ್ ಜಾಲತಾಣ ಪ್ರಕಟಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ದೇಶಾದ್ಯಂತ ಹೊಂದಿರುವ 24,000ಕ್ಕೂ ಹೆಚ್ಚು ಶಾಖೆಗಳು ಸಹ ಈ ಮೊತ್ತದ ನಿಧಿ ಸಂಗ್ರಹವಾಗಲು ನೆರವಾಗಿದೆ. ಎಸ್ಬಿಐನ 14,000 ಶಾಖೆಗಳಲ್ಲಿ ಎನ್ಎಫ್ಒಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಮೂಲದಿಂದ ಸುಮಾರು ₹ 6000 ಕೋಟಿ ಸಂಗ್ರಹವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಎಸ್ಬಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಮನಿಕಂಟ್ರೋಲ್ ಜಾಲತಾಣ ವರದಿ ಮಾಡಿದೆ.
ಷೇರುಪೇಟೆಯು ಇದೀಗ ಎತ್ತರದಲ್ಲಿರುವುದರಿಂದ ಚಿಲ್ಲರೆ ಹೂಡಿಕೆದಾರರು ನೇರವಾಗಿ ಷೇರುಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಲಪತ್ರಗಳು ಮತ್ತು ಷೇರುಗಳ ನಡುವೆ ವಹಿವಾಟು ನಡೆಸುವ ಫಂಡ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಎಸ್ಬಿಐ ಹೂಡಿಕೆದಾರರ ಗಮನ ಸೆಳೆಯಿತು. ಪ್ರತಿ ಅರ್ಜಿಗಳಿಂದ ಸಂಗ್ರಹವಾದ ಮೊತ್ತ ಕಡಿಮೆಯಿದ್ದರೂ, ಗಮನಾರ್ಹ ಪ್ರಮಾಣದಲ್ಲಿ ಹೂಡಿಕೆದಾರರು ಆಸಕ್ತಿ ತೋರಿದ ಕಾರಣ ಹೊಸ ದಾಖಲೆ ಬರೆಯಲು ಸಾಧ್ಯವಾಯಿತು.
(SBI Balanced Advantage Fund Collects More than 13000 crore in NFO highest ever in Indian History)
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ ಎನ್ಎಫ್ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?
ಇದನ್ನೂ ಓದಿ: How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್