ಬೆಂಗಳೂರು: ಸ್ಟಾರ್ಟಪ್ ಎಜು-ಟೆಕ್ ಕಂಪನಿ ಅನ್ಅಕಾಡೆಮಿ (Unacademy) ಮತ್ತೆ 350 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿ ಈಗಾಗಲೇ ಎರಡು ಬಾರಿ ಉದ್ಯೋಗಿಗಳ ವಜಾ ಮಾಡಿತ್ತು. ಶೇಕಡಾ 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗೌರವ್ ಮುಂಜಲ್ ತಿಳಿಸಿದ್ದಾರೆ. ಜತೆಗೆ, ವಜಾಗೊಳಿಸಿರುವ ಉದ್ಯೋಗಿಗಳ ಕ್ಷಮೆ ಕೋರಿ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದಷ್ಟೇ, ಕಾರ್ಯನಿರ್ವಹಣೆ ಸುಧಾರಣೆ ಯೋಜನೆಯ ಅಂಗವಾಗಿ 150 ಮಂದಿ ಉದ್ಯೋಗಿಗಳನ್ನು ಕೆಲದಿಂದ ತೆಗೆದುಹಾಕಲಾಗಿತ್ತು. ಅದಕ್ಕೂ ಮುನ್ನ, ಏಪ್ರಿಲ್ನಲ್ಲಿ 800 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ಉದ್ಯೋಗಿಗಳು ಆಗ ವಜಾಗೊಂಡಿದ್ದರು.
ಪ್ರತಿಕೂಲ ಆರ್ಥಿಕ ಸ್ಥಿತಿಯಿಂದ ಕ್ರಮ; ಸಿಇಒ
ಸದ್ಯದ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯಿಂದಾಗಿ ಮತ್ತು ಕಂಪನಿಯ ನಿರ್ವಹಣಾ ವೆಚ್ಚ ಕಡಿಮೆ ಮಾಡುವುದಕ್ಕಾಗಿ ಉದ್ಯೋಗ ಕಡಿತಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗಿಗಳ ವಜಾಕ್ಕೆ ಇದುವೇ ಪ್ರಮುಖ ಕಾರಣ ಎಂದು ಗೌರವ್ ಮುಂಜಲ್ ಹೇಳಿದ್ದಾರೆ.
ಇನ್ನಷ್ಟು ಉದ್ಯೋಗ ಕಡಿತ ಇಲ್ಲ ಎಂದಿದ್ದ ಅನ್ಅಕಾಡೆಮಿ
ಎರಡು ಹಂತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ, ಇನ್ನಷ್ಟು ಉದ್ಯೋಗ ಕಡಿತ ಮಾಡುವುದಿಲ್ಲ ಎಂದು ಅನ್ಅಕಾಡೆಮಿ ಜುಲೈ ತಿಂಗಳಲ್ಲಿ ತಿಳಿಸಿತ್ತು. ಈ ವಿಚಾರವಾಗಿ ಉದ್ಯೋಗಿಗಳಿಗೆ ಭರವಸೆ ನೀಡಿ ಸಿಇಒ ಮುಂಜಲ್ ಇ-ಮೇಲ್ ಸಂದೇಶವನ್ನೂ ಕಳುಹಿಸಿದ್ದರು. ಈ ವಿಚಾರವಾಗಿ ಇದೀಗ ಅವರು ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ: ಬೈಜೂಸ್ನಿಂದ 2,500 ಉದ್ಯೋಗಿಗಳ ವಜಾ, ವೆಚ್ಚ ಕಡಿತಕ್ಕಾಗಿ ಕ್ರಮ ಎಂದ ಸಿಇಒ
ಈ ಹಿಂದೆ ಕೊಟ್ಟಿದ್ದ ಭರವಸೆಯನ್ನು ಮೀರಿದ್ದಕ್ಕಾಗಿ ಪ್ರತಿಯೊಬ್ಬರ ಕ್ಷಮೆ ಕೋರುತ್ತಿದ್ದೇನೆ. ಸದ್ಯದ ಆರ್ಥಿಕ ಪರಿಸ್ಥಿತಿ, ಮಾರುಕಟ್ಟೆ ಸವಾಲುಗಳು ನಮ್ಮನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿವೆ. ನಮ್ಮ ಉದ್ಯಮಕ್ಕೆ ಫಂಡಿಂಗ್ ಕೊರತೆಯೂ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಸಂಕಷ್ಟದಲ್ಲಿ ಬೈಜೂಸ್
ಮತ್ತೊಂದು ಎಜು-ಟೆಕ್ ಕಂಪನಿ ಬೈಜೂಸ್ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿಕೊಂಡಿದೆ. ಇತ್ತೀಚೆಗಷ್ಟೇ ಕಂಪನಿಯು ಕಾರ್ಯಾಚರಣೆ ವೆಚ್ಚ ಕಡಿತ ಮಾಡುವುದಕ್ಕಾಗಿ 2,500 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಉತ್ಪನ್ನ, ಕಂಟೆಂಟ್, ಮಾಧ್ಯಮ, ತಂತ್ರಜ್ಞಾನ ಸೇರಿದಂತೆ ಎಲ್ಲ ವಿಭಾಗಗಳಿಂದ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಬೈಜೂಸ್ ಹೇಳಿತ್ತು. ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೈಜು ರವೀಂದ್ರನ್ ಇತ್ತೀಚೆಗೆ ಉದ್ಯೋಗಿಗಳ ಕ್ಷಮೆ ಕೋರಿ ಇ-ಮೇಲ್ ಸಂದೇಶ ಕಳುಹಿಸಿದ್ದರು. ಇದರ ಬೆನ್ನಲ್ಲೇ, ಉದ್ಯೋಗ ಕಡಿತದ ಘೋಷಣೆ ಮಾಡಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 8 November 22