ಬಂದೂಕು ಹೊಂದಲು ನಮ್ಮ ದೇಶದಲ್ಲಿರುವ ನಿಯಮಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2022 | 7:57 AM

ಕಾಯ್ದೆ ಪ್ರಕಾರ ಬ್ರಿಟಿಷರಿಗೆ ನಿಷ್ಠಾವಂತರೆನಿಸಿದ ಭಾರತೀಯರಿಗೆ ಮಾತ್ರ ಬಂದೂಕು ಹೊಂದುವ ಅವಕಾಶವಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 12 ವರ್ಷಗಳ ನಂತರ ಅಂದರೆ 1959 ರಲ್ಲಿ ಭಾರತೀಯ ಶಸ್ತ್ರಾಸ್ತ್ರ ಮಸೂದೆಯನ್ನು ಅನುಷ್ಠಾನಗೊಳಿಸಲಾಯಿತು. ಈ ಕಾಯ್ದೆ ಅಡಿಯಲ್ಲಿ ಕೇವಲ ಪರವಾನಗಿ ಹೊಂದಿರುವ ವ್ಯಕ್ತಿಗೆ ಮಾತ್ರ ಬಂದೂಕು ಹೊಂದುವ ಅವಕಾಶವಿದೆ.

ಬಂದೂಕು ಹೊಂದಲು ನಮ್ಮ ದೇಶದಲ್ಲಿರುವ ನಿಯಮಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ
ಗನ್​ಗಳು
Follow us on

ಯುಎಸ್ ನಲ್ಲಿ ಪದೇಪದೇ ಬಂದೂಕಿನಿಂದ ಉದ್ಭವಿಸುವ ಹಿಂಸಾಕೃತ್ಯಗಳು ನಡೆಯುತ್ತಿರುವುದು ಮತ್ತು ಇಂಥ ಘಟನೆಗಳಲ್ಲಿ ಅಮಾಯಕರು ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಬಲಿಯಾಗುತ್ತಿರುವುದು ಕೇವಲ ಆ ದೇಶ ಮಾತ್ರವಲ್ಲ ವಿಶ್ವದ ಇತರ ರಾಷ್ಟ್ರಗಳನ್ನೂ ಆತಂಕಕ್ಕೀಡು ಮಾಡಿದೆ. ಗನ್ ಹಿಂಸಾಚಾರದಿಂದ ಅಮೇರಿಕ ತತ್ತರಿಸಿರುವ ಹಿನ್ನೆಲೆಯಲ್ಲೇ ನಮ್ಮ ದೇಶದಲ್ಲಿ ಯಾರು ಬಂದೂಕು, ಪಿಸ್ಟಲ್, ಗನ್, ರೈಫಲ್ ಮೊದಲಾದವುಗಳನ್ನು ಹೊಂದಬಹುದು, ನಮ್ಮ ದೇಶದ ಕಾನೂನು ಏನೆಲ್ಲ ನಿಬಂಧನೆಗಳನ್ನು ವಿಧಿಸಿದೆ ಅನ್ನೋದನ್ನು ತಿಳಿಯುವ ಅವಶ್ಯಕತೆ ನಮ್ಮೆಲ್ಲರಿಗಿದೆ. ಲೈವ್ ಲಾ ನಿರೂಪಕಿ ಬಂದೂಕುಗಳಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿರುವ ಕಾನೂನುಗಳ ಬಗ್ಗೆ ಸ್ಪಷ್ಟವಾಗಿ ಈ ವಿಡಿಯೋದಲ್ಲಿ ಹೇಳಿದ್ದಾರೆ.

ನಮ್ಮ ದೇಶದ ಬಂದೂಕು ಇತಿಹಾಸ ವಿಸ್ತೃತವಾಗಿದೆ. ಬ್ರಿಟಿಷರ ಆಡಳಿತ ಮತ್ತು ಗುಲಾಮಗಿರಿಯ ವಿರುದ್ಧ ರೊಚ್ಚಿಗೆದ್ದಿದ್ದ ಅವರ ಸೇನೆಯಲ್ಲಿದ್ದ ಭಾರತೀಯರು 1857ರಲ್ಲಿ ದಂಗೆಯೆದ್ದಾಗ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಆ ಯುದ್ಧದ ನಂತರ ಭೀತಿಗೊಳಗಾದ ಆಂಗ್ಲರು 1878 ರಲ್ಲಿ ಆರ್ಮ್ಸ್ ಌಕ್ಟ್​ ಅನ್ನು ಜಾರಿಗೆ ತಂದರು, ಕಾಯ್ದೆ ಪ್ರಕಾರ ಬ್ರಿಟಿಷರಿಗೆ ನಿಷ್ಠಾವಂತರೆನಿಸಿದ ಭಾರತೀಯರಿಗೆ ಮಾತ್ರ ಬಂದೂಕು ಹೊಂದುವ ಅವಕಾಶವಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 12 ವರ್ಷಗಳ ನಂತರ ಅಂದರೆ 1959 ರಲ್ಲಿ ಭಾರತೀಯ ಶಸ್ತ್ರಾಸ್ತ್ರ ಮಸೂದೆಯನ್ನು ಅನುಷ್ಠಾನಗೊಳಿಸಲಾಯಿತು. ಈ ಕಾಯ್ದೆ ಅಡಿಯಲ್ಲಿ ಕೇವಲ ಪರವಾನಗಿ ಹೊಂದಿರುವ ವ್ಯಕ್ತಿಗೆ ಮಾತ್ರ ಬಂದೂಕು ಹೊಂದುವ ಅವಕಾಶವಿದೆ.

ಬಂದೂಕು ಹೊಂದಲು ವ್ಯಕ್ತಿಯಲ್ಲಿ ಇರಬೇಕಾದ ಅರ್ಹತೆ

ಅವನ ವಯಸ್ಸು 21 ವರ್ಷಗಳಿಗಿಂತ ಜಾಸ್ತಿಯಿರಬೇಕು. ಬಂದೂಕು ಹೊಂದಲು ಲೈಸನ್ಸ್ ಗೆ ಅರ್ಜಿ ಸಲ್ಲಿಸುವ 5 ವರ್ಷಗಳಷ್ಟು ಮೊದಲು ಅವನು ಯಾವುದೇ ಅಪರಾಧ, ಹಿಂಸಾಕೃತ್ಯದಲ್ಲಿ ಭಾಗಿಯಾಗಿರಬಾರದು. ಅವನು ಮಾನಸಿಕವಾಗಿ ಸದೃಢನಾಗಿರಬೇಕು ಮತ್ತು ಸಮಾಜಕ್ಕೆ ಪೀಡೆ, ಕಳಂಕ ಅನಿಸಿಕೊಂಡಿರಬಾರದು.

ಕೇಂದ್ರ ಗೃಹ ಸಚಿವಾಲಯ ಬಂದೂಕು ಹೊಂದಲು ಪರವಾನಗಿ ನೀಡುವ ಪ್ರಾಧಿಕಾರವಾಗಿದೆ.

ಲೈಸೆನ್ಸ್ ನೀಡುವ ಪ್ರಕ್ರಿಯೆ

ವ್ಯಕ್ತಿಯೊಬ್ಬ ಬಂದೂಕು ಹೊಂದುವ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಬಳಿಕ ಗೃಹ ಸಚಿವಲಾಯ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಪತ್ರ ಬರೆದು ಸದರಿ ವ್ಯಕ್ತಿಯ ಬಗ್ಗೆ ಒಂದು ವರದಿ ಕಳಿಸುವಂತೆ ಸೂಚಿಸುತ್ತದೆ. ಪೊಲೀಸ್ ಇನ್ಸ್​​​​ ಪೆಕ್ಟರ್ ಅಥವಾ ಠಾಣೆಯ ಇನ್ ಚಾರ್ಜ್ ವ್ಯಕ್ತಿಯ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸುತ್ತದೆ. ಆ ರಿಪೋರ್ಟ್ ಆಧಾರದ ಮೇಲೆ ವ್ಯಕ್ತಿಗೆ ಗನ್ ಹೊಂದುವ ಪರವಾನಗಿ ಸಿಗುತ್ತದೆ.

ಒಬ್ಬ ವ್ಯಕ್ತಿ ಎಷ್ಟು ಆಯುಧಗಳನ್ನು ಹೊಂದಬಹುದು?

ಮೊದಲಿನ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಲೈಸನ್ಸ್ ಹೊಂದಿರುವ ಒಬ್ಬ ವ್ಯಕ್ತಿ ಗರಿಷ್ಟ 3 ಬಂದೂಕುಗಳನ್ನು ಹೊಂದಬಹುದಾಗಿತ್ತು. ಆದರೆ 2019 ರಲ್ಲಿ ಸದರಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಆಯುಧಗಳ ಸಂಖ್ಯೆಯನ್ನು 2ಕ್ಕೆ ಇಳಿಸಲಾಯಿತು.

ಮೊದಲು 3 ವರ್ಷ ಇದ್ದ ಲೈಸನ್ಸ್ ಅವಧಿಯನ್ನು ಈಗ 5 ವರ್ಷಕ್ಕೆ ಹೆಚ್ಚಿಸಲಾಗಿದೆ. ಪ್ರತಿ 5 ವರ್ಷಗಳಿಗೊಮ್ಮೆ ಅದನ್ನು ನವೀಕರಿಸಬೇಕಾಗುತ್ತದೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದುವುದು, ವ್ಯಾಪಾರ ನಡೆಸುವುದು ಅಪರಾಧವೆನಿಸಿಕೊಳ್ಳುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುತ್ತದೆ.

ಆಯುಧ ಇಟ್ಟುಕೊಳ್ಳುವ ಪರವಾನಗಿ ಹೊಂದಿದವರಿಂದ ಸಮಾಜಕ್ಕೆ ಯಾವುದೇ ಕಂಟಕ ಎದುರಾಗದಂತಿರಲು ಮತ್ತು ಶಾಂತಿ ನೆಲೆಗೊಂಡಿರಲು ಗೃಹ ಸಚಿವಾಲಯ ಆಗಾಗ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿರುತ್ತದೆ.

ಹಾಗೆಯೇ, ಬಂದೂಕು ತಯಾರಿಸಬೇಕಾದರೆ, ಅದರ ಹೆಸರು, ನಂಬರ್, ಸ್ಟ್ಯಾಂಪ್ ಮತ್ತು ಐಡೆಂಟಿಫಿಕೇಶನ್ ಹೊಂದಿರಬೇಕಾಗುತ್ತದೆ. ಇವೆಲ್ಲವನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸ್ಪಷ್ಟಪಡಿಸದೆ ಹೋದರೆ ಅದು ಅಕ್ರಮ ಅನಿಸಿಕೊಳ್ಳುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ 1 ರಿಂದ 3 ವರ್ಷಗಳ ಸೆರೆವಾಸ ಅನುಭವಿಸಬೇಕಾಗುತ್ತದೆ.

ಅಕ್ರಮವಾಗಿ ಬಂದೂಕು ತಯಾರಿಕೆ, ರಿಪೇರಿ, ಸಾಗಾಣಿಕೆ ಮೊದಲಾದವುಗಳಲ್ಲಿ ತೊಡಗಿದರೆ 7 ವರ್ಷ ಶಿಕ್ಷೆ ನಿಶ್ಚಿತ. ಇದನ್ನೂ ಜೀವಾವಧಿಗೂ ವಿಸ್ತರಿಸಬಹುದಾಗಿದೆ. ಇದಲ್ಲದೆ ಅಕ್ರಮದಲ್ಲಿ ತೊಡಗುವ ವ್ಯಕ್ತಿ ಜುಲ್ಮಾನೆಯನ್ನೂ ಭರಿಸಬೇಕಾಗುತ್ತದೆ.

ನೀವು ಕ್ರೀಡಾಪಟುವಾಗಿದ್ದರೆ (ಶೂಟಿಂಗ್) ಗನ್ ಹೊಂದುವ ಅವಕಾಶವಿದೆ ಮತ್ತು ವ್ಯವಸಾಯದಲ್ಲಿ ತೊಡಗಿದವರಿಗೆ ಪಶುಪಕ್ಷಿಗಳಿಂದ ಅಪಾಯವಿದ್ದರೆ ಅವರು ಸಹ ಗನ್ ಹೊಂದಬಹುದಾಗಿದೆ.

2016 ರ ವರದಿಯೊಂದರ ಪ್ರಕಾರ ಭಾರತದಲ್ಲಿ 97 ಬಂದೂಕು ತಯಾರಿಸುವ ಕಾರ್ಖಾನೆಗಳಿವೆ. ಪಾಟ್ನಾದ ಮುಂಗೇರ್ ಎಂಬಲ್ಲಿ ಬ್ರಿಟಿಷರ ಜಮಾನಾದಿಂದ ಬಂದೂಕು ತಯಾರಿಸುವ ಕಾರ್ಖಾನೆಯಿದೆ. ಸ್ವಾತಂತ್ರ್ಯ ಸಿಕ್ಕ ನಂತರ 37 ಸಂಸ್ಥೆಗಳಿಗೆ ಬಂದೂಕು ತಯಾರಿಕಾ ಘಟಕ ಸ್ಥಾಪಿಸಲು ಪರವಾನಗಿ ನೀಡಲಾಗಿದೆ.

ಮುಂಗೇರ್ ಸುತ್ತಮುತ್ತ ಈಗಲೂ ಅಕ್ರಮವಾಗಿ ಬಂದೂಕು ತಯಾರಿಸುವ ಹಲವಾರು ಘಟಕಗಳಿವೆ.