ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ; ಮೀನುಗಳಿಂದ 16 ಕೋಟಿ ರೂ. ಆದಾಯ ಗಳಿಕೆ

ಸಿಹಿ ನೀರಿನಲ್ಲಿ ಬೆಳೆಯುವ ಮೀನುಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಾಗಲಕೋಟೆಯ ಮೀನುಗಳಿಗೆ ಕೋಲ್ಕತ್ತಾ‌ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಿಗೆ ಜಿಲ್ಲೆಯಿಂದ ಮೀನು ರಫ್ತಾಗುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 16,700 ಟನ್ ಮೀನು ಉತ್ಪಾದನೆ ಮಾಡಲಾಗಿದೆ.

ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ; ಮೀನುಗಳಿಂದ 16 ಕೋಟಿ ರೂ. ಆದಾಯ ಗಳಿಕೆ
ಮೀನುಗಳು
TV9kannada Web Team

| Edited By: preethi shettigar

Mar 24, 2022 | 4:32 PM

ಬಾಗಲಕೋಟೆ: ಮೀನುಗಾರಿಕೆ ಅಂದರೆ ನಮಗೆ ನೆನಪಾಗೋದೆ ಕರಾವಳಿ ಭಾಗ. ಕರಾವಳಿ ಭಾಗದ ಬಗೆ ಬಗೆಯ ಮೀನುಗಳನ್ನು ಕಂಡರೆ ಮೀನುಪ್ರಿಯರ ಬಾಯಲ್ಲಿ ನೀರು ಬರುತ್ತೆ. ಆದರೆ ಬಯಲು ಸೀಮೆಯ ಅದೊಂದು ಜಿಲ್ಲೆಯಲ್ಲಿಯೂ ಮೀನುಗಾರಿಕೆ(Fishing) ಪ್ರಮುಖ ಉದ್ಯಮವಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಮೀನುಗಳಿಗೆ (Fish) ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಈಗ ಬೇಡಿಕೆ (Demand) ಹೆಚ್ಚಾಗುತ್ತಿದ್ದು, ಪ್ರತಿವರ್ಷ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಹಾಗಾದ್ರೆ ಬಯಲು ಸೀಮೆಯಲ್ಲಿ ಮೀನುಗಾರಿಕೆ ಸಾಧ್ಯವೇ? ಅಲ್ಲಿನ ಮೀನುಗಾರಿಕೆ ಹೇಗಿದೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೀನುಗಾರಿಕೆ ಅಂದ್ರೆ ನಮಗೆಲ್ಲ ಥಟ್ ಅಂತಾ ನೆನಪಾಗೋದೆ ಕರಾವಳಿ ಭಾಗ. ಸಮುದ್ರ ತೀರದಲ್ಲಿ ಅತ್ಯಂತ ಹೆಚ್ಚಾಗಿ ಮೀನುಗಾರಿಕೆ ಉದ್ಯಮ ಮಾಡಲಾಗುತ್ತದೆ. ಆದರೆ ಇದೇ ಉದ್ಯಮ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗುತ್ತಿದೆ. ಆದರೆ ಈಗ ಬಯಲು ಸೀಮೆಯ ನಾಡು ಬಾಗಲಕೋಟೆ ಜಿಲ್ಲೆಯಲ್ಲೂ ಮೀನುಗಾರಿಕೆ ವ್ಯಾಪಕವಾಗಿ ಬೆಳೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿರುವ ಜಲಾಶಯಗಳು. ಆಲಮಟ್ಟಿ ಜಲಾಶಯದ ಶೇಕಡಾ 60 ರಷ್ಟು ಭೂಭಾಗ ಹಾಗೂ ಬಸವಸಾಗರ ಜಲಾಶಯದ ಶೇಕಡಾ 30 ರಷ್ಟು ಭೂಭಾಗ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಈ ಹಿನ್ನೀರಿನ ಭಾಗದಲ್ಲಿ ಹಲವು ವರ್ಷಗಳಿಂದ ಮೀನುಗಾರಿಕೆ ಮಾಡಿಕೊಂಡು ಬರಲಾಗುತ್ತಿದೆ.‌

ಸಿಹಿ ನೀರಿನಲ್ಲಿ ಬೆಳೆಯುವ ಮೀನುಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಾಗಲಕೋಟೆಯ ಮೀನುಗಳಿಗೆ ಕೋಲ್ಕತ್ತಾ‌ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಿಗೆ ಜಿಲ್ಲೆಯಿಂದ ಮೀನು ರಫ್ತಾಗುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 16,700 ಟನ್ ಮೀನು ಉತ್ಪಾದನೆ ಮಾಡಲಾಗಿದೆ. ಇದರಿಂದ ಸುಮಾರು 16 ಕೋಟಿಯಷ್ಟು‌ ಜಿಲ್ಲೆಗೆ ಆದಾಯ ಬಂದಿದೆ ಎಂದು ಬಾಗಲಕೋಟೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಭಾಂಗಿ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕಾಟ್ಲಾ, ಪಾಂಪ್ಲೆಟ್, ಕಾಗೆ, ರೂಪಚಂದ‌‌, ಮುಚಾಲ, ಹದ್ದು, ಹಾವಮೀನು, ತಾಂಬ್ರಿ, ಟೆಂಗ್ರಾ‌‌‌ ಜಾತಿಯ ಮೀನುಗಳನ್ನು ಬೆಳೆಸಲಾಗುತ್ತದೆ. ಇಲ್ಲಿ ಸಮುದ್ರದಂತೆ ಉಪ್ಪು ನೀರಲ್ಲದೆ ಸಿಹಿ ನೀರು ಆಗಿರೋದರಿಂದ ಮೀನು ಬಹಳ  ಟೇಸ್ಟಿ ಆಗಿರುತ್ತವೆ. ಹೀಗಾಗಿ ಈ ಭಾಗದ ಮೀನುಗಳಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ. ಬಾಗಲಕೋಟೆ ಜಿಲ್ಲೆಯಲ್ಲಿ ಉತ್ಪಾದನೆ ಆಗುವ ಶೇಕಡಾ 50 ರಷ್ಟು ಮೀನು ನಮ್ಮ ರಾಜ್ಯದಲ್ಲಿಯೇ ಮಾರಾಟವಾದರೆ, ಇನ್ನುಳಿದ ಮೀನು ಕೋಲ್ಕತ್ತಾ ಸೇರಿ ಹೊರ ರಾಜ್ಯಗಳಿಗೆ ಹೋಗುತ್ತವೆ. ಮೀನುಗಾರಿಕೆ ಹೆಚ್ಚಾಗುತ್ತಿರುವ ಕಾರಣದಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಮೀನು ಉತ್ಪಾದಕರ ಸಂಸ್ಥೆಗಳನ್ನು ಕೂಡಾ ತೆರೆಯಲಾಗಿದೆ.

fishing

ಹಿನ್ನೀರಿನಲ್ಲಿ ಮೀನುಗಾರಿಕೆ

ಆಲಮಟ್ಟಿ ಜಲಾಶಯ ಭಾಗದಲ್ಲಿ ಬರುವ ಜಮಖಂಡಿಯಲ್ಲಿ ಒಂದು ಸಂಸ್ಥೆ ಹಾಗೂ ನಾರಾಯಪುರ ಜಲಾಶಯ ವ್ಯಾಪ್ತಿಗೆ ಬರುವ ಹುನಗುಂದದಲ್ಲಿ ಒಂದು ಸಂಸ್ಥೆ ತೆರೆಯಲಾಗಿದೆ. ಈ ಎರಡೂ ಸಂಸ್ಥೆಗಳಿಗೆ ಬೇಕಾದ ಅಗತ್ಯ ಸಹಾಯ, ಸಹಕಾರವನ್ನು ಜಿಲ್ಲೆಯ ಮೀನುಗಾರಿಕೆ ಇಲಾಖೆ ಕೊಡುತ್ತಿದೆ. ಇಷ್ಟೆಲ್ಲಾ ಲಾಭದಾಯ ಮೀನುಗಾರಿಕೆ ಇದ್ರೂ ಇಲ್ಲಿನ ಮೀನುಗಾರರಿಗೆ ಯಾವುದೇ ಸೂಕ್ತ ಸೌಲಭ್ಯಗಳು ಸಿಗ್ತಿಲ್ಲ ಅನ್ನೋ ಆರೋಪಗಳು ಇವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 4687 ಕುಟುಂಬಗಳು ಮೀನುಗಾರಿಕೆ ಮಾಡುತ್ತಿವೆ. ಈ ಕುಟುಂಬಗಳಿಗೆ ಇಲಾಖೆಯಿಂದ ಮೀನುಗಾರಿಕೆ ಬೇಕಾದ ದೋಣಿ, ಬಲೆ, ಲೈಪ್ ಜಾಕೆಟ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಆಗುತ್ತಿಲ್ಲ. ಅಲ್ದೇ ಸರ್ಕಾರದಿಂದ ಮೀನುಗಾರಿಕೆ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳ ಸಿಗ್ತಿಲ್ಲ. ಸರ್ಕಾರ ಮೀನುಗಾರಿಕೆ ಅಂದ್ರೆ ಕೇವಲ ಕರಾವಳಿ ಭಾಗ ಅಂತ ಅಂದುಕೊಂಡಿದೆ. ಇಲ್ಲಿ ಇಷ್ಟೆಲ್ಲ ಅವಕಾಶ, ಆದಾಯ ಬರ್ತಿದ್ರೂ ಇಲ್ಲಿನ ಮೀನುಗಾರರ ಅಭಿವೃದ್ಧಿ ಕಡೆಗೆ ಚಿಂತಿಸುತ್ತಿಲ್ಲ. ಸರಕಾರ ಮೀನುಗಾರರಿಗೆ ಬಲೆ, ತೆಪ್ಪ, ಲೈಫ್​ ಜಾಕೆಟ್, ಸಾಲ ಸೌಲಭ್ಯ, ವಸತಿ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ: ಗಂಡನ ಮೀನುಗಾರಿಕೆ ಅಭ್ಯಾಸಕ್ಕೆ ಬೇಸತ್ತ ಮಹಿಳೆ: ಪತಿಯನ್ನೇ ಆನ್ಲೈನ್​ನಲ್ಲಿ ಹರಾಜಿಗಿಟ್ಟು ಮಾರಲು ಮುಂದಾದ ಪತ್ನಿ

ಉತ್ತಮ ಗುಣಮಟ್ಟದ ತಾಜಾ ಮೀನು ಮತ್ತು ಮೀನಿನ ಖಾದ್ಯಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ: ಎಸ್.ಅಂಗಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada