ಕರ್ನಾಟಕದಲ್ಲಿ ಶೇ 26 ರಷ್ಟು ಭರ್ತಿಯಾಗದೆ ಉಳಿದಿವೆ ಎಂಜಿನಿಯರಿಂಗ್ ಸೀಟುಗಳು!

ಕರ್ನಾಟಕದಲ್ಲಿ ಯುಜಿಸಿಇಟಿ ಮೂಲಕ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಸೀಟುಗಳು ಭರ್ತಿಯಾಗದೆ ಉಳಿಯುವ ಪ್ರಮಾಣ ಈ ವರ್ಷ ಶೇ 26.35ಕ್ಕೆ ಏರಿಕೆಯಾಗಿದೆ. 94,318 ಸೀಟುಗಳ ಪೈಕಿ 24,856 ಸೀಟುಗಳು ಹಂಚಿಕೆಯಾಗಿಲ್ಲ. ಇದಕ್ಕೆ ಕಾರಣವೇನು? ಶಿಕ್ಷಣ ತಜ್ಞರು ಹೇಳುವುದೇನು? ಕರ್ನಾಟಕ ಸರ್ಕಾರ ಹೇಳುವುದೇನು? ಇಲ್ಲಿದೆ ಮಾಹಿತಿ.

ಕರ್ನಾಟಕದಲ್ಲಿ ಶೇ 26 ರಷ್ಟು ಭರ್ತಿಯಾಗದೆ ಉಳಿದಿವೆ ಎಂಜಿನಿಯರಿಂಗ್ ಸೀಟುಗಳು!
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
Image Credit source: Wikimedia Commons

Updated on: Sep 21, 2026 | 10:21 AM

ಮುಖ್ಯಾಂಶಗಳು

  • ಎಂಜಿನಿಯರಿಂಗ್ ಸೀಟುಗಳು ಬಾಕಿ ಉಳಿಯುವ ಪ್ರಮಾಣ ಏರಿಕೆ
  • ಈ ವರ್ಷ 24,856 ಸೀಟುಗಳು ಹಂಚಿಕೆಯಾಗದೆ ಬಾಕಿ
  • ಎಂಜಿನಿಯರಿಂಗ್​ನಲ್ಲಿ ಬೇಡಿಕೆ ಆಧಾರಿತ ಪಠ್ಯಕ್ರಮಕ್ಕೆ ಸರ್ಕಾರ ಚಿಂತನೆ

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕದಲ್ಲಿ ಯುಜಿಸಿಇಟಿ (UGCET) ಮೂಲಕ ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಕೋರ್ಸ್‌ಗಳ ಸೀಟುಗಳು ಭರ್ತಿಯಾಗದೆ ಉಳಿಯುವ ಪ್ರಮಾಣ ಈ ವರ್ಷ ಗಣನೀಯವಾಗಿ ಏರಿಕೆಯಾಗಿದೆ. 2025ರಲ್ಲಿ ಶೇ 18.12ರಷ್ಟು ಸೀಟುಗಳು ಹಂಚಿಕೆಯಾಗದೆ ಉಳಿದಿದ್ದರೆ, 2026ರಲ್ಲಿ ಈ ಪ್ರಮಾಣ ಶೇ 26.35ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಕೆಇಇಎ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್‌ಗೆ ಒಟ್ಟು 85,020 ಸೀಟುಗಳು ಲಭ್ಯವಿದ್ದವು. ಈ ಪೈಕಿ 69,617 ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, 15,403 ಸೀಟುಗಳು ಭರ್ತಿಯಾಗದೆ ಉಳಿದಿದ್ದವು. 2026ರಲ್ಲಿ ಒಟ್ಟು ಲಭ್ಯ ಸೀಟುಗಳ ಸಂಖ್ಯೆ 94,318ಕ್ಕೆ ಏರಿಕೆಯಾಗಿದೆ. ಆದರೆ, ಹಂಚಿಕೆಯಾಗಿರುವ ಸೀಟುಗಳ ಸಂಖ್ಯೆ 69,462ಕ್ಕೆ ಇಳಿದಿದ್ದು, 24,856 ಸೀಟುಗಳು ಖಾಲಿ ಉಳಿದಿವೆ.

ಎಂಜಿನಿಯರಿಂಗ್ ಸೀಟುಗಳು ಬಾಕಿ ಉಳಿಯಲು ಕಾರಣ ಏನಿರಬಹುದು?

ಸೀಟುಗಳು ಹಂಚಿಕೆಯಾಗದೇ ಇರುವುದರ ಜತೆಗೆ ಸೀಟುಗಳ ಸಂಖ್ಯೆ ಹೆಚ್ಚಾಗಿರುವುದನ್ನೂ ಗಮನಿಸಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಉಪಕುಲಪತಿ ಡಾ. ಎಸ್. ವಿದ್ಯಾಶಂಕರ್, ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಕನಿಷ್ಠ 10 ಹೊಸ ಎಂಜಿನಿಯರಿಂಗ್ ಕಾಲೇಜುಗಳು ಸೇರ್ಪಡೆಯಾಗಿದ್ದು, ಸಹಜವಾಗಿಯೇ ಸೀಟುಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಇಳಿಕೆ!

ಎಂಜಿನಿಯರಿಂಗ್‌ನತ್ತ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂಬ ವಾದ ಸರಿಯಲ್ಲ. ಒಟ್ಟಾರೆಯಾಗಿ ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಇಳಿಕೆಯಾಗಿದೆ ಎಂದು ಡಾ. ವಿದ್ಯಾಶಂಕರ್ ಹೇಳಿದ್ದಾರೆ. ಆದರೆ, ಸೀಟುಗಳ ಸಂಖ್ಯೆ ಹೆಚ್ಚಳ ಮಾತ್ರವೇ ಖಾಲಿ ಸೀಟುಗಳ ಏರಿಕೆಗೆ ಕಾರಣವಲ್ಲ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. 2025ಕ್ಕೆ ಹೋಲಿಸಿದರೆ 2026ರಲ್ಲಿ 9,298 ಹೆಚ್ಚುವರಿ ಸೀಟುಗಳು ಲಭ್ಯವಾಗಿದ್ದರೂ, ಹಂಚಿಕೆಯಾಗಿರುವ ಸೀಟುಗಳ ಸಂಖ್ಯೆ 155ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

ಎಐ ಪ್ರಭಾವದ ಬಗ್ಗೆಯೂ ಚರ್ಚೆ

ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗದ ಬದಲಾಗುತ್ತಿರುವ ಅಗತ್ಯತೆಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಉದ್ಯೋಗಗಳ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪ್ರತಿಕ್ರಿಯಿಸಿದ್ದು, ಖಾಲಿ ಉಳಿಯುತ್ತಿರುವ ಸೀಟುಗಳ ಪ್ರವೃತ್ತಿಯನ್ನು ಸರ್ಕಾರ ಗಮನಿಸುತ್ತಿದೆ. ಅಂಕಿಅಂಶಗಳನ್ನು ಕಳವಳದಿಂದ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಪಿ 2,314 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ಯಶಸ್ವಿ: ಶೇ. 80ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರು!

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಆಧಾರಿತ ಪಠ್ಯಕ್ರಮ ಪರಿಚಯಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಪಠ್ಯಕ್ರಮದಲ್ಲಿನ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ. ಕೈಗಾರಿಕಾ ಕ್ಷೇತ್ರದ ಬೇಡಿಕೆಗಳು ವೇಗವಾಗಿ ಬದಲಾಗುತ್ತಿರುವುದರಿಂದ ಸ್ಥಿರವಾದ ಮಾರ್ಗಸೂಚಿ ರೂಪಿಸುವುದು ಕಷ್ಟಕರವಾಗಿದೆ ಎಂದೂ ಶಾಲಿನಿ ರಜನೀಶ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us