ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು, 10 ಇಲಾಖೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಟಿ
ರಾಜ್ಯದಲ್ಲಿ 18 ವರ್ಷ ತುಂಬುವುದಕ್ಕಿಂತ ಮೊದಲೆ ಬಾಲಕಿಯರು ಗರ್ಭ ಧರಿಸುತ್ತಿದ್ದು, ಇದು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಾಯ್ತನದ ವಯಸ್ಸಿಗೂ ಮೊದಲೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಇದ್ದಾರೆ.
ಬೆಂಗಳೂರು, ಏಪ್ರಿಲ್ 22: ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ (Underage Pregnancies) ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಾಯ್ತನದ ವಯಸ್ಸಿಗೂ ಮೊದಲೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದ್ದಂತೆ ಹತ್ತು ಇಲಾಖೆಗೆ ಚಾಟಿ ಬೀಸಿದ್ದಾರೆ.
ಕೆಲವು ತಂದೆ-ತಾಯಿಗಳಿಗೆ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಅನ್ನೋ ಭಾವನೆ ಇರುತ್ತೆ. ಇನ್ನು ಕೆಲವರಿಗೆ ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು ಅತ್ಯಾಚಾರ ಹಾಗೂ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ಗರ್ಭಿಣಿಯರು ಸಂಖ್ಯೆ ಏರಿಕೆಗೆ ಕಾರಣವಾಗುತ್ತಿದ್ದು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 18 ವರ್ಷ ತುಂಬುವುದಕ್ಕಿಂತ ಮೊದಲೆ ಗರ್ಭಿಣಿ ಆಗುತ್ತಿದ್ದು ಬಾಲಕಿಯರು ಹಲವು ದೈಹಿಕ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಹೀಗಾಗಿ ಮುಖ್ಯಮಂತ್ರಿಗಳು ಎಲ್ಲ ಇಲಾಖೆಗಳಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಪ್ರೇಮ ವಿವಾಹ, ಬಾಲ್ಯ ವಿವಾಹ, ಲಿವ್ ಇನ್ ರಿಲೇಶನ್ ಶಿಫ್, ಲೈಂಗಿಕ ದೌರ್ಜನ್ಯ, ಲೈಂಗಿಕ ತಿಳವಳಿಕೆ ಕೊರತೆ, ಜೀವನ ಶೈಲಿ ಸೇರಿದ್ದಂತೆ ನಾನಾ ಕಾರಣಗಳಿಂದ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಬಾಲ ಗರ್ಭಿಣಿಯರು ಸಂಖ್ಯೆ 28,657 ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 2023 ಜನವರಿಯಿಂದ ನವೆಂಬರ್ ತಿಂಗಳವರೆಗೆ ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಕಂಡು ಬಂದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿನಿ ಪ್ರಕರಣ ಬಳಿಕ ಸರ್ಕಾರ ಅಲರ್ಟ್ ಆಗಿದ್ದುನಿರಂತರವಾಗಿ ಏರಿಕೆಯಾಗುತ್ತಿರುವ ಬಾಲ ಗರ್ಣಿಯರ ಸಂಖ್ಯೆ ತಡೆಯಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಆತಂಕಕಾರಿ ಬೆಳವಣಿಗೆ: ಗಡಿ ಜಿಲ್ಲೆ ಕೋಲಾರದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ನೂರರತ್ತ! ಕಾರಣವೇನು
ಸಿಎಂ ಸೂಚನೆಯಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಗೃಹ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದ್ದಂತೆ ವಿವಿಧ ಇಲಾಖೆಗಳು ಕೇಂದ್ರ ಕಾರ್ಯಪಡೆ ರಚನೆಗೆ ಮುಂದಾಗಿದೆ. ತುರ್ತಾಗಿ ಈ ಬಗ್ಗೆ ಸಭೆ ನಡೆಸಿ ಕ್ರಮವಹಿಸಿ ವರದಿ ನೀಡುವಂತೆ ಸರ್ಕಾರ ಸೂಚಿಸಿದ್ದು ಬಾಲ ಗರ್ಭಿಣಿಯರ ಪ್ರಮಾಣ ನಿಯಂತ್ರಣಕ್ಕೆ ಸರ್ಕಾರ ಕಾನೂನು ಬದಲಾವಣೆಯ ಬಗ್ಗೆಯೂ ಚಿತಂನೆ ಶುರು ಮಾಡಿದೆ. ಈಗಾಗಲೇ ಹಲವು ಇಲಾಖೆಗಳು ಈ ಬಗ್ಗೆ ಸಭೆ ಮಾಡಿದ್ದು ಕೇಂದ್ರ ಕಾರ್ಯಪಡೆ ರಚನೆಗೆ ಮುಂದಾಗಿವೆ. ತುರ್ತು ಕ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ಸರ್ಕಾರಕ್ಕೆ ಒತ್ತಾಯ ಮಾಡಿದೆ.
ಬಾಲಕಿಯರು ಗರ್ಭ ಧರಿಸಿದ ವೇಳೆ ಗರ್ಭಪಾತ, ಅವಧಿ ಪೂರ್ವ ಪ್ರಸವ, ದೈಹಿಕ ನ್ಯೂನತೆ ಹೊಂದಿರುವ ಶಿಶು ಜನನ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಬಾಲ್ಯದಲ್ಲೇ ಗರ್ಭ ಧರಿಸಿದರೆ ಬಾಲಕಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಕಂಡುಬರುತ್ತಿವೆ ಅಂತ ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ಇಂದಿರಾ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಾಲಕಿ ಗರ್ಭಿಣಿಯಾಗುವುದು ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇದ್ದು, ಬಾಲ್ಯ ವಿವಾಹ ಹಾಗೂ ಇನ್ನಿತರ ಕಾರಣಗಳಿಂದ ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸುವ ಪ್ರಕರಣಗಳು ಸಾಮಾಜಿಕ ಪಿಡುಗಾಗಿ ಪರಿವರ್ತನೆಯಾಗಿದೆ. ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು ಸರ್ಕಾರ ಈ ಬಗ್ಗೆ ತ್ವರೀತವಾಗಿ ಕ್ರಮಕ್ಕೆ ಮುಂದಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ