ಗದಗ, ಡಿಸೆಂಬರ್ 08: ಆ ಬಾಲಕ ಸಂಬಂಧಿಕರ ಮನೆಗೆ ಶುಭ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಬೆಳಗ್ಗೆ ಎದ್ದು ಆಟವಾಡಲು ಅಂಗಳಕ್ಕೆ ಬಂದಿದ್ದಾನೆ. ಆದರೆ ರಕ್ಕಸ ಬೀದಿ ನಾಯಿ (dog) ಮುದ್ದಾದ ಕಂದನ ಮೇಲೆ ಡೆಡ್ಲಿ ದಾಳಿ ಮಾಡಿ ತುಟಿ, ಗಲ್ಲ, ಹಣೆ ಕಚ್ಚಿದೆ. ಸ್ಥಳೀಯರು ನೋಡು ನೋಡುತ್ತಿದ್ದಂತೆ ಬಾಲಕನನ್ನು ಹರಿದು ತಿಂದಿದೆ. ನಾಯಿ ದಾಳಿಗೆ ಬಾಲಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಪುರಸಭೆ ನಿರ್ಲಕ್ಷ್ಯದ ವಿರುದ್ಧ ಪಟ್ಟಣದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂದನ ಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುವಂತಾಗಿದೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅಂಬಾಭವನಿ ನಗರದಲ್ಲಿ 3 ವರ್ಷದ ರುದ್ರಪ್ರಿಯ ದೊಡ್ಡಕಾಶಿ ಎಂಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ಅಟ್ಟಹಾಸ ಮೆರೆದಿದೆ. ಬಾಲಕ ರುದ್ರಪ್ರಿಯ ದೊಡ್ಡಕಾಶಿ ಮೂಲತಃ ನರಗುಂದ ಪಟ್ಟಣದ ನಿವಾಸಿ. ಮುಂಡರಗಿಯ ಸಂಬಂಧಿಕರ ಮನೆಗೆ ಕೆನ್ಯೆ ಕೊಡುವ ಕಾರ್ಯಕ್ಕೆ ದೊಡ್ಡಕಾಶಿ ಕುಟುಂಬ ಆಗಮಿಸಿತ್ತು.
ಇದನ್ನೂ ಓದಿ: ಕಚ್ಚಿತ್ತೆಂದು ಕೋಲಿನಿಂದ ಹೊಡೆದಿದ್ದಕ್ಕೆ ಶ್ವಾನ ಸಾವು: ಮಾಲೀಕನ ವಿರುದ್ಧ ಎಫ್ಐಆರ್
ವೀರೆಶ್ ದೊಡ್ಡಕಾಶಿ ಮಗ ರುದ್ರಪ್ರಿಯ ಎಂಬ 3 ವರ್ಷದ ಬಾಲಕ ಇಂದು ಬೆಳಗ್ಗೆ ಮನೆ ಮುಂದೆ ಆಟವಾಡುತ್ತಿರುವ ವೇಳೆ ಏಕಾಏಕಿ ಬೀದಿ ನಾಯಿ ಡೆಡ್ಲಿ ಅಟ್ಯಾಕ್ ಮಾಡಿದೆ. ಪುಟ್ಟ ಬಾಲಕನಿಗೆ ಮನ ಬಂದಂತೆ ಕಚ್ಚಿ ಕಚ್ವಿ ಗಾಯಗೊಳಿಸಿದೆ. ನಾಯಿ ಅಟ್ಟಹಾಸಕ್ಕೆ ತುಟಿ ಹರಿದಿದ್ದು ಹಲ್ಲುಗಳು ಕಿತ್ತು ಬಂದಿವೆ. ಬಾಲಕನ ಮೇಲೆ ಅಟ್ಯಾಕ್ ನೋಡಿ ತಕ್ಷಣ ಸ್ಥಳೀಯರು ನಾಯಿಂದ ಬಾಲಕನನ್ನು ಬಚಾವ್ ಮಾಡಿದ್ದಾರೆ.
ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ರುದ್ರಪ್ರೀಯನ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ರುದ್ರಪ್ರಿಯನಿಗೆ ಬಾಯಿ, ಕಣ್ಣು, ತಲೆ, ಕೈ ಗಂಭೀರವಾಗಿದೆ. ಸಾಕಷ್ಟು ರಕ್ತಸ್ರಾವವಾಗಿ ಮಗುವಿಗೆ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಬಾಲಕನಿಗೆ ಜಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್
ಇನ್ನು ಮುಂಡರಗಿಯಲ್ಲಿ ಬೀದಿನಾಯಿಗಳ ದಾಳಿ ಇದೇ ಮೊದಲೇನಲ್ಲ. ಈಗಾಗಲೇ 8 ರಿಂದ 10 ಮಕ್ಕಳ ಮೇಲೆ ಶ್ವಾನಗಳು ದಾಳಿ ಮಾಡಿದೆ. ಸಂಬಂಧಪಟ್ಟ ಪುರಸಭೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 20ನೇ ವಾರ್ಡ ಅಷ್ಟೇ ಅಲ್ಲದೇ ಇಡೀ ಮುಂಡರಗಿ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾದರೆ ಸಾಕು ವಯೋವೃದ್ಧರು, ಮಕ್ಕಳು, ಮಹಿಳೆಯರು ಹೊರಬಾರದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನಾದರೂ ಈ ಬಾಲಕನಿಗೆ ಬಂದ ಸ್ಥಿತಿ ಬೇರೆಯವರಿಗೆ ಬಾರಬಾರದೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಘಟನೆಯನ್ನು ಟಿವಿ9 ವರದಿ ಮಾಡಿದ ಬಳಿಕ ಎಚ್ಚೆತ್ತ ಮುಂಡರಗಿ ಪುರಸಭೆ ಅಧಿಕಾರಿಗಳು, ಬೀದಿ ನಾಯಿಗಳನ್ನ ಹಿಡಿಯುವುದಕ್ಕೆ ಮುಂದಾದರು. ಈಗಾಗಲೇ 40ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸಿಬ್ಬಂದಿಗಳು ಸೆರೆಹಿಡಿದಿದ್ದಾರೆ ಎಂದು ಟಿವಿ9ಗೆ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾಹಿತಿ ನೀಡಿದ್ದಾರೆ. ರುದ್ರಪ್ರಿಯ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದ ನಾಯಿಯನ್ನು ಸ್ಥಳೀಯರು ಸಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.