ಹಾವೇರಿ, ನವೆಂಬರ್ 10: ಕಾಂಗ್ರೆಸ್ ಸರ್ಕಾರ ಕರ್ನಾಟಕದ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿಯಾಗುವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಶಿಗ್ಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವೇಳೆ ಆರೋಪ ಸಾಬೀತು ಪಡಿಸಲು ಆಗದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ನೇರ ಸವಾಲು ಹಾಕಿದ್ದಾರೆ.
ದೇಶದ ಪ್ರಧಾನಿ ಇಷ್ಟು ಸುಳ್ಳು ಹೇಳ್ತಾರಲ್ಲ ಎಂದು ಆಶ್ಚರ್ಯವಾಗುತ್ತೆ. ಇಂತಹ ಸುಳ್ಳು ಹೇಳುವಂತಹ ಪ್ರಧಾನಿ ಇತಿಹಾಸದಲ್ಲಿ ಬಂದಿರಲಿಲ್ಲ ಎಂದಿದ್ದಾರೆ. ಇನ್ನು ನಿನ್ನೆ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಸಿಎಂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲಿನ ದು:ಸ್ವಪ್ನದಿಂದ ಪ್ರಧಾನಿ ಮೋದಿ ಅವರು ಇನ್ನೂ ಹೊರಬಂದಿಲ್ಲ ಎಂದು ಕಾಣಿಸುತ್ತದೆ. ಹೋದಲ್ಲಿ ಬಂದಲ್ಲಿ ಮೋದಿಯವರು ಕರ್ನಾಟಕವನ್ನು ಮತ್ತೆ ಮತ್ತೆ ತಮ್ಮ ಭಾಷಣದಲ್ಲಿ ಎಳೆದು ತರುತ್ತಿದ್ದಾರೆ. ಕರ್ನಾಟಕದ ಮದ್ಯ ಮಾರಾಟಗಾರರು ನೀಡಿರುವ ರಾಜಕೀಯ ಪ್ರೇರಿತ ದೂರು ಅಷ್ಟು ಬೇಗ ಮೋದಿಯವರನ್ನು ತಲುಪಿ ಬಿಟ್ಟಿದೆ ಎಂದು ಕಿಡಿಕಾರಿದ್ದರು.
ವಕ್ಫ್ ಬೋರ್ಡ್ಗೆ ಎಲ್ಲಾ ಜಾಗ ಕೊಟ್ಟುಬಿಡ್ತಾರೆಂದು 2014ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದರು. ವಕ್ಫ್ ಆಸ್ತಿ ಅತಿಕ್ರಮಣ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಬಳಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಬಿಗ್ ಶಾಕ್ ಕೊಟ್ಟ ರಾಜ್ಯಪಾಲ
ನಾನು ಈಗಾಗಲೇ ಹೇಳಿದ್ದೀನಿ, ನಿನ್ನೆ ಸರ್ಕಾರ ಆದೇಶವನ್ನು ಹಿಂಪಡೆದಿದೆ. ವಕ್ಫ್ ಆಸ್ತಿ ಸ್ವಾಧೀನ ಮಾಡಿಕೊಂಡು ರೈತರನ್ನು ಒಕ್ಕಲೆಬ್ಬಿಸಬಾರದು, ರೈತರಿಗೆ ನೋಟಿಸ್ ನೀಡಿದ್ದರೆ ಹಿಂಪಡೆಯುವಂತೆ ಆದೇಶ ಮಾಡಿದ್ದೇನೆ. ವಕ್ಫ್ ನೋಟಿಸ್ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಯಾವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ, ಜಮೀನು ತೆರವು ಮಾಡುವುದಿಲ್ಲ. ವಿಚಾರಣೆ ಇಲ್ಲದೆ ವಕ್ಫ್ ಎಂದು ನೋಟಿಸ್ ನೀಡಿದ್ರೆ ರದ್ದು ಮಾಡುತ್ತೇವೆ ಎಂದಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದೆ ಎಂದು ಹೇಳಿಕೆ ವಿಚಾರವಾಗಿ ಮಾತನಾಡಿದ್ದು, 2,000 ಕೋಟಿ ರೂ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದರೆಂದು ಯತ್ನಾಳ್ ಹೇಳುತ್ತಾರೆ. ಬಸವರಾಜ ಬೊಮ್ಮಾಯಿ 2,000 ಕೋಟಿ ರೂ. ಕೊಟ್ಟು ಸಿಎಂ ಆಗಿದ್ದರು. ವಿಜಯೇಂದ್ರ ಕೂಡ ದುಡ್ಡು ಕೊಟ್ಟು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಇಂಥವರಿಗೆ ವೋಟ್ ಹಾಕಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಟೆಂಡರ್ ಕರೆಯದೆ, ಸಂಪುಟದ ಒಪ್ಪಿಗೆ ಇಲ್ಲದೆ ಪ್ರತಿ ಪಿಪಿಇ ಕಿಟ್ಗೆ 2,147 ರೂ. ನೀಡಿ ಚೀನಾದಿಂದ ಯಡಿಯೂರಪ್ಪ, ಶ್ರೀರಾಮುಲು ಸೇರಿ 3 ಲಕ್ಷ ಪಿಪಿಇ ಕಿಟ್ ಖರೀದಿ ಖರೀದಿಸಿದ್ದಾರೆ. ಪ್ರಧಾನಿ ಮೋದಿ ಚೀನಾದಿಂದ ಯಾವುದೇ ವಸ್ತು ಖರೀದಿಸಲ್ಲವೆಂದು ಹೇಳುತ್ತಾರೆ. ಪಿಪಿಇ ಕಿಟ್ ಖರೀದಿ ಹೆಸರಿನಲ್ಲಿ 2,000 ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೊರೊನಾ ವೇಳೆ ಆಕ್ಸಿಜನ್ ಪೂರೈಸದೆ 50,000 ಜನ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತುಹೋಗಿದ್ದರು. ಆದರೆ ಸುಧಾಕರ್ ಇಬ್ಬರು ಅಥವಾ ಮೂವರು ಸತ್ತಿರಬಹುದು ಅಂದಿದ್ದರು. ಇಂಥವರು ಬೇಕಾ, ಮತ್ತೆ ಬಿಜೆಪಿಯವರು ಅಧಿಕಾರಕ್ಕೆ ಬರಬೇಕಾ? ಗುತ್ತಿಗೆದಾರರಿಂದ 40% ಕಮಿಷನ್ ಪಡೀತಿದ್ದಾರೆಂದು ಕೆಂಪಣ್ಣ ಹೇಳಿದ್ದರು. ನಾಗಮೋಹನ ದಾಸ್ ವರದಿ ಬರಲಿ, ಕ್ರಿಮಿನಲ್ ಕೇಸ್ ಹಾಕಿಸುತ್ತೇವೆ. ಬೊಮ್ಮಾಯಿ ಇರಲಿ ಮತ್ತಾರೇ ಇರಲಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:36 pm, Sun, 10 November 24