ಕುಟುಂಬದ ಐದು ತಲೆಮಾರುಗಳನ್ನು ಕಂಡ ವೃದ್ಧೆ; ಯುವಕರನ್ನು ನಾಚಿಸುವಂತಿದೆ 92 ವರ್ಷದ ಅಜ್ಜಿಯ ಉತ್ಸಾಹ
ಅಜ್ಜಿಯ ಹೆಸರು ದ್ಯಾಮವ್ವ ಹೂವಿನಾಳ. ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಇವರಿಗೆ ಪ್ರಸ್ತುತ 92 ವರ್ಷ ವಯಸ್ಸು. ಯುವ ಜನರನ್ನು ನಾಚಿಸುವಂತೆ ಆರೋಗ್ಯ ಕಾಪಾಡಿಕೊಂಡು ಬಂದಿರುವ ದ್ಯಾಮವ್ವ ಹೂವಿನಾಳ, ಈಗ ತನ್ನ ಕರುಳ ಬಳ್ಳಿಯ ಐದನೇ ತಲೆಮಾರನ್ನು ಕಂಡಿದ್ದಾರೆ.
ಕೊಪ್ಪಳ: ಇಂದಿನ ಆಧುನಿಕ ಜಗತ್ತಿನಲ್ಲಿ ಅಬ್ಬಬ್ಬಾ ಎಂದರೆ ಒಂದೆರಡು ತಲೆಮಾರನ್ನು ಕಾಣುತ್ತಾರೆ. 60 ವರ್ಷವಾಗುವ ಕಾಲಕ್ಕೆ ಜೀವನವೇ ಮುಗಿದು ಹೋಯಿತು ಎನ್ನುವಂತೆ ವರ್ತಿಸುತ್ತಾರೆ. ಆದರೆ, ಇಲ್ಲೊಬ್ಬರು ವೃದ್ಧೆ ತನ್ನ ಕರುಳ ಬಳ್ಳಿಯ ಐದನೇ ತಲೆಮಾರು ಕಂಡಿದ್ದಾರೆ. ಐದು ತಲೆ ಮಾರು ಕಂಡರೂ ಅಜ್ಜಿ ಇನ್ನು ಮೊದಲಿನಷ್ಟೇ ಚೈತನ್ಯವನ್ನು ಹೊಂದಿದ್ದಾರೆ. 90 ವರ್ಷ ದಾಟಿದರು ನವ ಉತ್ಸಾಹದಿಂದ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಸಂತೋಷದಿಂದ ಇದ್ದಾರೆ.
ಅಜ್ಜಿಯ ಹೆಸರು ದ್ಯಾಮವ್ವ ಹೂವಿನಾಳ. ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಇವರಿಗೆ ಪ್ರಸ್ತುತ 92 ವರ್ಷ ವಯಸ್ಸು. ಯುವ ಜನರನ್ನು ನಾಚಿಸುವಂತೆ ಆರೋಗ್ಯ ಕಾಪಾಡಿಕೊಂಡು ಬಂದಿರುವ ದ್ಯಾಮವ್ವ ಹೂವಿನಾಳ, ಈಗ ತನ್ನ ಕರುಳ ಬಳ್ಳಿಯ ಐದನೇ ತಲೆಮಾರನ್ನು ಕಂಡಿದ್ದಾರೆ. ಐದು ತಲೆಮಾರು ಕಂಡ ಅಜ್ಜಿ ದ್ಯಾಮವ್ವನವರಿಗೆ 6 ಜನ ಮಕ್ಕಳು, 33 ಜನ ಮೊಮ್ಮಕ್ಕಳು ಮತ್ತು 60 ಮರಿ ಮೊಮ್ಮಕ್ಕಳು, ಇತ್ತೀಚಿಗೆ ಜನಿಸಿದ ಓರ್ವ ಗಿರಿ ಮೊಮ್ಮಗ ಸೇರಿ 100 ಜನ ಕುಟುಂಬ ಸದಸ್ಯರನ್ನು ಹೊಂದಿದ್ದಾರೆ.
ದ್ಯಾಮವ್ವಳ ಮಗಳು ಗಂಗಮ್ಮಳನ್ನು ತಾಲೂಕಿನ ಬೇವಿನಾಳ ಗ್ರಾಮದ ಬಹದ್ದೂರಬಂಡಿ ಕುಟುಂಬಕ್ಕೆ ಕೊಡಲಾಗಿದೆ. ಈ ಗಂಗಮ್ಮನ ಮಗಳು ಫಕ್ಕೀರವ್ವಳನ್ನು ಹ್ಯಾಟಿ ಗ್ರಾಮದ ಹೂವಿನಾಳ ಕುಟುಂಬಕ್ಕೆ ಮದುವೆ ಮಾಡಿಕೊಡಲಾಗಿದೆ. ಫಕ್ಕೀರವ್ವಳ ಮಗಳು ಅಂಜಲಿ ಬೇವಿನಾಳ ಗ್ರಾಮದ ಅದೇ ಬಹದ್ದೂರಬಂಡಿ ಕುಟುಂಬದ ಸೊಸೆ. ಅಂಜಲಿಗೆ ಕಳೆದ 15 ದಿನದ ಹಿಂದೆ ಗಂಡು ಮಗುವಾಗಿದೆ. ಅಂದರೆ, ಅಜ್ಜಿ ದ್ಯಾಮವ್ವ ತನ್ನ ಐದನೇ ತಲೆಮಾರನ್ನು ಕಂಡಂತಾಗಿದೆ. ದಾಮವ್ವ ಮನೆಯಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದು, ಅಜ್ಜಿಯನ್ನು ಎಲ್ಲರೂ ಪ್ರೀತಿಯಿಂದ ಕಾಣುತ್ತಾರೆ.
ನೂರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ದ್ಯಾಮವ್ವ ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಅಜ್ಜಿಯ ಆರೋಗ್ಯದ ಬಗ್ಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದು ಕಿವಿ ಮಂದವಾಗಿರುವುದು ಬಿಟ್ಟರೆ ಯಾರ ಸಹಾಯವಿಲ್ಲದೆ ಅಜ್ಜಿ ದ್ಯಾಮವ್ವ ಓಡಾಡುತ್ತಾರೆ. ಪಟಪಟನೆ ಮನೆಯ ಮೆಟ್ಟಿಲು ಹತ್ತುತ್ತಾರೆ. ಯುವ ಜನರನ್ನು ನಾಚಿಸುವಂತೆ ಖಡಕ್ ರೊಟ್ಟಿ ತಿನ್ನುತ್ತಾರೆ. ಈ ವಯಸ್ಸಿನಲ್ಲಿಯೂ ದ್ಯಾಮವ್ವ ಲವಲವಿಕೆಯಿಂದ ಇರುವುದು ಆಕೆಯ ಕುಟುಂಬದ ಸದಸ್ಯರಿಗೆ ಸ್ಫೂರ್ತಿದಾಯಕವಾಗಿದೆ. ಇನ್ನು ಕೊರೊನಾ ಎರಡನೇ ಅಲೆಯಲ್ಲೂ ಹಿರಿ ಜೀವಕ್ಕೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ದಾಮವ್ವರ ಆಹಾರ ಪದ್ಧತಿಯೇ ಅವರ ಶಕ್ತಿ ಎಂದು ದಾಮವ್ವರ ಸಂಭಂದಿ ಮುದ್ದಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ:
ಕೊರೊನಾ ಗೆದ್ದ ಅಜ್ಜಿ; ಕೊರೊನಾ ಮಣಿಸುವ ಮೂಲಕ ಅಚ್ಚರಿ ಮೂಡಿಸಿದ 108 ವರ್ಷದ ಶತಾಯುಷಿ ಅಜ್ಜಿ
ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್
Published On - 11:22 am, Mon, 12 July 21