ಉಪಚುನಾವಣಾ ಫಲಿತಾಂಶ: ರಾಜ್ಯ ರಾಜಕಾರಣಕ್ಕೆ ಸಿಗುತ್ತಾ ಹೊಸ ತಿರುವು?
ಬೆಂಗಳೂರು: ಆಡಳಿತಾರೂಢ ಭಾರತೀಯ ಜನತಾ ಪಕ್ಷ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದು ವಿಧಾನ ಸಭೆಯಲ್ಲಿ ತನ್ನ ಸಂಖ್ಯಾಬಲವನ್ನು 118 ಕ್ಕೆ (ಸಭಾಧ್ಯಕ್ಷರನ್ನು ಹೊರತುಪಡಿಸಿ) ಹೆಚ್ಚಿಸಿಕೊಳ್ಳುವುದರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ರಾಜಕೀಯದ ಚದುರಂಗದಲ್ಲಿ ಹೊಸ ಆಟವನ್ನು ಆಡಲು ಸಜ್ಜಾಗಿದ್ದಾರೆ. ಇಂದಿನ ಫಲಿತಾಂಶದೊಂದಿಗೆ, ರಾಜ್ಯ ರಾಜಕೀಯದಲ್ಲಿ ಹಲವಾರು ಬದಲಾವಣೆ ಆಗುವುದು ನಿಶ್ಚಿತ. ನಮ್ಮ ರಾಜ್ಯದಲ್ಲಿ ಏನಾಗಬಹುದು ಎಂಬುದನ್ನ ನೋಡೋಣ. ಶಿರಾ ಸಾಂಪ್ರದಾಯಿಕವಾಗಿ ಒಕ್ಕಲಿಗ ಕ್ಷೇತ್ರ ಎಂದು ಗುರುತಿಸಲ್ಪಡುವ ಶಿರಾದಲ್ಲಿ, ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ಜಾದೂ ಕೆಲಸ ಮಾಡಿದೆ. […]

ಬೆಂಗಳೂರು: ಆಡಳಿತಾರೂಢ ಭಾರತೀಯ ಜನತಾ ಪಕ್ಷ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದು ವಿಧಾನ ಸಭೆಯಲ್ಲಿ ತನ್ನ ಸಂಖ್ಯಾಬಲವನ್ನು 118 ಕ್ಕೆ (ಸಭಾಧ್ಯಕ್ಷರನ್ನು ಹೊರತುಪಡಿಸಿ) ಹೆಚ್ಚಿಸಿಕೊಳ್ಳುವುದರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ರಾಜಕೀಯದ ಚದುರಂಗದಲ್ಲಿ ಹೊಸ ಆಟವನ್ನು ಆಡಲು ಸಜ್ಜಾಗಿದ್ದಾರೆ. ಇಂದಿನ ಫಲಿತಾಂಶದೊಂದಿಗೆ, ರಾಜ್ಯ ರಾಜಕೀಯದಲ್ಲಿ ಹಲವಾರು ಬದಲಾವಣೆ ಆಗುವುದು ನಿಶ್ಚಿತ. ನಮ್ಮ ರಾಜ್ಯದಲ್ಲಿ ಏನಾಗಬಹುದು ಎಂಬುದನ್ನ ನೋಡೋಣ.
ಶಿರಾ ಸಾಂಪ್ರದಾಯಿಕವಾಗಿ ಒಕ್ಕಲಿಗ ಕ್ಷೇತ್ರ ಎಂದು ಗುರುತಿಸಲ್ಪಡುವ ಶಿರಾದಲ್ಲಿ, ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ಜಾದೂ ಕೆಲಸ ಮಾಡಿದೆ. ಈ ಹಿಂದೆ, ಕೆ.ಆರ್.ಪೇಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕೂಡ ಅವರು ಕೆಲಸ ಮಾಡಿದ್ದರು ಮತ್ತು ಪಕ್ಷಕ್ಕೆ ಜಯ ತಂದು ಕೊಟ್ಟಿದ್ದರು. ಈ ಬಾರಿ ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರವಾಗಿ ಕೆಲಸ ಮಾಡಿ ಗೆಲುವು ತಂದಿಟ್ಟಿದ್ದಾರೆ.
ಹಿಂದೆಲ್ಲ ಓರ್ವ ಶಾಸಕ ಮೃತಪಟ್ಟಾಗ ಅವರ ಹೆಂಡತಿ ಅಥವಾ ಮಕ್ಕಳು ಉಪಚುನಾವಣೆಗೆ ನಿಂತರೆ ಅವರೇ ಗೆಲ್ಲುವುದು ವಾಡಿಕೆಯಾಗಿತ್ತು. ಇದಕ್ಕೆ ಕಾರಣ, ಮೃತ ಶಾಸಕ ಅಥವಾ ಸಂಸದರ ಮೇಲಿನ ಅನುಕಂಪ. ಆದರೆ ಇದೇ ಮೊದಲ ಬಾರಿಗೆ ಶಿರಾದಲ್ಲಿ ಇದು ಅನ್ವಯಿಸಿಲ್ಲ. ಜನ ಮೃತ ಶಾಸಕ ದಿ.ಸತ್ಯನಾರಾಯಣರ ಪತ್ನಿ ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮರಿಗೆ ಸಹಾನುಭೂತಿ ತೋರಿಸಲೇ ಇಲ್ಲ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಡಾ. ರಾಜೇಶ್ ಗೌಡ ಅವರನ್ನು ಜನ ಕೈ ಹಿಡಿದಿದ್ದನ್ನು ಕಾಣಬಹುದಾಗಿದೆ. ಇದು ಒಂದು ಹೊಸ ಬೆಳವಣಿಗೆ.
2018 ರಿಂದ ಪ್ರಾರಂಭವಾದ ಮತದಾರರ ಆಯ್ಕೆಯ ಗತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಮುಖ್ಯ ಬದಲಾವಣೆಯನ್ನು ನಾವು ಕಾಣಬಹುದು. ಅದೇನೆಂದರೆ, ಒಕ್ಕಲಿಗ, ಲಿಂಗಾಯತ, ಮುಸ್ಲಿಂ ಸಮಾಜದ ಮತಗಳನ್ನ ಬಿಟ್ಟರೆ,ಉಳಿದ ಸಮಾಜದ ಮತದಾರರು ಬಿಜೆಪಿಯತ್ತ ಒಲವು ತೋರುತ್ತಿರುವುದು. ಈ ಬೆಳವಣಿಗೆಯನ್ನು ಪ್ರತಿಬಾರಿಯೂ ಕಾಂಗ್ರೆಸ್ ತಿರಸ್ಕರಿಸುತ್ತ ಬಂದಿದೆ. ಶಿರಾದಲ್ಲಿನ ಬಿಜೆಪಿ ಅಭ್ಯರ್ಥಿ ಗೆಲುವು ಈ ಸಾಮಾಜಿಕ ಸ್ಥಿತ್ಯಂತರವನ್ನು ಮತ್ತೆ ಪ್ರತಿಫಲಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಕ್ಕಲಿಗ ಮತದ ಮೇಲೆ ದೃಷ್ಟಿ ನೆಟ್ಟಿದ್ದರೆ, ಬಿಜೆಪಿ ಉಳಿದ ಸಣ್ಣ ಸಮಾಜದ ಮತಗಳನ್ನು ಕೀಳಲು ತಂತ್ರಗಾರಿಕೆ ನಡೆಸಿದ್ದು ಇಲ್ಲಿ ಕಂಡುಬರುತ್ತಿದೆ. ಈ ರಾಜನೀತಿ ಮತ್ತೆ ಶಿರಾದಲ್ಲಿ ಬಿಜೆಪಿಗೆ ಯಶಸ್ಸು ತಂದುಕೊಟ್ಟಿದೆ. ಇದಲ್ಲದೇ ಆಡಳಿತ ಪಕ್ಷಕ್ಕೆ ಇರುವ ಒಂದು ಸ್ವಾಭಾವಿಕ ಪ್ರಯೋಜನವು ಬಿಜೆಪಿಗೆ ಸಿಕ್ಕಿದ್ದನ್ನು ನಾವಿಲ್ಲಿ ಕಡೆಗಣಿಸುವಂತಿಲ್ಲ.
ಆರ್.ಆರ್.ನಗರ ಇನ್ನು ಆರ್.ಆರ್.ನಗರ ಕ್ಷೇತ್ರದಲ್ಲಿ ಎಲ್ಲರ ಲೆಕ್ಕಾಚಾರವನ್ನು ಮೀರಿಸಿ ಬಿಜೆಪಿಯ ಮುನಿರತ್ನ ಜಯಭೇರಿ ಬಾರಿಸಿದ್ದಾರೆ. ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಅವರು ತಮ್ಮ ಅಂತರವನ್ನು ಕಾಪಾಡಿಕೊಂಡು ಕೊನೆಗೆ ಒಳ್ಳೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಇದು ನಿರೀಕ್ಷಿತವಾಗಿದ್ದರೂ,ಈ ಬಾರಿ ಡಿ.ಕೆ ಸಹೋದರರು ಆರ್.ಆರ್ ನಗರವನ್ನು ಮುನಿರತ್ನ ಕೈಯಿಂದ ಕಿತ್ತುಕೊಳ್ಳಬೇಕೆಂದು ನಿರ್ಧರಿಸಿದ್ದರು.ಒಕ್ಕಲಿಗ ಮತದಾರರು ಜಾಸ್ತಿ ಇದ್ದಿದ್ದರಿಂದ ಅದು ತಮ್ಮ ಪರವಾಗಿ ಕೆಲಸ ಮಾಡುತ್ತದೆಯೆಂದು ಲೆಕ್ಕಾಚಾರ ಹಾಕಿದ್ದರು.ಆದರೆ ಅದು ಕೆಲಸ ಮಾಡಿದಂತೆ ಕಾಣುತ್ತಿಲ್ಲ.
ಮುನಿರತ್ನ ಅವರಿಗೆ ಗೊತ್ತಿತ್ತು: ಚುನಾವಣೆ ಇವತ್ತಲ್ಲ ನಾಳೆ ಬಂದೇ ಬರುತ್ತೆ. ಹಾಗಾಗಿ, ಅದಕ್ಕೆ ತಯಾರಾಗಬೇಕೆಂದು. ಅವರು ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ಕುಟುಂಬಕ್ಕೆ ತಮ್ಮ ಕೈಯಿಂದ ನೆರವಾಗಿದ್ದನ್ನು ಮತದಾರರು ನೆನಪಿಸಿಕೊಳ್ಳುತ್ತಾರೆ.
ಕಾಂಗ್ರೆಸ್ ಲೆಕ್ಕಾಚಾರ ತಪ್ಪಿದ್ದು ಪ್ರಾಯಶಃ ಮೂರು ವಿಚಾರದಲ್ಲಿ. ಮೊದಲನೆಯದಾಗಿ, ಒಕ್ಕಲಿಗ ಭಾವನೆಯನ್ನು ಚುನಾವಣೆಯಲ್ಲಿ ಎಬ್ಬಿಸಬಹುದು ಎಂದು ಮಾಡಿದ ಗಣಿತ ತಪ್ಪಿತ್ತು. ನಗರ ಭಾಗದಲ್ಲಿ ಅದು ಜಾತಿಯ ಭಾವನೆಯಾಗಿಯೇ ಚುನಾವಣೆಯಲ್ಲಿ ಕೆಲಸ ಮಾಡುತ್ತೆ ಎಂಬುದಕ್ಕೆ ಇವತ್ತಿಗೂ ಸಂಪೂರ್ಣ ಸಾಕ್ಷ್ಯಾಧಾರ ಸಿಕ್ಕಿಲ್ಲ. ಎರಡು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಕೈ ಹಾಕಿದರೆ ಗೆಲುವು ಆಗಬಹುದು ಎಂಬ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.ಕಳೆದ ವರ್ಷ ಲೋಕಸಭಾ ಚುನಾವಣಾ ಸಮಯದಲ್ಲಿ ಅವರು ಮಂಡ್ಯಕ್ಕೆ ಕಾಲಿಟ್ಟಾಗ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಈ ಉಪ ಚುನಾವಣೆ ಮೂಲಕ ದೇವೇಗೌಡ ಕುಟುಂಬವನ್ನು ಮೀರಿ ಒಕ್ಕಲಿಗ ಜನಾಂಗಕ್ಕೆ ತಾವೇ ನಾಯಕರಾಗಬೇಕು ಎಂದು ರೂಪಿಸಿದ ತಂತ್ರದ ಮೊದಲ ಹೆಜ್ಜೆಯಾಗಿ ಈ ಚುನಾವಣೆಯನ್ನು ಎದುರಿಸುತ್ತಿದ್ದರು.ಆದರೆ, ಡಿ.ಕೆ. ಸಹೋದರರು ಇಲ್ಲಿ ಮತ್ತೊಮ್ಮೆ ಮುಗ್ಗರಿಸಿದ್ದಾರೆ. ಕಳೆದ ಬಾರಿ ಬಿಜೆಪಿಯ ತುಳಸಿ ಮುನಿರಾಜು ಗೌಡ ಚೆನ್ನಾಗಿ ಹೋರಾಡಿದ್ದರು. ಈ ಬಾರಿ, ನಿಜವಾದ ಬಿಜೆಪಿ ಮತದಾರರು ಮುನಿರತ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ.ಹಾಗಾಗಿ, ಅವರೆಲ್ಲಾ ಕಾಂಗ್ರೆಸ್ಸಿಗೆ ಮತ ಹಾಕಬಹುದು ಎಂದು ಹಾಕಿದ ಲೆಕ್ಕಾಚಾರ ಕೂಡ ಉಲ್ಟಾ ಹೊಡೆದಿದೆ. ಕಳೆದ ಬಾರಿ ಬಿಜೆಪಿಯ ತುಳಸಿ ಮುನಿರಾಜು ಗೌಡ ತುಂಬಾ ಹೋರಾಟ ನಡೆಸಿದ್ದರು. ಅದರಿಂದಾಗಿ ತುಂಬಾ ಕಡೆ ಮುನಿರತ್ನ ಅವರಿಗೆ ಸ್ವಲ್ಪ ಹಿನ್ನಡೆ ಆಗಿತ್ತು.ಈ ಬಾರಿ ಬಿಜೆಪಿ ಮತಗಳು ಮುನಿರತ್ನ ಅವರಿಗೆ ಬಂದಂತಿದೆ. ನಗರ ಪ್ರದೇಶದಲ್ಲಿ ಕಾರ್ಪೋರೇಟರ್ಗಳ ನಿಲುವು ಸ್ವಲ್ಪ ಮಟ್ಟಿಗೆ ಮುಖ್ಯವಾಗುತ್ತದೆ. ಈ ಬಾರಿ ಕಾಂಗ್ರೆಸ್ನ ಕಾರ್ಪೋರೇಟರ್ಗಳೆಲ್ಲ ಮುನಿರತ್ನ ಅವರ ಜೊತೆ ಬಿಜೆಪಿಗೆ ಬಂದಿದ್ದರು.ಅದನ್ನು ಕಾಂಗ್ರೆಸ್ ಗಣನೆಗೆ ತೆಗೆದುಕೊಳ್ಳಲಿಲ್ಲ.ಈ ಹಿಂದೆ ಜಯನಗರದಲ್ಲಿ ನಡೆದ ವಿಧಾನ ಸಭಾ ಉಪಚುನಾವಣೆಯಲ್ಲಿ ಬೆಜೆಪಿಯ ಕಾರ್ಪೋರೇಟರ್ಗಳನ್ನು ಕಾಂಗ್ರೆಸ್ ಸೆಳೆದು ಚುನಾವಣಾ ತಂತ್ರ ಮಾಡುವಲ್ಲಿ ಯಶಸ್ವಿಯಾಗಿತ್ತು ಮತ್ತು ಅಲ್ಲಿ ಸೌಮ್ಯಾ ರೆಡ್ಡಿ ಗೆಲ್ಲಲು ಸಾಧ್ಯವಾಯಿತು.
ಮುಂದೇನು?
ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ನ ಹಲವಾರು ನಾಯಕರಲ್ಲಿ ಎದೆಯುರಿಯನ್ನು ಹುಟ್ಟು ಹಾಕಲಿದೆ. ಉಪ ಚುನಾವಣೆಗೆ ಅವಶ್ಯಕತೆಯೇ ಇಲ್ಲದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಇಲ್ಲಿಗೆ ಮುಗಿಯುತ್ತೆ ಎಂದು ಪಕ್ಷದ ಹೈ ಕಮಾಂಡ್ ತಿಳಿದಿದ್ದರೆ ಅದು ದೊಡ್ಡ ತಪ್ಪು. ಡಿಕೆಶಿ vs ಸಿದ್ದರಾಮಯ್ಯ ಜಟಾಪಟಿ ಕೋಲ್ಡ್ ವಾರ್ ಆಗಿ ಮುಂದುವರಿಯುವ ಲಕ್ಷಣ ಇದೆ.ಏಕೆಂದರೆ, ಇಬ್ಬರೂ ಜಿದ್ದಾಜಿದ್ದಿನ ಮತ್ತು ಅಪಾರ ಜನಬೆಂಬಲ ಇರುವ ನಾಯಕರು.ಹಾಗಾಗಿ, ಅವರು ಸುಮ್ಮನಿರಲು ಸಾಧ್ಯವಿಲ್ಲ ಎಂಬುದು ಹಲವಾರು ನಾಯಕರು ಖಾಸಗಿಯಾಗಿ ಹೇಳುವ ಮಾತು.
ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಮೇಲೆ ನಡೆದ ಮೊದಲ ಪರೀಕ್ಷೆ ಇದಾಗಿತ್ತು.ಆದರೆ, ಅವರು ಎಲ್ಲೋ ಎಡವಿದ್ದು ಫಲಿತಾಂಶದಲ್ಲಿ ಕಾಣುತ್ತಿದೆ. ಉದಾಹರಣೆಗೆ ಡಾ. ರಾಜೇಶ್ ಗೌಡ ಅವರ ವಿಚಾರವನ್ನೇ ಗಮನಿಸೋಣ. ಅವರು ಕಾಂಗ್ರೆಸ್ಸಿನಲ್ಲಿದ್ದವರು. ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರ ಖಾಸಾ ದೋಸ್ತಿ. ಅವರಿಗೆ ಕಾಂಗ್ರೆಸ್ ಪಾರ್ಟಿ ಟಿಕೆಟ್ ನೀಡಿದ್ದರೆ ಅವರು ಆರಾಮಾಗಿ ಗೆಲ್ಲುವ ಸಾಧ್ಯತೆ ಇತ್ತು ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ.
ಜೆಡಿಎಸ್ಗೆ ಇನ್ನು 3 ವರ್ಷ ಪಕ್ಷವನ್ನು ಈಗಿರುವ ಹಾಗೆ ಇಟ್ಟುಕೊಳ್ಳುವ ದೊಡ್ಡ ಸವಾಲಿದೆ. ಪಕ್ಷದ ನಾಯಕರು ಬಿಟ್ಟು ಹೋಗುವ ಭಯ ಒಂದು ಕಡೆ ಆದರೇ ಮತ್ತೊಂದು ಕಡೆ ಯುವ ಮತದಾರರು ಅದರಲ್ಲಿಯೂ ಒಕ್ಕಲಿಗ ಯುವಕರು ಸಹ ಪಕ್ಷದಿಂದ ದೂರವಾಗಿ ಬಿಜೆಪಿ ಕಡೆ ಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಥವಾ, ಕಾಂಗ್ರೆಸ್ ನಿಜವಾಗಿಯೂ ಇಡೀ ಜೆಡಿಎಸ್ ಕಾರ್ಯಕರ್ತರ ದಂಡನ್ನೆ ತನ್ನ ಕಡೆ ಸೆಳೆಯುವ ಸಾಧ್ಯತೆಯಿದೆ. ಹೀಗಾದರೆ, ಕಾಂಗ್ರೆಸ್ಗೆ ಹಳೇ ಮೈಸೂರು ಭಾಗದಲ್ಲಿ ತುಂಬಾ ಬಲ ಬರಬಹುದು ಎಂದು ಲೆಕ್ಕಾಚಾರ ಹಾಕಿದರೂ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಏನಾಯಿತು ಎಂಬುದನ್ನ ನೆನಪಿಸಿಕೊಂಡರೆ ಅದು ಅಷ್ಟು ಸುಲಭ ಅಲ್ಲ. ಯಾಕೆಂದರೆ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ಹಾಗಾಗಿ, ನಾಯಕರು ಮೇಲ್ಮಟ್ಟದಲ್ಲಿ ಜೆಡಿಎಸ್ ಪಕ್ಷ ತ್ಯಜಿಸಿದರೂ ಮತದಾರ ತನ್ನ ನಿಷ್ಠೆ ಬದಲಿಸುತ್ತಾನೆ ಎಂಬುದಕ್ಕೆ ಇನ್ನೂ ನಿದರ್ಶನ ಸಿಕ್ಕಿಲ್ಲ.ಇದು ಕಾಂಗ್ರೆಸ್ಸಿನ ಮುಂದಿರುವ ದೊಡ್ಡ ಸವಾಲು.
ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡೂ ಕ್ಷೇತ್ರವನ್ನು ಗೆದ್ದು ನಿಟ್ಟುಸಿರು ಬಿಡುವಂತಾಗಿದೆ. ಅವರ ಮಗ ಬಿ.ವೈ.ವಿಜಯೇಂದ್ರ ಬಿಜೆಪಿ ಪಾಲಿಗೆ ಅಕ್ಷರಶಃ ಕರ್ನಾಟಕದ ಚಾಣಕ್ಯ ಎಂಬುದನ್ನು ನಿರೂಪಿಸಿದಂತಾಗಿದೆ. ಆದರೂ, ಅವರ ಪಾಲಿಗೆ ಇರುವ ದೊಡ್ಡ ಪರೀಕ್ಷೆ 2023ರ ವಿಧಾನ ಸಭಾ ಚುನಾವಣೆ. ಅಲ್ಲಿ ಅವರು ಆಡಳಿತ ವಿರೋಧಿ ಅಲೆಯನ್ನು ಸೋಲಿಸಿ ಪಕ್ಷ ಗೆಲ್ಲಿಸಿಕೊಂಡು ಬರಬೇಕು. ಆಗ ಅವರ ಸೇವೆಯನ್ನು ಪಕ್ಷದ ಹೈ ಕಮಾಂಡ್ ಖಂಡಿತ ಮಾನ್ಯ ಮಾಡುತ್ತದೆ ಎಂಬುದು ಪಕ್ಷದ ನಾಯಕರುಗಳ ಅಭಿಪ್ರಾಯ. ಈ ಗೆಲುವಿನಿಂದ ಯಡಿಯೂರಪ್ಪರ ಸ್ಥಾನ ಭದ್ರವಾಯಿತು ಎಂದು ಸದ್ಯಕ್ಕೆ ಹೇಳಬಹುದು. ಅವರ ವಿರುದ್ಧ ಬಿಜೆಪಿ ನಾಯಕರೇ ಹಾದಿ ಬೀದಿಯಲ್ಲಿ ಮಾತನಾಡುವುದನ್ನು ನಿಲ್ಲಿಸುವಂತೆ ಮಾಡಿತು. ಈಗ ಅವರಿಗೆ ಇರುವ ಮುಖ್ಯ ಪರೀಕ್ಷೆ: ಕೇಂದ್ರದ ನಾಯಕರ ಮನವೊಲಿಸಿ ಮುಂದುವರಿಯಲು ಅನುವು ಮಾಡಿಕೊಳ್ಳುವುದು. ಪಕ್ಷದ ಮೂಲಗಳ ಪ್ರಕಾರ ಯಡಿಯೂರಪ್ಪರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ನಾಯಕರು ಬೇಸರಗೊಂಡಿದ್ದಾರೆ. ಅವರು ಕರ್ನಾಟಕದ ಕುರಿತು ಬೇರೆಯದೇ ಕಾರ್ಯತಂತ್ರ ಹೆಣೆಯುತ್ತಿದ್ದು ಅದರ ರೂಪುರೇಷೆ ಫೆಬ್ರವರಿಯಲ್ಲಿ ಮಂಡಿಸುವ ಮುಂಗಡಪತ್ರದ ಸಮಯಕ್ಕೆ ಕೊನೆಗೊಳ್ಳಲಿದೆ ಎಂದು ಮೂಲಗಳು ಹೇಳಿದೆ. ಈ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರ ಇಂದಿನ ಗೆಲುವು ತಾತ್ಕಾಲಿಕವೇ ಅಥವಾ ಶಾಶ್ವತವೇ ಎಂಬುದನ್ನು ಕಾದು ನೋಡಬೇಕಾಗಿದೆ.
Published On - 6:21 pm, Tue, 10 November 20