ಹುಬ್ಬಳ್ಳಿ, ಸೆಪ್ಟೆಂಬರ್ 30: ಅವರೆಲ್ಲಾ ಒಂದೆ ಏರಿಯಾದ ಸ್ನೇಹಿತರು (friends). ಒಟ್ಟಿಗೆ ಕೆಲಸ ಮಾಡುತ್ತಿರುತ್ತಾರೆ. ಒಂದೆ ಕಡೆ ಇರುತ್ತಿದ್ದರು. ತಮ್ಮಗೆ ಒಳ್ಳೆಯದಾಗಲಿ ಅಂತ ಮೂವರು ಸ್ನೇಹಿತರು ತಿರುಪತಿಗೆ ಹೋಗಿದ್ದರು. ಹೀಗೆ ತಿರುಪತಿಗೆ ಹೋದವರಲ್ಲಿ ಮರಳಿ ಬಂದವರು ಇಬ್ಬರು. ವಾಪಸ್ ಬಂದ ಆ ಇಬ್ಬರ ಪೈಕಿ ಸದ್ಯ ಬದುಕುಳಿದಿರುವುದು ಮಾತ್ರ ಒಬ್ಬ. ಹಾಗಾದ್ರೆ ನಡೆದಿದ್ದಾರೂ ಏನು? ಸದ್ಯ ಈ ಸ್ನೇಹಿತರ ಮಿಸ್ಸಿಂಗ್ ಮಿಸ್ಟರಿ ಕಥೆ ಭೇದಿಸಲು ಹುಬ್ಬಳ್ಳಿ ಪೊಲೀಸರು ತಲೆ ಕಡೆಸಿಕೊಂಡಿದ್ದಾರೆ. ಮತ್ತೊಂದು ಕಡೆ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಹುಬ್ಬಳ್ಳಿಯ ಬಾಣತಿಕಟ್ಟಿಯ ನಿವಾಸಿಗಳಾದ ಹನುಮಂತ, ಶಿವಾಜಿ ಹಾಗೂ ಗಣೇಶ ಕಳೆದ ವಾರ ತಿರುಪತಿಗೆ ಹೋಗಿದ್ದರು. ಆದರೆ ವಾಪಸ್ ಹುಬ್ಬಳ್ಳಿಗೆ ಬಂದಿದ್ದು ಶಿವಾಜಿ ಮತ್ತು ಗಣೇಶ ಮಾತ್ರ. ಇವರ ಜೊತೆಗೆ ತೆರಳಿದ್ದ ಹನುಮಂತ ಮಾತ್ರ ವಾಪಸ್ ಬಂದಿಲ್ಲ. ಈ ಬಗ್ಗೆ ಕೇಳಿದರೆ ಹನುಮಂತನಿಗೆ ತಿರುಪತಿಯಲ್ಲಿ ಮೂರ್ಛೆ ಬಂದಿತ್ತು. ಆತನನ್ನು ಟಿಟಿಡಿ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋದ್ದರು. ನಾವು ಮೊದಲಿಗೆ ದೇವರ ದರ್ಶನ ಪಡೆದು ಬಳಿಕ ಆಸ್ಪತ್ರೆಗೆ ಹೋದೆವು, ಆದರೆ ಅಲ್ಲಿ ಹನುಮಂತ ಇರಲಿಲ್ಲ. ಎಲ್ಲಾ ಕಡೆ ಹುಡುಕಾಟ ಮಾಡಿದರೂ ಹನುಮಂತ ಸಿಗಲಿಲ್ಲ. ಹೀಗಾಗಿ ವಾಪಸ್ ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಶಿವಾಜಿ ಮತ್ತು ಗಣೇಶ ಹೇಳಿದ್ದಾರೆ.
ಇದನ್ನೂ ಓದಿ: ಗಾಂಜಾ ಗುಂಗಲ್ಲಿದ್ದವರ ನಶೆ ಇಳಿಸಿದ ಹುಬ್ಬಳ್ಳಿ ಪೊಲೀಸರು
ಇನ್ನೂ ಇದರಿಂದ ಆಕ್ರೋಶಗೊಂಡ ಹನುಮಂತನ ಕುಟುಂಬಸ್ಥರು, ಬೈದು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ವಾಪಸ್ ತಿರುಪತಿಗೆ ಹೋಗಿ ಹನುಮಂತನನ್ನು ಹುಡುಕಿಕೊಂಡು ಬರೋಣ ಅಂತ ಶಿವಾಜಿ ಮತ್ತು ಗಣೇಶನಿಗೆ ಹೇಳಿದ್ದರು. ವಿಪರ್ಯಾಸವೆಂದರೆ, ಹನುಮಂತನ ಕುಟುಂಬಸ್ಥರಿಂದ ಒತ್ತಡ ಹೆಚ್ಚುತ್ತಲೇ, ಹಾಡ ಹಗಲೇ, ಕಸಬಾಪೇಟೆ ಪೊಲೀಸ್ ಠಾಣೆ ಕೂಗಳತೆಯಲ್ಲಿರುವ ಮನೆಯಲ್ಲಿ ಶಿವಾಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದರಿಂದ ಮತ್ತಷ್ಟು ಗಾಬರಿಯಾದ ಹನುಮಂತನ ಕುಟುಂಬಸ್ಥರು, ಉಳಿದ ಗಣೇಶನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕಾಣೆಯಾಗಿರುವ ಹನುಮಂತನನ್ನ ಹುಡಕಿಕೊಡಿ ಎಂದು ಕಸಬಾಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮತ್ತೊಂದು ಕಡೆ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡ ಶಿವಾಜಿ ಕುಟುಂಬಸ್ಥರು ಕೂಡ ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ನಾಪತ್ತೆಯಾದ ಹನುಮಂತ ವಿಚಾರವಾಗಿ ಸಾಕಷ್ಟು ಅನುಮಾನ ಮೂಡಿದೆ. ಹನುಮಂತ ಕುಟುಂಬಸ್ಥರು ಠಾಣೆ ಮೆಟ್ಟಿಲೇರುತ್ತಲೇ ಪೊಲೀಸರು ಅಲರ್ಟ್ ಆಗಿದ್ದು, ಪೊಲೀಸರ ಒಂದು ತಂಡ ಹನುಮಂತ ಹುಡುಕಾಟಕ್ಕೆ ತಿರುಪತಿಗೆ ತೆರಳಿದೆ. ಗಾರೆ ಕೆಲಸ ಮಾಡುತ್ತಿದ್ದ ಮೂವರು ಸ್ನೇಹಿತರು ಯಾವುದೇ ರೀತಿಯ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ ಈ ಕೇಸ್ ಕಷ್ಟವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಮಿಕ ಇಲಾಖೆಯ 101 ಲ್ಯಾಪ್ ಟಾಪ್ ಕಳ್ಳತನ ಪ್ರಕರಣ; 26 ಮಂದಿ ಅರೆಸ್ಟ್
ಒಟ್ಟಿನಲ್ಲಿ ಮೂವರು ಸ್ನೇಹಿತರ ತಿರುಪತಿ ಪ್ರವಾಸ ಮಿಸ್ಟರಿ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗಣೇಶನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ ಗಣೇಶ, ಹನುಮಂತ, ಶಿವಾಜಿ ಮೂವರು ಸಹ ಯಾವುದೇ ಮೊಬೈಲ್ ಬಳಸುವುದಿಲ್ಲ. ಇದು ಈಗ ಪೊಲೀಸರಿಗೆ ಸವಾಲು ಆಗಿದೆ. ಪ್ರಕರಣ ಭೇದಿಸಲು ಪೊಲೀಸರಿಗೆ ಟೆಕ್ನಿಕಲ್ ಸಾಕ್ಷಿಗಳು ಸಿಗುತ್ತಿಲ್ಲ.
ಆದಷ್ಟು ಬೇಗ ಪೊಲೀಸರು ಪ್ರಕರಣವನ್ನು ಭೇದಿಸಲಿ, ಹನುಮಂತನನ್ನು ವಾಪಸ್ ಕರೆದುಕೊಂಡು ಬರಲಿ. ಶಿವಾಜಿ ಸಾವಿನ ನಿಗೂಢತೆ ಹೊರಬಳಲಿ ಎನ್ನುವುದು ನೊಂದ ಕುಟುಂಬಸ್ಥರ ಅಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.