ಕೋಲಾರದಲ್ಲಿ ಹೃದಯವಿದ್ರಾವಕ ಘಟನೆ: ತನ್ನಿಬ್ಬರು ಕಂದಮ್ಮಗಳನ್ನ ಕೊಂದು ತಾಯಿಯೂ ಆತ್ಮಹತ್ಯೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2024 | 7:40 PM

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ಭಯಾನಕ ಘಟನೆ ನಡೆದಿದೆ. ಗಂಡನ ಹಾಗೂ ಅವನ ಮನೆಯವರ ಕಿರುಕುಳಕ್ಕೆ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮದ್ಯಪಾನ ಮತ್ತು ನಿರಂತರ ಹಿಂಸೆಯಿಂದ ಬಳಲುತ್ತಿದ್ದ ಮಹಿಳೆ ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೋಲಾರದಲ್ಲಿ ಹೃದಯವಿದ್ರಾವಕ ಘಟನೆ: ತನ್ನಿಬ್ಬರು ಕಂದಮ್ಮಗಳನ್ನ ಕೊಂದು ತಾಯಿಯೂ ಆತ್ಮಹತ್ಯೆ
ಕೋಲಾರದಲ್ಲಿ ಹೃದಯವಿದ್ರಾವಕ ಘಟನೆ: ತನ್ನಿಬ್ಬರು ಕಂದಮ್ಮಗಳನ್ನ ಕೊಂದು ತಾಯಿಯೂ ಆತ್ಮಹತ್ಯೆ
Follow us on

ಕೋಲಾರ, ಡಿಸೆಂಬರ್​ 25: ಗಂಡ ಹಾಗೂ ಅವರ ಮನೆಯವರ ಕಿರುಕುಳದಿಂದ ಬೇಸತ್ತು ತನ್ನ ಇಬ್ಬರು ಮಕ್ಕಳನ್ನು ಕೊಂದು (kill) ಬಳಿಕ ತಾಯಿ ಕೂಡ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಮೌನೀಶ್​​(7), ನಿತಿನ್​​(4), ತಾಯಿ ತಿಪ್ಪಮ್ಮ(30) ಮೃತರು. ಪತಿ ಮಣಿ ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬೆಮೆಲ್​ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಿಪ್ಪಮ್ಮ ಪತಿ ಮಣಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಕಮ್ಮಸಂದ್ರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. ತನ್ನ ತಾಯಿಯೇ ತಾನು ಹೆತ್ತು ಬೆಳೆಸಿದ್ದ ಮಕ್ಕಳನ್ನು ಕೊಂದು ತಾನು ಕೂಡ ನೇಣಿಗೆ ಶರಣಾಗಿದ್ದಾಳೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡಿದರೆ, ನಿನ್ನೆ ತಾಯಿ ತ್ರಿವೇಣಿ ಆಲಿಯಾಸ್ ತಿಪ್ಪಮ್ಮ ತನ್ನ ಮಗಳ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವಿತ್ತು. ಅಲ್ಲಿಗೆ ತನ್ನ ಅಜ್ಜಿ, ತಾತನೊಂದಿಗೆ ಹೋಗಿ ಬಂದಿದ್ದ ಮಗಳಿಗೆ ಊಟ ಮಾಡಿಸಿ, ತಾನು ಊಟ ಮಾಡಿ ಇಬ್ಬರೂ ಮಕ್ಕಳೊಂದಿಗೆ ಮಹಡಿ ಮನೆಯಲ್ಲಿ ಮಲಗಿದ್ದರು.

ಇದನ್ನೂ ಓದಿ: ಮೂತ್ರ ವಿಸರ್ಜನೆ ವಿಚಾರಕ್ಕೆ ಕಿರಿಕ್: ಯುವಕರ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ಸ್ಥಳೀಯ ಗ್ಯಾಂಗ್

ಹೊರಗಡೆ ಹಾಲ್​ನಲ್ಲಿ ಗಂಡ ಮಣಿ ಮಲಗಿದ್ದ. ಈ ವೇಳೆ ಬೆಳಿಗ್ಗೆ ಎದ್ದು ನೋಡಿದರೆ ತಾಯಿ ತ್ರಿವೇಣಿ ಮಲಗಿದ್ದ ಕೋಣೆಯ ಬಾಗಿಲು ತೆರೆದಿಲ್ಲ. ಈ ವೇಳೆ ಅಕ್ಕಪಕ್ಕದ ಮನೆಯವರನ್ನು ಕರೆದು ಬಾಗಿಲು ಒಡೆದು ನೋಡಿದ್ರೆ ತ್ರಿವೇಣಿ ತಾನ್ನ ಮಕ್ಕಳಾದ ಮೌನಿಷ(7) ಹಾಗೂ ನಿತಿನ್​ (4) ನೇಣು ಹಾಕಿ, ತಾನು ಕೂಡಾ ನೇಣಿಗೆ ಶರಣಾಗಿದ್ದರು. ಇನ್ನು ಈ ವಿಷಯ ತಿಳಿದು ಬೆಮೆಲ್​ ನಗರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ, ಅಲ್ಲದೆ ಸ್ಥಳಕ್ಕೆ ಕೆಜಿಎಫ್​ ಎಸ್ಪಿ ಶಾಂತರಾಜು, ಎಫ್​ಎಸ್​ಎಲ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಂಡನ ಮನೆಯವರಿಂದ ಹಿಂಸೆ

ಇನ್ನು ಕಳೆದ ಇಪ್ಪತ್ತು ವರ್ಷದ ಹಿಂದೆ ಕೆಜಿಎಫ್​ ತಾಲ್ಲೂಕು ಕದರೇಗೌಡನಕೋಟೆ ಗ್ರಾಮದ ತ್ರಿವೇಣಿ ಆಲಿಯಾಸ್ ತಿಪ್ಪಮ್ಮ ಅವರನ್ನು ಕಮ್ಮಸಂದ್ರ ಗ್ರಾಮದ ಮಣಿ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಇಬ್ಬರಿಗೂ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಮಧ್ಯೆ ಮಕ್ಕಳಾಗಿಲ್ಲ ಎಂದು ಮನೆಯಲ್ಲಿ ಮಣಿ ತಂದೆ, ತಾಯಿ ಹಿಂಸೆ ಮಾಡಿದ್ದಾರೆ. ಇದನ್ನು ತಿಳಿದು ತ್ರಿವೇಣಿ ಪೊಷಕರು ಹತ್ತಾರು ಆಸ್ಪತ್ರೆ ದೇವಸ್ಥಾನ ಸುತ್ತಾಡಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ ನಂತರ, ಮದುವೆಯಾದ ಹತ್ತು ವರ್ಷದ ನಂತರ ತ್ರಿವೇಣಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಾಗಿದ್ದವು.

ಇನ್ನು ಮನೆ ಕಟ್ಟಬೇಕು ಎಂದುಕೊಂಡಿದ್ದಾಗಲೂ ತ್ರಿವೇಣಿ ಕುಟುಂಬಸ್ಥರು ಸಾಕಷ್ಟು ಸಹಾಯ ಮಾಡಿದ್ದರು. ಆದರೂ ತ್ರಿವೇಣಿಗೆ ಕುಡಿದು ಬಂದು ಹೊಡೆಯುತ್ತಿದ್ದ ಗಂಡನಿಂದ ಹಾಗೂ ಗಂಡನ ಮನೆಯವರಿಂದ ಕಿರುಕುಳ ತಪ್ಪಿರಲಿಲ್ಲ. ಇಷ್ಟೆಲ್ಲಾ ಕಿರುಕುಳದಿಂದ ಬೇಸತ್ತಿದ್ದ ತ್ರಿವೇಣಿ ಎರಡು ತಿಂಗಳ ಹಿಂದೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗಲೂ ಸಮಾಧಾನ ಮಾಡಿ ಬುದ್ದಿ ಹೇಳಿ ಕರೆತರಲಾಗಿತ್ತು. ಈ ನಡುವೆ ಕಳೆದ ವಾರವಷ್ಟೇ ಕೆಲಸಕ್ಕೆ ಹೋಗುತ್ತಿಲ್ಲ ಅನ್ನೋ ಕಾರಣಕ್ಕೆ ಗಂಡ ಮಣಿ ತ್ರಿವೇಣಿಯನ್ನು ಹಿಡಿದುಕೊಂಡು ಹೊಡೆದಿದ್ದನ್ನು ಮಕ್ಕಳು ನೋಡಿ ತ್ರಿವೇಣಿ ತಂದೆ ತಾಯಿಗೆ ತಿಳಿಸಿದ್ದರು. ಹೀಗಿರುವಾಗಲೇ ಕಳೆದ ರಾತ್ರಿ ತ್ರಿವೇಣಿ ಎಂದಿನಂತೆ ಊಟ ಮುಗಿಸಿಕೊಂಡು ತನ್ನ ಮಕ್ಕಳೊಂದಿಗೆ ಕೋಣೆಯಲ್ಲಿ ಹೊಗಿ ಮಲಗಿದ್ದರು. ತನ್ನ ಮಕ್ಕಳನ್ನು ನೇಣುಹಾಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಘಟನೆಯಿಂದ ತ್ರಿವೇಣಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನ: ಸಂತ್ರಸ್ತ ಬದುಕುಳಿದಿದ್ದೇ ಪವಾಡ!

ಮಗಳು ನೆಮ್ಮದಿಯ ಜೀವನ ನಡೆಸುತ್ತಾಳೆ ಎಂದು ಹತ್ತಾರು ಕನಸುಗಳನ್ನಿಟ್ಟುಕೊಂಡು ಮದುವೆ ಮಾಡಿಕೊಟ್ಟಿದ್ದ ತ್ರಿವೇಣಿ ಕುಟುಂಬಸ್ಥರಿಗೆ ಗಂಡನ ಮನೆಯವರ ಕಿರುಕುಳವೇ ಸಾವಿನ ಕುಣಿಕೆಯಾಗಿ ಪರಿಣಮಿಸಿದೆ. ತ್ರಿವೇಣಿ ಕುಟುಂಬಸ್ಥರು ಎಷ್ಟೇ ಸಹಾಯ ಮಾಡಿದರೂ ಕೂಡ ಗಂಡನ ಮನೆಯವರ ಕಿರುಕುಳ ನಿಲ್ಲದೆ ತ್ರಿವೇಣಿ ತನ್ನ ಮಕ್ಕಳೊಂದಿಗೆ ಸಾವಿನ ಮನೆ ಸೇರಿದ್ದು ಮಾತ್ರ ದುರಂತ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.