ಯಾವುದೇ ದೇಗುಲದಲ್ಲಿ ಆರತಿ ಸ್ಥಗಿತವಾಗಲ್ಲ, ಹೆಸರು ಮಾತ್ರ ಬದಲಾಗುತ್ತೆ: ಸಚಿವ ಶಶಿಕಲಾ ಜೊಲ್ಲೆ
ರಾಜ್ಯ ಧಾರ್ಮಿಕ ಪರಿಷತ್ಗೂ ಕೆಲವು ಅಧಿಕಾರಗಳು ಇವೆ. ‘ಸಲಾಂ’ ಜಾಗದಲ್ಲಿ ಬೇರೊಂದು ಸಂಸ್ಕೃತದ ಹೆಸರು ಇರಿಸಬೇಕೆಂಬ ಧಾರ್ಮಿಕ ಪರಿಷತ್ ಮನವಿಗೆ ಸ್ಪಂದಿಸಿದ್ದೇವೆ ಎಂದು ಹೇಳಿದರು.
ದೆಹಲಿ: ಕರ್ನಾಟಕದ ಯಾವುದೇ ದೇವಾಲಯದಲ್ಲಿ ಸಂಜೆ ಆರತಿ ಪದ್ಧತಿ ರದ್ದಾಗುವುದಿಲ್ಲ. ‘ಸಲಾಂ ಆರತಿ’ (Salam Aarati) ಹೆಸರಿನಲ್ಲಿರುವ ‘ಸಲಾಂ’ ಪದವನ್ನು ಮಾತ್ರ ಕೈಬಿಡಲಾಗುತ್ತದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಹೇಳಿದರು. ಸಲಾಂ ಆರತಿ ಎಂಬ ಹೆಸರನ್ನು ಬದಲಾವಣೆ ಮಾಡಬೇಕೆಂದು ಧಾರ್ಮಿಕ ಪರಿಷತ್ ಮನವಿ ಮಾಡಿದೆ. ರಾಜ್ಯ ಧಾರ್ಮಿಕ ಪರಿಷತ್ಗೂ ಕೆಲವು ಅಧಿಕಾರಗಳು ಇವೆ. ‘ಸಲಾಂ’ ಜಾಗದಲ್ಲಿ ಬೇರೊಂದು ಸಂಸ್ಕೃತದ ಹೆಸರು ಇರಿಸಬೇಕೆಂಬ ಧಾರ್ಮಿಕ ಪರಿಷತ್ ಮನವಿಗೆ ಸ್ಪಂದಿಸಿದ್ದೇವೆ. ಆದರೂ ಅಧಿಕಾರಿಗಳು, ಇತಿಹಾಸಕಾರರ ಜತೆ ಚರ್ಚೆ ಮಾಡಬೇಕು. ಬಳಿಕ ಸಿಎಂ ಬೊಮ್ಮಾಯಿ ಜೊತೆಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಈ ಪ್ರಕ್ರಿಯೆಗೆ ಸುಮಾರು 15 ದಿನಗಳು ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
‘ಸಲಾಂ ಆರತಿ’ ಬದಲು ‘ಆರತಿ ನಮಸ್ಕಾರ’. ‘ದೀವಟಿಗೆ ಸಲಾಂ’ ಬದಲಿಗೆ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ. ಕಳೆದ ನವೆಂಬರ್ 2ರಂದು ನಡೆದಿದ್ದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚಿಂತನೆ ನಡೆದಿತ್ತು. ಹೆಸರು ಬದಲಾವಣೆ ಬಗ್ಗೆ ಶೀಘ್ರ ಧಾರ್ಮಿಕ ದತ್ತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.
ದೀವಟಿಗೆ ಸಲಾಂ ಪೂಜೆ ನಿಲ್ಲಿಸುವಂತೆ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ
ಟಿಪ್ಪು ಸುಲ್ತಾನ್ (Tipu Sultan) ಕಾಲದ ದೀವಟಿಗೆ ಸಲಾಂ ಪೂಜೆ ಪದ್ಧತಿಯನ್ನು ನಿಲ್ಲಿಸುವಂತೆ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ ಹೊರಡಿಸಿದೆ. ಟಿಪ್ಪು ರಾಜನಾಗಿದ್ದ ಕಾಲದಿಂದಲೂ ರಾಜ್ಯದ ಹಲವು ಪ್ರಸಿದ್ಧ ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪೂಜೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ದೇಗುಲಗಳಲ್ಲಿಯೂ ಈ ಪದ್ಧತಿ ಇತ್ತು. ಆದರೆ ಮುಂದಿನ ದಿನಗಳಲ್ಲಿ ಸಲಾಂ ಪೂಜೆ ನಡೆಸುವುದು ಬೇಡ. ಅದರ ಬದಲಿಗೆ ಸಂಧ್ಯಾಕಾಲದಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸುವಂತೆ ಮುಜರಾಯಿ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ. ರಾಜ, ಮಂತ್ರಿ, ಪ್ರಜೆಗಳ ಒಳಿತಿನ ಸಂಕಲ್ಪದೊಂದಿಗೆ ದೀಪ ನಮಸ್ಕಾರ ಪೂಜೆ ನಡೆಯಲಿದೆ. ಮುಜರಾಯಿ ಇಲಾಖೆಯ ಹೆಸರನ್ನೂ ರಾಜ್ಯ ಸರ್ಕಾರವು ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಿದೆ. ಈ ಸಂಬಂಧ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.
‘ಮುಜರಾಯಿ’ ಪದವನ್ನೂ ಕೈಬಿಡಬೇಕೆಂಬ ಒತ್ತಾಯ ಕೇಳಿಬಂದಿದೆ. ‘ಈ ಮೊದಲು ಮುಜರಾಯಿ ಹೆಸರಿನ ಬಳಕೆ ನಿಲ್ಲಿಸಲಾಗಿತ್ತು. ಅದನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿ ಇಲಾಖೆ ಎಂದು ಕರೆಯಲು ನಿರ್ಧರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಬೇಕು’ ಎಂದು ಪರಿಷತ್ ಸದಸ್ಯರು ಹೇಳಿದ್ದಾರೆ.
ಇದನ್ನೂ ಓದಿ: ಮೇಲುಕೋಟೆಯಲ್ಲಿಯೂ ಸಲಾಂ ಆರತಿ ಹೆಸರು ತೆಗೆಯಲು ಸ್ಥಾನಿಕರಿಂದ ಮನವಿ
ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Sat, 10 December 22