Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ನಮ್ಮಲ್ಲಿ ಹಿಂದಿ ಬೇಡ ಎನ್ನುತ್ತಾರೆ. ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ. ಆದರೆ. ಇಂಗ್ಲಿಷ್ ಅನ್ನು ಹಾಗೆಯೇ ಬಿಡುತ್ತಾರೆ. ಇಂಗ್ಲಿಷ್ ನಮ್ಮ ಅಪ್ಪನ ಮನೆ ಭಾಷೆಯಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.

ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on: Dec 10, 2022 | 1:48 PM

ಧಾರವಾಡ: ಕರ್ನಾಟಕದಲ್ಲಿ (Karnataka) ಕನ್ನಡ (Kannada) ಭಾಷೆಗೇ ಮೊದಲ ಆದ್ಯತೆ ಇರಬೇಕು. ಕನ್ನಡದಲ್ಲಿಯೇ ಮಾತನಾಡಬೇಕು, ಕನ್ನಡದಲ್ಲಿಯೆ ವ್ಯವಹರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಧಾರವಾಡದ (Dharawad) ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (Dakshin Bharath Hindi Prachar Sabha) ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂಗ್ಲಿಷ್‌ಗೆ ಐದಾರು ನೂರು ವರ್ಷಗಳ ಇತಿಹಾಸ ಇದೆ. ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಚಿವರು ಹೇಳಿದರು.

ಇಂಗ್ಲಿಷ್ ನಮ್ಮ ಅಪ್ಪನ ಮನೆ ಭಾಷೆಯಾ?

‘ನಮ್ಮಲ್ಲಿ ಹಿಂದಿ ಬೇಡ ಎನ್ನುತ್ತಾರೆ. ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ. ಆದರೆ. ಇಂಗ್ಲಿಷ್ ಅನ್ನು ಹಾಗೆಯೇ ಬಿಡುತ್ತಾರೆ. ಇಂಗ್ಲಿಷ್ ನಮ್ಮ ಅಪ್ಪನ ಮನೆ ಭಾಷೆಯಾ ಎಂದು ಸಚಿವರು ಪ್ರಶ್ನಿಸಿದರು. ಇಂಗ್ಲಿಷ್ ನಮ್ಮನ್ನು ದಾಸ್ಯದಲ್ಲಿ ಇಟ್ಟವರ ಭಾಷೆ. ಮೆಕಾಲೆ ಆರಂಭಿಸಿದ ಉದ್ದೇಶವೇ ಅದು. ವ್ಯಕ್ತಿತ್ವ ನಿರೂಪಣೆ ಮಾಡುವ ಶಿಕ್ಷಣ ನಮ್ಮಲ್ಲಿತ್ತು. ಅದನ್ನು ನಿಲ್ಲಿಸಿ ಗುಲಾಮರನ್ನು ತಯಾರು ಮಾಡಬೇಕೆಂಬ ಸಂಚು ಮೆಕಾಲೆಗೆ ಇತ್ತು. ಅಂದಿನಿಂದ ಇಂಗ್ಲಿಷ್ ಶಿಕ್ಷಣ ಬಂತು. ನಮ್ಮಲ್ಲಿ ಕನ್ನಡ ಇಲ್ಲ ಅಂದ್ರೆ ಇಂಗ್ಲಿಷ್ ನಡೆಯುತ್ತದೆಯಂತೆ. ಇದು ವಿಚಿತ್ರ ಸ್ಥಿತಿ. ಇಂತಹ ಸ್ಥಿತಿ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ’ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲೂ ಪುನರಾವರ್ತನೆ: ಪ್ರಲ್ಹಾದ್ ಜೋಶಿ ವಿಶ್ವಾಸ

ನಾನೂ ಇಂಗ್ಲಿಷ್ ಮಾತನಾಡುತ್ತೇನೆ. ಆದರೆ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುತ್ತೇನೆ ಎಂದು ಅವರು ಹೇಳಿದರು.

ಜಗತ್ತು ಭಾರತದ ಕಡೆ ನೋಡುತ್ತಿದೆ

ಒಳ್ಳೆಯ ವೈದ್ಯರು, ಶಿಕ್ಷಕರು, ನರ್ಸ್, ಯೋಗ ಶಿಕ್ಷಕರಿಗಾಗಿ ಜಗತ್ತು ಇಂದು ಭಾರತದತ್ತ ನೋಡುತ್ತಿದೆ ಎಂದು ಜೋಶಿ ಹೇಳಿದರು. ಭಾರತದ ಚಿಕಿತ್ಸಾ ಪದ್ಧತಿಗೆ ಅದರದ್ದೇ ಆದ ಇತಿಹಾಸವಿದೆ. ಅನೇಕ ರೋಗಗಳಿಗೆ ಆಯುರ್ವೇದ, ಹೊಮೀಯೋಪಥಿಯಲ್ಲಿ ಮಾತ್ರ ಪರಿಹಾರ ಇದೆ. ಅಲೋಪಥಿ ವೈದ್ಯ ಪದ್ಧತಿ ಆರಂಭವಾದ ಮೇಲೆ ಭಾರತೀಯತೆಯಿಂದ ನಾವು ದೂರ ಸರಿದಿದ್ದೇವೆ. ನಮಗೇ ಗೊತ್ತಿಲ್ಲದಂತೆ ಗುಲಾಮಗಿರಿಯ ಭಾಗವಾಗಿದ್ದೇವೆ. ಇದರಿಂದಾಗಿ ಆಯುರ್ವೇದದಲ್ಲಿ ಹೆಚ್ಚಿನ ಸಂಶೋಧನೆಯಾಗಿಲ್ಲ. ನಮ್ಮ ಸರ್ಕಾರ ಆಯುರ್ವೇದ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಕೊಡುತ್ತಿದೆ. ಉಳಿದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಆಯುರ್ವೇದ ವಿಭಾಗ ಮಾಡಿದ್ದೇವೆ. ಆಯುರ್ವೇದ ಬೆಳೆಸುವುದಕ್ಕಾಗಿಯೇ ಆಯುಷ್ ಇಲಾಖೆ ಆರಂಭಿಸಿದ್ದೇವೆ. ನಾವು ಆಲೋಪಥಿ ವೈದ್ಯ ಪದ್ಧತಿಯನ್ನು ಅಲ್ಲಗಳೆಯುತ್ತಿಲ್ಲ. ಆದರೆ ನಮ್ಮ ವೈದ್ಯಕೀ ಪದ್ಧತಿಗೆ ಅದರದೇ ಆದ ಮಹತ್ವ ಇದೆ ಎಂದು ಜೋಶಿ ಹೇಳಿದ್ದಾರೆ.

ಹಿಂದಿ ಭಾಷೆ ಶಕ್ತಿಶಾಲಿ ಮಾಧ್ಯಮ: ರಾಜ್ಯಪಾಲ

ಪದವಿ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋತ್, ಹಿಂದಿ ಭಾಷೆ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಭಾರತದ ಶಕ್ತಿಶಾಲಿ ಮಾಧ್ಯಮ ಆಗಿದೆ ಎಂದರು. ಸಂಪರ್ಕ ಭಾಷೆಯ ಜೊತೆಗೆ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಅನೇಕ ದೇಶಗಳಲ್ಲಿ ಜನ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ. ಇಂಗ್ಲಿಷ್ ಒಂದೇ ವಿಕಾಸದ ಭಾಷೆ ಅನ್ನೋದು ಪೂರ್ಣಸತ್ಯ ಅಲ್ಲ. ಹೀಗಾಗಿ ನಾವೂ ನಮ್ಮ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವಂತಾಗಬೇಕು ಎಂದು ಅವರು ಹೇಳಿದರು.

ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿಸುವ ಪ್ರಯತ್ನ ನಡೆದಿದೆ. ಇದು ಒಳ್ಳೆಯದು. ಭಾರತ ಬಹುಭಾಷೆಯ ದೇಶ. ಇಲ್ಲಿ ನೂರಾರು ಭಾಷೆಗಳಿವೆ. ಅದರಲ್ಲಿ ಪ್ರಮುಖ ಭಾಷೆಗಳಿಗೆ ಸಂವಿಧಾನದ ಮಾನ್ಯತೆ ನೀಡಲಾಗಿದೆ. ಆಡಳಿತ ಭಾಷೆಗಾಗಿ ಅಧಿನಿಯಮಗಳನ್ನು ಮಾಡಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಲಾಗಿದೆ. ನಾವು ಭಾರತದ ಎಲ್ಲ ಭಾಷೆಗಳನ್ನು ಪ್ರೀತಿಸಿ, ಗೌರವಿಸಿ, ಕಲಿಯಬೇಕಿದೆ. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಇರುವವರು ಎಲ್ಲ ಭಾಷೆಗಳನ್ನು ಕಲಿಯಬೇಕು. ಭಾರತ ವಿವಿಧ ಭಾಷೆಗಳ ಮಧ್ಯೆಯೂ ಏಕತೆಯಿಂದ ಇದೆ ಎಂದು ರಾಜ್ಯಪಾಲರು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ