AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕಿ ವೇತನ ಪಾವತಿಗೆ ಕ್ರಮ: ಮುಷ್ಕರ ಹಿಂಪಡೆದ 108 ಆಂಬುಲೆನ್ಸ್ ಸಿಬ್ಬಂದಿ

108 ಆಂಬುಲೆನ್ಸ್ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ - ಮುಷ್ಕರ ನಡೆಸದಂತೆ ಸಿಬ್ಬಂದಿಗಳಿಗೆ ಕರೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬಾಕಿ ವೇತನ ಪಾವತಿಗೆ ಕ್ರಮ: ಮುಷ್ಕರ ಹಿಂಪಡೆದ 108 ಆಂಬುಲೆನ್ಸ್ ಸಿಬ್ಬಂದಿ
ಬಾಕಿ ವೇತನ ಪಾವತಿಗೆ ಕ್ರಮ ಕೈಗೊಂಡ ಹಿನ್ನೆಲೆ ಮುಷ್ಕರ ಹಿಂಪಡೆದ 108 ಆಂಬುಲೆನ್ಸ್​ ಸಿಬ್ಬಂದಿ
Follow us
Rakesh Nayak Manchi
|

Updated on:Jul 08, 2023 | 7:47 PM

ಬೆಂಗಳೂರು: ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ 108 ಆಂಬುಲೆನ್ಸ್ (108 Ambulance) ಸಿಬ್ಬಂದಿ ಮುಷ್ಕರಕ್ಕೆ ಮುಂದಾದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಷ್ಕರ ನಡೆಸದಂತೆ ಮನವಿ ಮಾಡಿದ್ದಾರೆ. ಸಚಿವರ ಸೂಚನೆಯ ಮೇರೆಗೆ 108 ಸಿಬ್ಬಂದಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಬಾಕಿ ವೇತನದ ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದಾರೆ. ಉಳಿದ ಕಂತುಗಳನ್ನು ಶೀಘ್ರದಲ್ಲಿ ಪಾವತಿಸುವ ಭರವಸೆ ನೀಡಿದ ಹಿನ್ನೆಲೆ ಮುಷ್ಕರ ನಡೆಸದಿರಲು 108 ಸಿಬ್ಬಂದಿ ನಿರ್ಧರಿಸಿದ್ದಾರೆ.

ವೇತನ ಬಾಕಿ ಇರುವ ಸಮಸ್ಯೆಯನ್ನ ಪರಿಹರಿಸುವುದಾಗಿ ಹೇಳಿದ ದಿನೇಶ್ ಗುಂಡೂರಾವ್, ಸೋಮವಾರದಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ 108 ಆಂಬುಲೆನ್ಸ್ ಸಿಬ್ಬಂದಿ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಸಿಬ್ಬಂದಿಗಳ ಸಮಸ್ಯೆಗಳನ್ನ ಆಲೀಸಲಿರುವ ಸಚಿವರು, ಅವರ ಬೇಡಿಕೆಗಳ ಬಗ್ಗೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.‌

ಇದನ್ನೂ ಓದಿ: B S Yediyurappa ಪುತ್ರ ವಿಜಯೇಂದ್ರ ಮಾತಿಗೆ ಕಣ್ಣರಳಿಸಿದ ಸಚಿವ ದಿನೇಶ್ ಗುಂಡೂರಾವ್

ಹಿಂದಿನ ಸರ್ಕಾರದ ಅವಧಿಯಲ್ಲಿ 108 ಗುತ್ತಿಗೆಯಲ್ಲಿ ಆದ ಎಡವಟ್ಟುಗಳಿಂದ ವೇತನ ಪಾವತಿಯಲ್ಲಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದು, ಸಿಬ್ಬಂದಿಗಳಿಗೆ ವೇತನದ ಸಮಸ್ಯೆಯಾಗದಂತೆ ಕ್ರಮ ವಹಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಆರೋಗ್ಯ ಸಚಿವ ಗುಂಡೂರಾವ್, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

40 ಕೋಟಿ ವೇತನ ಪಾವತಿ ಬಾಕಿಯಿದ್ದು, ಇಂದು ಮೊದಲ ಕಂತು 14 ಕೋಟಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಉಳಿದ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವರು ಸಿಬ್ಬಂದಿಗಳ ಜೊತೆ ಸಭೆ ನಡೆಸುವ ಭರವಸೆ ಸಿಕ್ಕ ಹಿನ್ನೆಲೆ ಮುಷ್ಕರ ನಡೆಸದಿರಲು ಸಿಬ್ಬಂದಿಗಳು ನಿರ್ಧರಿಸಿದ್ದಾರೆ. ಶೇ.15 ರಷ್ಟು ವೇತನ ಹೆಚ್ಚಳಕ್ಕೆ ಸಿಬ್ಬಂದಿಗಳು ಬೇಡಿಕೆಯಿಟ್ಟಿದ್ದು, ಈ ಬಗ್ಗೆಯೂ ಆರೋಗ್ಯ ಸಚಿವರು ಚರ್ಚಿಸಲಿದ್ದಾರೆ ಎಂದು ಆರೋಗ್ಯ ಆಯುಕ್ತ ರಂದೀಪ್ ಸಿಬ್ಬಂದಿ ವರ್ಗಕ್ಕೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Sat, 8 July 23