AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೀತಾ ಶಿವರಾಜ್​ಕುಮಾರ್​​ ಕಾಂಗ್ರೆಸ್​ ಸೇರ್ಪಡೆ ಸಂಗತಿ; ಡಿ.ಕೆ.ಶಿವಕುಮಾರ್​ ಮನೆಗೆ ಭೇಟಿ ನೀಡಿದ ನಟ ಶಿವರಾಜ್​ಕುಮಾರ್​​

ನಟ ಶಿವರಾಜ್​ಕುಮಾರ್​ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು, ಮುಂದಿನ ಹಂತದಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಬೆಳವಣಿಗೆಗೆ ಇದು ಕಾರಣವಾಗಲಿದೆ. ಶಿವರಾಜ್​ಕುಮಾರ್​ ಅವರ ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಗೀತಾ ಶಿವರಾಜ್​ಕುಮಾರ್​​ ಕಾಂಗ್ರೆಸ್​ ಸೇರ್ಪಡೆ ಸಂಗತಿ; ಡಿ.ಕೆ.ಶಿವಕುಮಾರ್​ ಮನೆಗೆ ಭೇಟಿ ನೀಡಿದ ನಟ ಶಿವರಾಜ್​ಕುಮಾರ್​​
ಶಿವರಾಜ್​ಕುಮಾರ್​ ಮತ್ತು ಡಿ.ಕೆ.ಶಿವಕುಮಾರ್​
Skanda
|

Updated on:Mar 15, 2021 | 12:09 PM

Share

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್​.ಬಂಗಾರಪ್ಪ ಅವರ ಕಿರಿಯ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್​ ತೊರೆದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಬಲ್ಲ ವಿದ್ಯಮಾನವೊಂದು ಘಟಿಸಿದೆ. ನನ್ನ ಜೊತೆ ಸಹೋದರಿ ಗೀತಾ ಶಿವರಾಜ್​ಕುಮಾರ್ ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಧು ಬಂಗಾರಪ್ಪ ನೀಡಿದ್ದ ಹೇಳಿಕೆಗೆ ಪೂರಕವಾಗಿ ಇದೀಗ ಗೀತಾ ಅವರ ಪತಿ ಹಾಗೂ ನಟ ಶಿವರಾಜ್​ಕುಮಾರ್​ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್​ ಪಕ್ಷಕ್ಕೆ ಸ್ವಾಗತಿಸುವ ಕುರಿತು ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿದ್ಯಾರ್ಥಿ ರಾಜಕಾರಣದ ದಿನಗಳಿಂದ ಬಂಗಾರಪ್ಪ ನನ್ನ ಬೆಂಬಲಕ್ಕೆ ನಿಂತವರು. ನನ್ನನ್ನು ಬೆಳೆಸಿದ ಧೀಮಂತ ನಾಯಕರವರು. ಕಾಂಗ್ರೆಸ್ ಕಟ್ಟುವಲ್ಲಿ ಬಂಗಾರಪ್ಪ ಪ್ರಮುಖರು. ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ದರು. ಅವರ ಮಗ ಮಧು ಬಂಗಾರಪ್ಪರನ್ನ ಪಕ್ಷಕ್ಕೆ ಸೆಳೆಯುತ್ತಿದ್ದೇವೆ. ಮಧು ಬಂಗಾರಪ್ಪರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದರು.

ಬಂಗಾರಪ್ಪ ಅವರಿಗೆ ಇಂದಿಗೂ ಅನೇಕ ಅಭಿಮಾನಿಗಳು ಇದ್ದಾರೆ. ಕಾಗೋಡು, ಜನಾರ್ದನ ಪೂಜಾರಿ, ಬಂಗಾರಪ್ಪ ಅಂತಹವರ ಕೊಡುಗೆ ಮರೆಯುವ ಹಾಗಿಲ್ಲ. ಇವತ್ತು ನಮ್ಮ ಪಕ್ಷ ಸೇರೋಕೆ ಬಂದಿದ್ದಾರೆ. ಅವರಿಗೆ ಕಾಂಗ್ರೆಸ್​ ಪಕ್ಷಕ್ಕೆ ಸೇರಲು ಸ್ವಾಗತ ‌ಮಾಡುತ್ತೇವೆ. ಯಾವ ರೀತಿ ಕಾರ್ಯಕ್ರಮ ‌ಮಾಡಿ ಕಾಂಗ್ರೆಸ್ ಸೇರಿಸಿಕೋಳ್ಳಬೇಕು ಅಂತ ತೀರ್ಮಾನ ‌ಮಾಡುತ್ತೇವೆ ಎಂದು ತಿಳಿಸಿದ್ದರು.

ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ್ದ ಮಧು ಬಂಗಾರಪ್ಪ, ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಕೂಡ ಭೇದಭಾವ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಬಂಗಾರಪ್ಪ ಅವರ ಅನುಯಾಯಿ. ನನಗೆ ಅಣ್ಣನ ರೀತಿಯಲ್ಲಿ ನೆರವಾಗಿ ಎಲ್ಲ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ಇಂದಿನಿಂದ ನಾನು ಕಾಂಗ್ರೆಸಿಗ. ಆಮೇಲೆ ಅಧಿಕೃತವಾಗಿ ಸೇರುತ್ತೇನೆ. ಹೆಚ್​.ಡಿ.ಕುಮಾರಸ್ವಾಮಿ ಏನೇ ಹೇಳಿದರೂ ಅವರ ಬಗ್ಗೆ ಗೌರವವಿದೆ. ಕಾಂಗ್ರೆಸ್ ಅವಶ್ಯಕತೆ ದೇಶಕ್ಕೆ, ಹಾಗೂ ರಾಜ್ಯಕ್ಕೆ ಇದೆ. ಹಿಂದೆ ‌ನಡೆದ ಘಟನೆ ಬಗ್ಗೆ ನಾನು ಈಗ ಮಾತನಾಡಲ್ಲ. ಜೆಡಿಎಸ್ ಬಿಟ್ಟ ಬಗ್ಗೆ ಕೂಡ ಮಾತನಾಡಲ್ಲ. ಹೆಚ್​.ಡಿ.ಕುಮಾರಸ್ವಾಮಿ ‌ಏನೇ ಅಂದರೂ ಅವರ ಬಗ್ಗೆ ಗೌರವಿದೆ. ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ನನ್ನೊಂದಿಗೆ ಗೀತಾ ಶಿವರಾಜ್‌ಕುಮಾರ್ ಸಹ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೇಳುವ ಮೂಲಕ ವರನಟ ಡಾ.ರಾಜ್​ಕುಮಾರ್​ ಅವರ ಸೊಸೆ ರಾಜಕಾರಣಕ್ಕೆ ಬರುವ ಕುರಿತು ಸುಳಿವು ನೀಡಿದ್ದರು.

ಇದೀಗ ಗೀತಾ ಅವರ ಪತಿ ಶಿವರಾಜ್​ಕುಮಾರ್​ ಅವರೇ ಡಿ.ಕೆ.ಶಿವಕುಮಾರ್​ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿರುವುದು ಈ ಮಾತಿಗೆ ಇನ್ನಷ್ಟು ಬಲ ತುಂಬುತ್ತಿದ್ದು, ಮುಂದಿನ ಹಂತದಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ರೀತಿಯ ಬೆಳವಣಿಗೆಗೆ ಇದು ಕಾರಣವಾಗಲಿದೆ. ಶಿವರಾಜ್​ಕುಮಾರ್​ ಅವರ ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್​ಕುಮಾರ್​, ನಾನು ರಾಜಕೀಯ ಮಾತನಾಡಲು ಹೋಗಿಲ್ಲ. ವೈಯಕ್ತಿಕ ವಿಚಾರಕ್ಕೆ ಭೇಟಿ ಮಾಡಲು ಬಂದಿದ್ದೆ. ಮಧು ಯಾವ ಪಕ್ಷಕ್ಕೆ ಹೋದರೂ ಒಳ್ಳೆಯದು ಆಗಬೇಕು ಎಂದು ಹೇಳಿದ್ದಾರೆ.

ಶಿವರಾಜ್‌ಕುಮಾರ್ ಭೇಟಿ ಬಳಿಕ ಮಾತನಾಡಿರುವ ಡಿ.ಕೆ.ಶಿವಕುಮಾರ್, ರಾಜ್‌ಕುಮಾರ್ ಕುಟುಂಬದ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಅವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಮೊದಲಿಂದಲೂ ಅಭಿಮಾನ, ಆತ್ಮೀಯತೆ ಇದೆ. ಅವರು ಭೇಟಿಯಾಗಿ ವೈಯಕ್ತಿಕ ವಿಚಾರ ಮಾತನಾಡಿದ್ದಾರೆ, ಅದನ್ನು ಹೇಳೋಕೆ ಆಗಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 125ನೇ ಚಿತ್ರದಲ್ಲಿ ಶಿವರಾಜ್​ಕುಮಾರ್​ ಡಿಫರೆಂಟ್​ ಲುಕ್​! ಶಿವರಾತ್ರಿ ದಿನವೇ ಸ್ಪೆಷಲ್​ ನ್ಯೂಸ್​ 

ನನ್ನನ್ನು ಬೆಳೆಸಿದ ಧೀಮಂತ ನಾಯಕ ಬಂಗಾರಪ್ಪ: ಡಿ.ಕೆ. ಶಿವಕುಮಾರ್

Published On - 11:13 am, Mon, 15 March 21