ಕೊವಿಡ್ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!
Acute Necrotizing Encephalopathy of Childhood: ಹೂವಿನಹಡಗಲಿಯ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್‌ನಲ್ಲಿ ವಯಸ್ಕರೊಬ್ಬರಲ್ಲಿ ಪತ್ತೆಯಾಗಿದೆ. ಆದರೆ ಬಾಲಕನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಜೊತೆಗೆ, ಎಸ್ಎಸ್ ಆಸ್ಪತ್ರೆಯಲ್ಲಿ ಇಂತಹ ಲಕ್ಷಣ ಇರುವ ಆರು ಮಕ್ಕಳಿದ್ದಾರೆ.
ದಾವಣಗೆರೆ: ದೇಶದಲ್ಲಿ ವಿರಳವಾದ ಕಾಯಿಲೆಯೊಂದು ದಾವಣಗೆರೆ ಎಸ್ಎಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. 13 ವರ್ಷದ ಬಾಲಕನಿಗೆ ಅಪರೂಪದ ಎನೆಕ್ ಎಂಬ ಈ ಕಾಯಿಲೆ ಬಂದಿದೆ. ಅಕ್ಯುಟ್ ನೆಕ್ರೋಟೈಜಿಂಗ್ ಎನ್ಸೆಫಲೋಪತಿ (ANEC case- acute necrotizing encephalopathy of childhood) ಎಂಬ ಕಾಯಿಲೆಯು ಎಸ್ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆಯಲ್ಲಿ ಮಗುವಿಗೆ ಇರುವುದು ಪತ್ತೆಯಾಗಿದೆ. ಆತಂಕಕಾರಿಯೆಂದರೆ ವಿಶೇಷವಾಗಿ ಕೋವಿಡ್ ಸೋಂಕಿನಿಂದ ಗುಣಮುಖವಾದ ಮಕ್ಕಳಲ್ಲಿ ಈ ಕಾಯಿಲೆ ಪತ್ತೆಯಾಗಿದೆ.
ದಾವಣಗೆರೆಯ ಎಸ್ಎಸ್ ಆಸ್ಪತ್ರೆ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನ್ನವರ ನೇತೃತ್ವದ ವೈದ್ಯರ ತಂಡ ಇದನ್ನು ಪತ್ತೆ ಹಚ್ಚಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್‌ನಲ್ಲಿ ವಯಸ್ಕರೊಬ್ಬರಲ್ಲಿ ಪತ್ತೆಯಾಗಿದೆ. ಆದರೆ ಬಾಲಕನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು.
ಮಕ್ಕಳಿಗೆ ಚಿಕಿತ್ಸೆ ನೀಡುತ್ತರುವ ಎಸ್ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ. ನಿಜಲಿಂಗಪ್ಪ ಕಾಳಪ್ಪನ್ನವರ ಅವರು ಹೇಳುವುದಿಷ್ಟು:
1. ವಿಶೇಷವಾಗಿ ಈ ಕಾಯಿಲೆ ಎಸಿಂಪ್ಟಾಮೆಟೆಕ್ ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಪತ್ತೆಯಾಗಿದೆ (A rare post-covid complication ANEC case). ಕಾರಣ ಬಹುತೇಕ ಮಕ್ಕಳಿಗೆ ಕೋವಿಡ್ ಬಂದು ಹೋಗಿರುತ್ತದೆ. ಆದ್ರೆ ಆ ಮಕ್ಕಳಿಗೆ ಕೋವಿಡ್ ಲಕ್ಷಣವೇ ಇರಲ್ಲ. ಹೀಗಾಗಿ ಸೂಕ್ತ ಚಿಕಿತ್ಸೆ ನೀಡಿರಲ್ಲ.
ANEC ಕಾಯಿಲೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ. ಇದು ಮಲ್ಟಿ ಸಿಸ್ಟಂ ಇನ್ಫ್ಲಮೇಟರಿ ಸಿಂಡ್ರೋಮ್ (Multisystem Inflammatory Syndrome, MIS-C) ಕಾಯಿಲೆ ಮಾದರಿಯಲ್ಲೇ ಇರುತ್ತದೆ. ಈಗಾಗಲೇ ಎಸ್ಎಸ್ ಆಸ್ಪತ್ರೆಯಲ್ಲಿ MIS-C ಲಕ್ಷಣ ಇರುವ ಆರು ಮಕ್ಕಳಿದ್ದಾರೆ. ಇವರೆಲ್ಲ ಕೋವಿಡ್ ನಿಂದ ಗುಣಮುಖರಾದವರೇ.
2. ಈ ಕಾಯಿಲೆ ಪತ್ತೆಯಾದ ತಕ್ಷಣ ಮಕ್ಕಳಿಗೆ ಕೆಲ ವೈದ್ಯಕೀಯ ಪರೀಕ್ಷೆ ಎಂಆರ್ ಐ, ಕೋವಿಡ್ ಟೆಸ್ಟ್ ಹಾಗೂ ಯಾವ ಅಂಗದ ಮೇಲೆ ದಾಳಿ ಮಾಡಿದೆ ಆ ಅಂಗಕ್ಕೆ ಪ್ರತ್ಯೇಕ ಚಿಕಿತ್ಸೆ ನೀಡಬೇಕಾಗುತ್ತದೆ. ಇದಕ್ಕೆ ಇಮ್ಯುನೋಗ್ಲೋಬುಲಿನ್ (immunoglobulin) ಔಷಧ ನೀಡಲಾಗುತ್ತದೆ. ಈ ಔಷಧಿಗೆ ಐದು ಗ್ರಾಂಗೆ 14 ಸಾವಿರ ರೂಪಾಯಿ ತಗಲುತ್ತದೆ. ಉದಾಹರಣೆಗೆ 30 ಕೆಜಿ ಮಗು ಇದ್ದರೆ ಇದಕ್ಕೆ ಅಂದಾಜು ಒಂದು ಲಕ್ಷ ರುಪಾಯಿ ವೆಚ್ಚವಾಗುತ್ತದೆ.
3. ದೇಶದಲ್ಲಿ ಯಾವುದೇ ಕಾಯಿಲೆ ಕಾಣಿಸಿಕೊಂಡರೆ ಅದು ಇಂಡಿಯನ್ ಮೆಡಿಕಲ್ ಜರ್ನಲ್ನಲ್ಲಿ ದಾಖಲಾಗುತ್ತದೆ. ಮಕ್ಕಳಿಗೆ ಈ ಕಾಯಿಲೆ ಬಂದಿದ್ದು ಇನ್ನೂ ಎಲ್ಲಿಯೂ ದಾಖಲಾಗಿಲ್ಲ. ಹೀಗಾಗಿ ಇದೇ ಮೊದಲು ಮಕ್ಕಳಲ್ಲಿ ಕಾಣಿಸಿಕೊಂಡ ಕಾಯಿಲೆಯಾಗಿದೆ.
(acute necrotizing encephalopathy of childhood found in ss hospital davanagere)
Published On - 11:09 am, Sat, 26 June 21