ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡ್ತಿದ್ದಾರೆ: ಜಿಟಿ ದೇವೇಗೌಡ ವಾಗ್ದಾಳಿ

| Updated By: Ganapathi Sharma

Updated on: Nov 24, 2024 | 2:51 PM

ಚನ್ನಪಟ್ಟಣದಲ್ಲಿ ಉಪಚುನಾವಣೆ ಸೋಲು ಜೆಡಿಎಸ್​ ಆಂತರಿಕ ಸಂಘರ್ಷ ತಾರಕಕ್ಕೇರಲು ಕಾರಣವಾಗಿದೆ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಲ್ಲದೆ, ತೀವ್ರ ವಾಗ್ದಾಳಿಯನ್ನೂ ನಡೆಸಿದ್ದಾರೆ. ಜಿಟಿ ದೇವೇಗೌಡ ಮಾತಿನ ವಿವರ ಇಲ್ಲಿದೆ.

ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡ್ತಿದ್ದಾರೆ: ಜಿಟಿ ದೇವೇಗೌಡ ವಾಗ್ದಾಳಿ
ಜಿಟಿ ದೇವೇಗೌಡ, ಹೆಚ್​​​ಡಿ ಕುಮಾರಸ್ವಾಮಿ
Follow us on

ಮೈಸೂರು, ನವೆಂಬರ್ 24: ಉಪಚುನಾವಣೆ ಹೊತ್ತಿನಲ್ಲಿ ಬದಿಗೆ ಸರಿದಿದ್ದ ಜೆಡಿಎಸ್ ಆಂತರಿಕ ಸಂಘರ್ಷ ಫಲಿತಾಂಶದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಫಲಿತಾಂಶದ ಬಳಿಕ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ವಿರುದ್ಧ ಜಿಟಿಡಿ ನೇರನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಜೆಡಿಎಸ್ ನಾಯಕರು ಕೂಡ ತಿರುಗೇಟು ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಜಿಟಿ ದೇವೇಗೌಡ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಈಗ ಬಿಜೆಪಿಯನ್ನು ತಬ್ಬಿಕೊಂಡಿದ್ದಾರೆ. ಬಿಜೆಪಿ ಜೊತೆ ಹೋಗದಿದ್ರೆ ಜೆಡಿಎಸ್ ಏನಾಗುತ್ತಿತ್ತು, ದಳ ಉಳಿಯುತಿತ್ತೇ? ದೇವರು, ದೇವೇಗೌಡರ ಶ್ರಮದಿಂದ ಜೆಡಿಎಸ್​​ ಪಕ್ಷ ಉಳಿಯುತ್ತಿದೆ. ಮುನಿಸು ಇದ್ದಾಗಲೂ ದೇವೇಗೌಡರು ಮಾತನಾಡುತ್ತಿದ್ದರು. ಸಾ.ರಾ.ಮಹೇಶ್ ತೋಟಕ್ಕೆ ಬಂದು ಹೋದರು, ಆಗಲೂ ಮಾತನಾಡಲಿಲ್ಲ. ಅವರಿಗೂ ನಾನು ಬೇಕಾಗಿಲ್ಲ ಅನಿಸುತ್ತದೆ ಎಂದು ಜಿಟಿ ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಜೊತೆ ಇದ್ದವರೇ ಸಾರಾ ಮಹೇಶ್​ಗೆ ಬೇಕಾಗಿತ್ತು. ನಾನು ಈಗ ಹೇಗಿದ್ದೇನೆ ಅದೇ ರೀತಿ ಇರುತ್ತೇನೆ. ಇನ್ನೂ ಮೂರು ವರ್ಷ ಶಾಸಕನಾಗಿ ಇರುತ್ತೇನೆ. ನಮ್ಮ ಜನ ಎಷ್ಟು ಕಷ್ಟ ಆದರೂ ಇರು ಅಂದಿದ್ದಾರೆ, ಅದಕ್ಕಾಗಿ ಇರುತ್ತೇನೆ. ಕ್ಷೇತ್ರದ ಜನರು ತೀರ್ಮಾನ ಮಾಡಬೇಕು ಎಂದು ಅವರು ಹೇಳಿದರು.

ಜಿಟಿ ದೇವೇಗೌಡ ವಾಗ್ದಾಳಿ ಇದೇ ಮೊದಲಲ್ಲ

ಅಂದಹಾಗೆ, ಜಿಟಿ ದೇವೇಗೌಡರು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದು, ಟೀಕಿಸಿದ್ದು ಇದೇ ಮೊದಲಲ್ಲ. ಹಿಂದೊಮ್ಮೆ ಮೈಸೂರಿನಲ್ಲಿ ಮುಡಾ ಕೇಸ್ ಬಗ್ಗೆ ಮಾತನಾಡಿದ್ದ ಜಿಟಿ ದೇವೇಗೌಡ, ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರೆಯೇ ಎಂದು ಬಹಿರಂಗ ವೇದಿಕೆಯಲ್ಲೇ ಗುಡುಗಿದ್ದರು. ಅಂದಿನಿಂದ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ತೀವ್ರಗೊಂಡಿತ್ತು. ಇದೇ ಬಡಿದಾಟ ಮತ್ತೊಮ್ಮೆ ಸ್ಫೋಟಗೊಂಡಿದೆ. ಇಡೀ ಚುನಾವಣೆಯಿಂದ ದೂರವೇ ಉಳಿದಿದ್ದ ಜಿಡಿಟಿ ಇದೀಗ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ!

ಏತನ್ಮಧ್ಯೆ, ಜೆಡಿಎಸ್ ಆಂತರಿಕ ಸಂಘರ್ಷ ಜೋರಾಗುತ್ತಿರುವ ಹೊತ್ತಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ನಾಯಕರೇ ಸಹಾಯ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ