ಬಸ್​ಗಳಲ್ಲೂ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್​ಗಳಿಗೆ ಹೊಸ ನಿಯಮ

ಕಳೆದ ತಿಂಗಳು ಚಿತ್ರದುರ್ಗದ ಹಿರಿಯೂರಿನ ಬಳಿ ಖಾಸಗಿ ಬಸ್ ಅಗ್ನಿ ದುರಂತಕ್ಕೀಡಾದ ನಂತರ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಾರಿಗೆ ಇಲಾಖೆ, ಖಾಸಗಿ ಬಸ್​ಗಳಿಗೆ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅಲ್ಲದೆ, ಅವುಗಳನ್ನು ಅನುಸರಿಸುವಂತೆ ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಸಾರಿಗೆ ಇಲಾಖೆ ಖಾಸಗಿ ಬಸ್​ಗಳಿಗೆ ನೀಡಿರುವ ಸೂಚನೆಗಳ ಮಾಹಿತಿ ಇಲ್ಲಿದೆ.

ಬಸ್​ಗಳಲ್ಲೂ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್​ಗಳಿಗೆ ಹೊಸ ನಿಯಮ
ಸಾಂದರ್ಭಿಕ ಚಿತ್ರ
Edited By:

Updated on: Jan 20, 2026 | 8:07 AM

ಬೆಂಗಳೂರು, ಜನವರಿ 20: ಕಳೆದ ತಿಂಗಳು, ಅಂದರೆ ಡಿಸೆಂಬರ್ 25 ರಂದು ತಡರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್​​ (Private Bus) ಬೆಂಕಿಗೆ ಆಹುತಿಯಾಗಿ 8 ಜನ ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಖಾಸಗಿ ಬಸ್​ಗಳಿಗೆ ಕೆಲವೊಂದು ನಿಯಮಗಳನ್ನು ಅನುಸರಿಸುವಂತೆ ಖಡಕ್ ಆಗಿ ಸೂಚನೆ ನೀಡಿದೆ. ವಿಮಾನದಲ್ಲಿ ಟೇಕ್ ಆಫ್​ಗೂ ಮುನ್ನ ಗಗನಸಖ-ಸಖಿಯರು ನೀಡುವ ಸಂದೇಶದಂತೆ, ಖಾಸಗಿ ಬಸ್​​ಗಳಲ್ಲೂ ಸಂದೇಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ವಿಮಾನದಲ್ಲಿ ಟೇಕ್ ಆಫ್ಫ್​ ಆಗುವುದಕ್ಕೂ ಮುನ್ನ ಪ್ರಯಾಣಿಕರಿಗೆ ಎಮರ್ಜನ್ಸಿ ದ್ವಾರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿ ತುರ್ತು ನಿರ್ಗಮನದ ಮೂಲಕ ಹೇಗೆ ನಿರ್ಗಮಿಸಬೇಕೆಂದು ತಿಳಿಸುತ್ತಾರೆ. ಆದೇ ರೀತಿಯಲ್ಲಿ ಬಸ್ ಪ್ರಯಾಣಿಕರಿಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಅಂದರೆ, ಖಾಸಗಿ ಬಸ್ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬಸ್ ಹೊರಡುವ ಮುನ್ನ ಪ್ರಯಾಣಿಕರಿಗೆ ಕಂಡಕ್ಟರ್ ಅಥವಾ ಚಾಲಕರಿಂದ ಸುರಕ್ಷತಾ ಮಾಹಿತಿ ನೀಡುವುದು ಕಡ್ಡಾಯ. ತುರ್ತು ನಿರ್ಗಮನ ದ್ವಾರಗಳು ಎಲ್ಲೆಲ್ಲಿವೆ, ಎಮೆರ್ಜನ್ಸಿ ವಿಂಡೋಗಳು ಎಲ್ಲಿವೆ, ಹೇಗೆ ಗಾಜಿನ ಕಿಟಕಿಯನ್ನು ಒಡೆದು ಪಾರಾಗಬೇಕು ಎಂಬ ಎಲ್ಲ ಮಾಹಿತಿಯನ್ನು ಪ್ರತಿ ಪ್ರಯಾಣಿಕನಿಗೆ ನೀಡಬೇಕು. ಎಮೆರ್ಜನ್ಸಿ ವಿಂಡೋಗಳಿರುವ ಸೀಟ್​​ಗಳನ್ನು ಯುವಕರು ಅಥವಾ ಮದ್ಯವಯಸ್ಕರರಿಗೆ ನೀಡಬೇಕೆಂದು ಸಲಹೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಕ್ಕಾಗಿ ಈ ಮಾಹಿತಿಗಳನ್ನು ಬಸ್ ಹೊರಡುವ ಮುನ್ನ ನೀಡುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಬಸ್ ಮಾಲೀಕರಿಗೆ ತಿಳಿಸಿದೆ. ಹೀಗೆ ಮಾಹಿತಿ ನೀಡುವುದರಿಂದ ಅವಘಡಗಳು ಸಂಭವಿಸಿದಾಗ, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ಇಲಾಖೆಯ ಅಭಿಪ್ರಾಯ.

ಇದನ್ನೂ ಓದಿ: ತಮ್ಮದೇ ಯುಪಿಐ ಸ್ಕ್ಯಾನರ್ ನೀಡಿ ಹಣ ಜೇಬಿಗಿಳಿಸ್ತಾರೆ ಬಿಎಂಟಿಸಿ ಕೆಲ ಕಂಡಕ್ಟರ್​ಗಳು! ನಿಗಮಕ್ಕೆ ಲಕ್ಷಾಂತರ ರೂ. ನಷ್ಟ

ಸಾರಿಗೆ ಇಲಾಖೆಯ ಅಧಿಕಾರಿಗಳ ಸೂಚನೆಗಳನ್ನು ಸ್ವಾಗತಿಸುತ್ತೇವೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಚಿತ್ರದುರ್ಗದ ಘಟನೆಯಿಂದ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಕೆಲವು ನಿಯಮಗಳನ್ನು ಅನುಸರಿಸಲು ಖಾಸಗಿ ಬಸ್​​ಗಳಿಗೆ ಸೂಚನೆ ನೀಡಿದ್ದು, ಇದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 am, Tue, 20 January 26