ತಮ್ಮದೇ ಯುಪಿಐ ಸ್ಕ್ಯಾನರ್ ನೀಡಿ ಹಣ ಜೇಬಿಗಿಳಿಸ್ತಾರೆ ಬಿಎಂಟಿಸಿ ಕೆಲ ಕಂಡಕ್ಟರ್ಗಳು! ನಿಗಮಕ್ಕೆ ಲಕ್ಷಾಂತರ ರೂ. ನಷ್ಟ
‘ಶಕ್ತಿ’ ಯೋಜನೆ, ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಕೀಂ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ಕಂಡಕ್ಟರ್ಗಳು ಮಾತ್ರ, ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡಿ ನಿಗಮಕ್ಕೆ ಸೇರಬೇಕಿದ್ದ, ಲಕ್ಷ ಲಕ್ಷ ರೂ. ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಅದ್ಹೇಗೆಂದು ಇಲ್ಲಿದೆ ನೋಡಿ.

ಬೆಂಗಳೂರು, ಜನವರಿ 20: ಬಿಎಂಟಿಸಿ (BMTC) ಬಸ್ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ನಿಗಮವು ಯುಪಿಐ ಸ್ಕ್ಯಾನರ್ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್ಗಳು ಬಿಎಂಟಿಸಿ ಬಸ್ನಲ್ಲಿರುವ ಯುಪಿಐ ಸ್ಕ್ಯಾನರ್ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ಗಳನ್ನು (UPI Scanner) ನೀಡಿ, ತಮ್ಮ ಬ್ಯಾಂಕ್ ಅಕೌಂಟ್ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡ ಬಾರದವರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಪೀಕಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.
ತನಿಖೆಯಲ್ಲಿ ಬಯಲಾಯ್ತು ಬಿಎಂಟಿಸಿ ಬಸ್ ಕಂಡಕ್ಟರ್ಗಳ ಕಳ್ಳಾಟ
ಇದೀಗ ತನಿಖೆ ವೇಳೆ ಕೂಡ, ಕಂಡಕ್ಟರ್ಗಳ ಕಳ್ಳಾಟ ಬಯಲಾಗಿದೆ. ಪ್ರತಿಯೊಬ್ಬರ ಅಕೌಂಟ್ನಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ಬಯಲಿಗೆ ಬಂದಿದೆ.
ವಂಚನೆ ಎಸಗಲು ಉಪಯೋಗಿಸುವ ತಂತ್ರ ಇದುವೇ ನೋಡಿ!
ಶಕ್ತಿ ಯೋಜನೆಯ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ‘ಉಚಿತ ಟಿಕೆಟ್’ ಎಂದು ಪ್ರಿಂಟ್ ಮಾಡಲಾಗಿದೆ. ಇಂಗ್ಲಿಷ್ನಲ್ಲಿ‘ಫ್ರೀ ಟಿಕೆಟ್’ ಎಂದು ಪ್ರಿಂಟ್ ಮಾಡಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳ ಜನರಿಗೆ ಶಕ್ತಿ ಯೋಜನೆಯ ಟಿಕೆಟ್ ನೀಡುವ ಕಂಡಕ್ಟರ್ಗಳು ಅವರಿಂದ ವೈಯಕ್ತಿಕ ಯುಪಿಐ ಸ್ಕ್ಯಾನರ್ಗೆ ದುಡ್ಡು ಹಾಕಿಸಿಕೊಳ್ಳುತ್ತಾರೆ.
ಈ ಕಿಲಾಡಿ ಕಂಡಕ್ಟರ್ಗಳು ಡಿಪೋದಿಂದ ಬಸ್ಗಳು ಹೊರಗೆ ಬರುತ್ತಿದ್ದಂತೆಯೇ ಬಸ್ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರೆ. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್ನಲ್ಲಿರುವಸ್ಕ್ಯಾನರ್ಗಳನ್ನು ನೀಡಿ ಪ್ರಯಾಣಿಕರಿಂದ ಸ್ವಂತ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ಗಳು ಸಿಕ್ಕಿಹಾಕಿಕೊಂಡಿದ್ದಾರೆ. ಪ್ರತಿಯೊಬ್ಬರ ಅಕೌಂಟ್ನಲ್ಲಿ 50 ಸಾವಿರ ರೂಪಾಯಿವರೆಗೆ ಯುಪಿಐ ಮಾಡಿಸಿಕೊಂಡಿರುವುದು ಬಯಲಾಗಿದೆ. ಈಗಾಗಲೇ ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳು ಈ ಮಾಹಿತಿಯನ್ನು ಬಿಎಂಟಿಸಿ ಎಂಡಿ ಶಿವಕುಮಾರ್ಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?
ಒಟ್ಟಿನಲ್ಲಿ ಶಕ್ತಿ ಯೋಜನೆಯ ಟಿಕೆಟ್ಗಳನ್ನು ಹೊರ ರಾಜ್ಯದವರಿಗೆ ಕೊಡುತ್ತಿರುವುದು, ನಿಗಮದ ಯುಪಿಐ ಸ್ಕ್ಯಾನರ್ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್ಗಳನ್ನು ನೀಡಿ ಹಣ ಹಾಕಿಸಿಕೊಳ್ಳುತ್ತಿರುವ ಕಂಡಕ್ಟರ್ಗಳ ವಿರುದ್ಧ ಬಿಎಂಟಿಸಿ ನಿಗಮ ಕಠಿಣ ಕ್ರಮ ಕೈಗೊಳ್ಳದೇ ಹೋದರೆ ಮತ್ತಷ್ಟು ಕಂಡಕ್ಟರ್ಗಳು ಈ ದಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.