ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ಸಿಎಂ ಆಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಪೊಲೀಸ್ ಇಲಾಖೆಗೆ ಸೂಚನೆಗಳನ್ನ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ರೌಡಿಸಂ ನಿಯಂತ್ರಣಕ್ಕೆ ಸ್ಕ್ವಾಡ್ ರಚಿಸುವಂತೆ ಹೇಳಿದ್ದರು. ಅದರಂತೆ ಇದೀಗ ರಾಜ್ಯಾದಾದ್ಯಂತ ರೌಡಿಸಂ ನಿಯಂತ್ರಣಕ್ಕೆ ಗೃಹ ಇಲಾಖೆ ಹೊಸ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ.

ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ
ಡಿಕೆ ಶಿವಕುಮಾರ್
Image Credit source: tv9

Updated on: Jun 07, 2026 | 10:30 PM

ಬೆಂಗಳೂರು, (ಜೂನ್ 07): ಸಿಎಂ ಡಿಕೆ ಶಿವಕುಮಾರ್ (CM DK Shivakumar) ಸೂಚನೆಯಂತೆ ಪೊಲೀಸ್ ಇಲಾಖೆಯು (Karnataka Police Department) ರೌಡಿಸಂ ನಿಯಂತ್ರಣಕ್ಕೆ ಹೊಸ ಕ್ರಮ ಕೈಗೊಂಡಿದೆ. ಪ್ರತಿ ಪೊಲೀಸ್ ವಲಯ ಮತ್ತು ಠಾಣೆ ಮಟ್ಟದಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ಗಳನ್ನು ರಚಿಸಲು ಆದೇಶಿಸಲಾಗಿದೆ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪರಿಶೋಧಕ ಡಾ. ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಈ ಕ್ರಮಕೈಗೊಂಡಿದ್ದಾರೆ.

ಮುಖ್ಯಾಂಶಗಳು

  • ಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ರೌಡಿಸಂ ನಿರ್ಮೂಲನೆಗೆ ಕಠಿಣ ಕ್ರಮ
  • ರೌಡಿಸಂ ನಿರ್ಮೂಲನೆಗೆ ದಿಟ್ಟ ಕ್ರಮಕೈಗೊಂಡ ಪೊಲೀಸ್ ಇಲಾಖೆ
  • ಪ್ರತಿ ಪೊಲೀಸ್ ಠಾಣೆಯಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್‌ ರಚನೆಗೆ ಆದೇಶ
  • ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ

ರೌಡಿಸಂ ನಿರ್ಮೂಲನೆಗೆ ಕಠಿಣ ಕ್ರಮ

ರೌಡಿ ಅಂಶಗಳು ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ. ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುತ್ತವೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡುತ್ತವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ನಿರ್ದೇಶನದಂತೆ, ರೌಡಿಸಂ ನಿರ್ಮೂಲನೆಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ‎ಪೊಲೀಸ್ ಮುಖ್ಯ ಕಚೇರಿಯಿಂದ ಸಮಯಕ್ಕೊಮ್ಮೆ ನೀಡಲಾಗುವ ನಿರ್ದೇಶನಗಳಂತೆ, ಎಲ್ಲಾ ಅಧಿಕಾರಿಗಳು ರೌಡಿಸಂ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಸರ್ಕಲ್ ಇನ್ಸ್‌ಪೆಕ್ಟರ್‌ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ರೌಡಿ ಸ್ಕ್ವಾಡ್ ರಚಿಸಲಾಗುವುದು. ಪೊಲೀಸ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದ ಠಾಣೆಗಳಲ್ಲಿ ಪ್ರತ್ಯೇಕ ಸ್ಕ್ವಾಡ್‌ಗಳೂ ರಚಿಸಲಾಗುವುದು. ಸ್ಕ್ವಾಡ್‌ನ ಸಂಯೋಜನೆ ಸ್ಥಳೀಯ ಅಗತ್ಯತೆ ಮತ್ತು ಅಪರಾಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಪ ವಿಭಾಗಾಧಿಕಾರಿ ಅಥವಾ ಎಸಿಪಿ ನಿರ್ಧರಿಸಲಿದ್ದಾರೆ.

ಇದನ್ನೂ ನೋಡಿ: ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿದ ಡಿಕೆ ಶಿವಕುಮಾರ್, ರೌಡಿ ನಿಗ್ರಹ ತಂಡ ರಚನೆಗೆ ಆದೇಶ

ರೌಡಿ ಸ್ಕ್ವಾಡ್‌ಗಳು ಅಪರಾಧ ಪ್ರಕರಣಗಳ ಪರಿಶೀಲನೆ ನಡೆಸಿ ಹೊಸ ರೌಡಿ ಶೀಟ್‌ಗಳನ್ನು ತೆರೆಯುವ ಕಾರ್ಯ ಕೈಗೊಳ್ಳಬೇಕು. ರೌಡಿ ಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಯಮಿತ ನಿಗಾವಹಣೆ ನಡೆಸಬೇಕು. ಹೊಸ ರೌಡಿ ಅಂಶಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಆಕ್ಷನ್‌ಬಲ್ ಇಂಟೆಲಿಜೆನ್ಸ್ ಸಂಗ್ರಹಿಸಬೇಕು. ಪಿಎಆರ್, ಗುಂಡಾ ಕಾಯ್ದೆ, ಕೆಸಿಒಸಿಎ ಕಾಯ್ದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಬೀಟ್ ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು ಹಾಗೂ ಅಪಾಯದ ಪ್ರದೇಶಗಳಲ್ಲಿ ವಿಶೇಷ ಡ್ರೈವ್‌ಗಳು ಮತ್ತು ಅಚ್ಚರಿ ತಪಾಸಣೆಗಳು ನಡೆಸಬೇಕು.

ಪ್ರತಿ ಸ್ಕ್ವಾಡ್‌ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್

‎ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಮತ್ತು ಠಾಣಾ ಅಧಿಕಾರಿಗಳು ಪ್ರತಿ ಪಕ್ಷಾವಧಿಯಲ್ಲಿ ಸ್ಕ್ವಾಡ್ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು. ಎಸ್‌ಡಿಪಿಒಗಳು ಮತ್ತು ಎಸಿಪಿಗಳು ಮಾಸಿಕ ಅಪರಾಧ ಸಭೆಗಳಲ್ಲಿ ಸ್ಕ್ವಾಡ್‌ಗಳ ಕಾರ್ಯಕ್ಷಮತೆಯನ್ನು ವಿಮರ್ಶಿಸಬೇಕು. ಪ್ರತಿ ಸ್ಕ್ವಾಡ್‌ನ ಚಟುವಟಿಕೆಗಳ ದಾಖಲಾತಿಗಾಗಿ ಪ್ರತ್ಯೇಕ ರಿಜಿಸ್ಟರ್ ಇರಬೇಕು ಮತ್ತು ಮಾಸಿಕ ವರದಿಗಳನ್ನು ಡಿಓ ಪತ್ರದ ರೂಪದಲ್ಲಿ ಸಲ್ಲಿಸಬೇಕು.

‎ಪೊಲೀಸ್ ಅಧಿಕಾರಿಗಳು ರೌಡಿಸಂ ಮತ್ತು ಅಸಾಮಾಜಿಕ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಯಾವುದೇ ರೀತಿಯ ಬೆದರಿಕೆ, ಬಲವಂತದ ಹಣ ಸಂಗ್ರಹಣೆ, ಗ್ಯಾಂಗ್ ಚಟುವಟಿಕೆ ಅಥವಾ ಸಾರ್ವಜನಿಕ ಅಶಾಂತಿ ಕಂಡುಬಂದರೆ ಕಾನೂನಿನ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

‎ಎಲ್ಲಾ ಘಟಕಾಧಿಕಾರಿಗಳು ಈ ಸರ್ಕ್ಯುಲರ್‌ನ್ನು ಸ್ವೀಕರಿಸಿ ಏಳು ದಿನಗಳೊಳಗೆ ರೌಡಿ ಸ್ಕ್ವಾಡ್ ರಚನೆಯ ವರದಿ ಸಲ್ಲಿಸಬೇಕು. ಸರ್ಕ್ಯುಲರ್‌ನ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ನಿರ್ದೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 pm, Sun, 7 June 26

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us