ಮುರುಗೇಶ್ ನಿರಾಣಿ ನಂತರ ದೆಹಲಿಗೆ ತೆರಳಿರುವ ಬಸನಗೌಡ ಪಾಟೀಲ್ ಯತ್ನಾಳ್,ರಾಜ್ಯ ಬಿಜೆಪಿ ಘಟಕದಲ್ಲಿ ಗೊಂದಲ
ಮೊನ್ನೆಯಷ್ಟೇ ಯೋಗೀಶ್ವರ್ ಜೊತೆ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿರುವ ಮುರುಗೇಶ್ ನಿರಾಣಿ ಅವರು ಸಹ ದೆಹಲಿಗೆ ಹೋಗಿ ಬಂದಿದ್ದಾರೆ. ಮೂಲಗಳ ಪ್ರಕಾರ ಅವರು ಸಹ ಯಡಿಯೂರಪ್ಪನ ವಿರೋಧಿ ಕ್ಯಾಂಪ್ನಲ್ಲಿ ಗುರುತಿಸಿಕೊಂಡವರು.
ಬೆಂಗಳೂರು: ಕರ್ನಾಟಕದ ಬಿಜೆಪಿ ಧುರೀಣರಿಗೆ ದೆಹಲಿಗೆ ಹೋಗಿ ಬರುವುದು ಬೆಡ್ರೂಮಿನಿಂದ ಹಾಲ್ಗೆ ಬರುವಷ್ಟೇ ಸುಲಭ ಎನ್ನುವಂತಿದೆ. ಇವರು ತಾವಾಗಿಯೇ ಅಲ್ಲಿಗೆ ಹೋಗುತ್ತಾರೋ ಅಥವಾ ದೆಹಲಿಯ ವರಿಷ್ಠರು ಕರೆಸಿಕೊಳ್ಳ್ಳುತ್ತಾರೋ ಅನ್ನುವುದು ಕನ್ನಡಿಗರಿಗಂತೂ ಗೊತ್ತಾಗುತ್ತಿಲ್ಲ. ಭಿನ್ನಮತೀಯರೆನಿಸಿಕೊಂಡಿರುವ ಬಿಜೆಪಿ ನಾಯಕರು ಆಗಿಂದಾಗ್ಗೆ ದೆಹಲಿಗೆ ದೌಡಾಯಿಸುವುದು ಪ್ರಸ್ತುತವಾಗಿ ರಾಜ್ಯ ರಾಜಕಾರಣದಲ್ಲಿ ಒಂದು ಸಾಮಾನ್ಯ ಸಂಗತಿಯೇನೋ ಅನ್ನುವಷ್ಟು ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಸದಾ ರೆಬೆಲ್ ಥರ ವರ್ತಿಸುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ರಾಷ್ಟ್ರ ರಾಜಧಾನಿಗೆ ಹೋಗಿದ್ದಾರೆ. ಮೂಲಗಳ ಪ್ರಕಾರ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧ ದೂರುಗಳ ಮೂಟೆಯನ್ನು ಹೊತ್ತೊಯ್ದಿದ್ದಾರೆ. ಮುಖ್ಯಮಂತ್ರಿಗಳನ್ನು ನೇರವಾಗಿ ಟೀಕಿಸುವ ಛಾತಿ ಹೊಂದಿರುವ ಯತ್ನಾಳ್ ಬಾಯಿ ಬಿಟ್ಟಾಗಲೊಮ್ಮೆ ಒಂದು ಬಾಂಬ್ ಸಿಡಿಸುತ್ತಾರಾದರೂ ಅದರಿಂದ ರಾಜ್ಯ ರಾಜಕಾರಣದಲ್ಲಿ ಹೇಳಿಕೊಳ್ಳವಂಥ ಬದಲಾವಣೆಯೇನೂ ಆಗುವುದಿಲ್ಲ.
ನಿಮಗೆ ಗೊತ್ತಿದೆ, ಕೆಲ ದಿನಗಳ ಹಿಂದೆಯಷ್ಟೇ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ ಅವರು ದೆಹಲಿಗೆ ಹೋಗಿದ್ದರು. ಕಷ್ಟಪಟ್ಟು ಬಿಜೆಪಿ ಸೇರಿ ಮಂತ್ರಿ ಸ್ಥಾನ ಗಿಟ್ಟಿಸಿದ ಯೋಗೇಶ್ವರ ಅವರು ದೆಹಲಿಗೆ ಹೋಗಿದ್ದು ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕೆಲವು ಬಿಜೆಪಿ ನಾಯಕರಿಗೆ ಭಯಂಕರ ಅನಿಸುವಷ್ಟು ಕೋಪ ತರಿಸಿತ್ತು. ಮುಖ್ಯಮಂತ್ರಿಗಳ ಕುರ್ಚಿ ಅಲಗಾಡುವಂತಾಗಿದ್ದು ಮತ್ತು ರಾಜ್ಯ ಬಿಜೆಪಿ ಘಟಕದಲ್ಲಿ ಎರಡು ಭಾಗವಾಗಿದ್ದು ಸುಳ್ಳಲ್ಲ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವುದು ಅವರ ಸಂಪುಟದ ಕೆಲ ಸಚಿವರಿಗೆ ಇಷ್ಟಲಿಲ್ಲ ಅನ್ನೋದು ಯೋಗೇಶ್ವರ ದೆಹಲಿ ಪ್ರವಾಸ ಪ್ರಕರಣ ಸಾಬೀತು ಮಾಡಿತು.
ನಾಯಕ್ವಕ್ಕಾಗಿ ಶುರುವಾದ ಬಡಿದಾಟವನ್ನು ಶಮನಗೊಳಿಸಲು ದೆಹಲಿ ವರಿಷ್ಠರು ಅರುಣ್ ಸಿಂಗ್ ಅವರನ್ನು ಬೆಂಗಳೂರಿಗೆ ರವಾನಿಸಿದ್ದರು. ಮೂರು ದಿನಗಳ ಕಾಲ ನಗರದಲ್ಲಿದ್ದ ಸಿಂಗ್ ಅವರು ಪಕ್ಷದ ಎರಡು ಬಣಗಳ ನಾಯಕರನ್ನು ಭೇಟಿಮಾಡಿ ಹಂಗಾಮಿ ಕದನ ವಿರಾಮ ಏರ್ಪಡುವುದನ್ನು ನೋಡಿಕೊಂಡರು. ಆದರೆ, ಅವರು ಇಲ್ಲಿಂದ ಹೊರಟ ಕೂಡಲೇ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಹಳೆ ವರಸೆ ಶುರುಮಾಡಿದರು.
ಅದಿರಲಿ, ಮೊನ್ನೆಯಷ್ಟೇ ಯೋಗೀಶ್ವರ್ ಜೊತೆ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿರುವ ಮುರುಗೇಶ್ ನಿರಾಣಿ ಅವರು ಸಹ ದೆಹಲಿಗೆ ಹೋಗಿ ಬಂದಿದ್ದಾರೆ. ಮೂಲಗಳ ಪ್ರಕಾರ ಅವರು ಸಹ ಯಡಿಯೂರಪ್ಪನ ವಿರೋಧಿ ಕ್ಯಾಂಪ್ನಲ್ಲಿ ಗುರುತಿಸಿಕೊಂಡವರು. ಇವರೆಲ್ಲ ಒಂದು ನಿಖರವಾದ ಉದ್ದೇಶವನ್ನಿಟ್ಟುಕೊಂಡೇ ದೆಹಲಿಗೆ ಹೋಗುತ್ತಿದ್ದಾರೆ. ಆದರೆ ಹೋಗುವಾಗಮ ಬರುವಾಗ ಮತ್ತು ಅಲ್ಲಿರುವಾಗಲೂ ವೈಯಕ್ತಿಕ ಕಾರಣಕ್ಕೆ ಎಂದು ಹೇಳುತ್ತಾರೆ.
ಈಗ ಯತ್ನಾಳ್ ಅವರ ಸರದಿ. ಹಾಗಂತ ಇದೇ ಮೊದಲ ಸಲವೇನೂ ಅವರು ಅಲ್ಲಿಗೆ ಹೋಗಿಲ್ಲ. ಆದರೆ ಈ ಸಲದ ಭೇಟಿ ಸ್ವಲ್ಪ ಜಾಸ್ತಿ ಮಹತ್ವ ಪಡೆದಿದೆ. ಅರುಣ್ ಸಿಂಗ್ ವರಿಷ್ಠರಿಗೆ ಕೊಟ್ಟಿರುವ ವರದಿ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ನಿರಾಣಿ, ಯತ್ನಾಳ್ ದೆಹಲಿ ಭೇಟಿಯನ್ನು ಗಮನಿಸಿತ್ತಿದ್ದರೆ, ಎನೋ ಕುದಿಯುತ್ತಿದೆ ಎನ್ನುವುದು ಭಾಸವಾಗದಿರದು. ವಿಜಯೇಂದ್ರ ವಿರುದ್ಧ ದೂರುಗಳು ಈಗಾಗಾಲೇ ವರಿಷ್ಠರ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲೇ ಅವರು ಯತ್ನಾಳ್ರನ್ನು ದೆಹಲಿಗೆ ಕರೆಸಿಕೊಂಡಿದ್ದರೆ ಆಶ್ಚರ್ಯವಿಲ್ಲ.
ಇದನ್ನೂ ಓದಿ: Basanagouda patil Yatnal ಬರೀ ಕುಟುಂಬಸ್ಥರಿಗೆ ಟಿಕೆಟ್ ಕೊಟ್ರೆ.. ಕಾರ್ಯಕರ್ತರೇನು ಹಮಾಲಿ ಕೆಲಸ ಮಾಡೋಕೆ ಇರೋದಾ? -ಯತ್ನಾಳ್ ಸವಾಲ್ ಇದನ್ನೂ ಓದಿ: ಶ್ರೀರಾಮುಲು ಆಪ್ತ ರಾಜಣ್ಣ ಪ್ರಕರಣ: ವಿಜಯೇಂದ್ರ ವಿರುದ್ಧ ಹಸ್ತಕ್ಷೇಪ ಆರೋಪ ತೊಡೆದುಹಾಕಲು ಬಿ ಎಸ್ ಯಡಿಯೂರಪ್ಪ ಪ್ರಯತ್ನ?