ಬಿಟ್ ಕಾಯಿನ್ ಪ್ರಕರಣದಲ್ಲಿ ಅಕ್ರಮ: ಡಿವೈಎಸ್ಪಿ ಶ್ರೀಧರ್ ಪೂಜಾರಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬಿಟ್ ಕಾಯಿನ್ ಪ್ರಕರಣದಲ್ಲಿ ಅಕ್ರಮ ಆರೋಪ ಸಂಬಂಧ ಆರೋಪಿ ಶ್ರೀಧರ್ ಪೂಜಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಸಿಸಿಬಿ ತನಿಖೆ ವೇಳೆ ಟೀಂನಲ್ಲಿದ್ದ ಶ್ರೀಧರ್ ಪೂಜಾರಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎಸ್ಐಟಿ ತಂಡ ಬಂಧಿಸಲು ಮುಂದಾದಾಗ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಶ್ರೀಧರ್ ಪರಾರಿಯಾಗಿದ್ದರು.
ಬೆಂಗಳೂರು, ಮಾ.22: ಬಿಟ್ ಕಾಯಿನ್ (Bitcoin) ಪ್ರಕರಣದಲ್ಲಿ ಅಕ್ರಮ ಆರೋಪ ಸಂಬಂಧ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಸಿಸಿಬಿ (CCB) ತನಿಖೆ ವೇಳೆ ಟೀಂನಲ್ಲಿದ್ದ ಶ್ರೀಧರ್ ಪೂಜಾರಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎಸ್ಐಟಿ (SIT) ತಂಡ ಬಂಧಿಸಲು ಮುಂದಾದಾಗ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಶ್ರೀಧರ್ ಪರಾರಿಯಾಗಿದ್ದರು. ಅಲ್ಲದೆ, ತಲೆಮರೆದಯಲ್ಲಿ ಕುಳಿತುಕೊಂಡು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಬಂಧಿಸಲು ಮುಂದಾಗಿದ್ದ ಎಸ್ಐಟಿ ತಂಡದ ಸದಸ್ಯರ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿಯಾದ ಪ್ರಕರಣ ಸಂಬಂಧ ಶ್ರೀಧರ್ ಪೂಜಾರಿ ವಿರುದ್ಧ ವಿಧಾನಸೌಧ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ (ಕೊಲೆ ಯತ್ನ) ಮತ್ತು 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದ ಎಸ್ಐಟಿ ಅಧಿಕಾರಿಗಳು, ಶ್ರೀಧರ್ ಪೂಜಾರಿ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್: ಶ್ರೀಧರ್ ಪೂಜಾರ್ ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿದ ರಾಜ್ಯ ಪೊಲೀಸ್ ಇಲಾಖೆ
ಆರೋಪಿ ಬಗ್ಗೆ ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟವರಿಗೆ ಬಹುಮಾನ ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. ಮಾಹಿತಿಯಿದ್ದರೆ ಸಿಐಡಿ ಫೈನಾನ್ಶಿಯಲ್ ಇಂಟೆಲಿಜೆನ್ಸ್ ಡಿವೈಎಸ್ಪಿ ಸಂಪರ್ಕಿಸಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದೂರವಾಣಿ ಸಂಖ್ಯೆ; 080 22094485, 22094498 (ಸಿಐಡಿ ಕಂಟ್ರೋಲ್ ರೂಂ), ಮೊಬೈಲ್ ಸಂಖ್ಯೆ 9480800181, ತನಿಖಾಧಿಕಾರಿಗಳು- 94481 49915 ನಂಬರ್ಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಸಿಐಡಿಯ ವಿಶೇಷ ತನಿಖಾ ದಳ ಚುರುಕುಗೊಳಿಸಿದೆ. ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದು ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಎಸ್ಐಟಿ ದಾಳಿ ನಡೆಸಿ ಪ್ರಮುಖ ಆರೋಪಿಗಳಾದ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ಧ್ ಅವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು.
ಅಷ್ಟೇ ಅಲ್ಲದೆ, ಈ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ತಂಡದಲ್ಲಿ ಶ್ರೀಧರ್ ಪೂಜಾರಿ ಕೂಡ ಇದ್ದರು. ಈ ವೇಳೆ ಅಕ್ರಮ ಎಸಗಿರುವ ಆರೋಪ ಕೇಳಿಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್ಐಟಿ ಫೆಬ್ರವರಿ 17 ರಂದು ಶ್ರೀಧರ್ ಪೂಜಾರಿ ಬಂಧನಕ್ಕೆ ಮುಂದಾಗಿತ್ತು. ಈ ವೇಳೆ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಶ್ರೀಧರ್ ಪೂಜಾರಿ ಪರಾರಿಯಾಗಿದ್ದರು. ಘಟನೆಯಲ್ಲಿ ಎಎಸ್‌ಐ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Fri, 22 March 24