ಆನೇಕಲ್ ಹಣ್ಣಿನ ಮಾರುಕಟ್ಟೆ ಬಂದ್; ಮಂಡಿ ವ್ಯಾಪಾರಿಗಳಲ್ಲಿ ಹೆಚ್ಚಿದ ಆತಂಕ

ಆನೇಕಲ್ ಹಣ್ಣಿನ ಮಾರುಕಟ್ಟೆ ಬಂದ್; ಮಂಡಿ ವ್ಯಾಪಾರಿಗಳಲ್ಲಿ ಹೆಚ್ಚಿದ ಆತಂಕ
ಮಾರಾಟವಾಗದ ಹಣ್ಣನ್ನು ಬಿಸಾಡುತ್ತಿರುವ ವ್ಯಾಪಾರಿಗಳು

ರೈತರು ತರುವ ಹಣ್ಣುಗಳನ್ನು ಖರೀದಿಸಲು ಆಗುತ್ತಿಲ್ಲ. ಒಂದು ವೇಳೆ ರೈತರ ಕಷ್ಟ ನೋಡಿ ಹಣ್ಣುಗಳನ್ನು ಖರೀದಿಸಿದರೆ ಕೊಳ್ಳುವ ಗ್ರಾಹಕರು ಇಲ್ಲದೆ ನಷ್ಟವಾಗುತ್ತಿದೆ. ಲಾಕ್​ಡೌನ್​ನಿಂದಾಗಿ, ಮಂಡಿ ವರ್ತಕರು, ರೈತರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಂಡಿ ವ್ಯಾಪಾರಿ ಮಣಿ ಕುಮಾರ್ ತಿಳಿಸಿದ್ದಾರೆ.

preethi shettigar

|

Jun 01, 2021 | 2:06 PM

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಲಾಕ್​ಡೌನ್ ಜಾರಿಗೆ ತಂದಿದೆ. ಈಗಾಗಲೇ ಈ ಲಾಕ್​ಡೌನ್​ನಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸರ್ಕಾರಕ್ಕೆ ತಜ್ಞರ ಸಮಿತಿ ಇನ್ನು ಸ್ವಲ್ಪ ಕಾಲ ಲಾಕ್​ಡೌನ್ ಮುಂದುವರಿಸಲು ಸೂಚಿಸಿದೆ. ಆದರೆ ಕೊವಿಡ್​ನಿಂದ ಜಾರಿಯಾಗಿರುವ ಈ ಲಾಕ್​ಡೌನ್ ವ್ಯಾಪಾರ ವ್ಯವಹಾರಕ್ಕೆ ಸಂಕಷ್ಟ ತಂದೊಡ್ಡಿದೆ. ಅದರಂತೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರದ ಹಣ್ಣಿನ ಮಾರುಕಟ್ಟೆಯಲ್ಲೂ ವ್ಯಾಪಾರ ಮಾಡಲು ಅವಕಾಶವಿಲ್ಲದೆ. ಮಂಡಿಯಲ್ಲಿನ ವ್ಯಾಪರಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸ್ಥಳೀಯ ರೈತರು ಸೇರಿದಂತೆ ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ರಾಜ್ಯಗಳಿಂದ ಮಾವು, ದಾಳಿಂಬೆ, ಅನಾನಸ್ ಯಥೇಚ್ಛವಾಗಿ ಆನೇಕಲ್ ಹಣ್ಣಿನ ಮಾರುಕಟ್ಟೆಗೆ ತರಲಾಗುತ್ತಿದೆ. ಆದರೆ ಲಾಕ್​ಡೌನ್​ನಿಂದಾಗಿ ಗ್ರಾಹಕರು ಇಲ್ಲದೆ, ವ್ಯಾಪಾರ ವಹಿವಾಟು ಇಲ್ಲದೆ ನಷ್ಟ ಉಂಟಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ಸಮಯದಲ್ಲಿ ವ್ಯಾಪಾರ ಮಾಡಲು ಆಗುವುದಿಲ್ಲ. ಇದರಿಂದ ರೈತರು ತರುವ ಹಣ್ಣುಗಳನ್ನು ಖರೀದಿಸಲು ಆಗುತ್ತಿಲ್ಲ. ಒಂದು ವೇಳೆ ರೈತರ ಕಷ್ಟ ನೋಡಿ ಹಣ್ಣುಗಳನ್ನು ಖರೀದಿಸಿದರೆ ಕೊಳ್ಳುವ ಗ್ರಾಹಕರು ಇಲ್ಲದೆ ನಷ್ಟವಾಗುತ್ತಿದೆ. ಲಾಕ್​ಡೌನ್​ನಿಂದಾಗಿ, ಮಂಡಿ ವರ್ತಕರು, ರೈತರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಂಡಿ ವ್ಯಾಪಾರಿ ಮಣಿ ಕುಮಾರ್ ತಿಳಿಸಿದ್ದಾರೆ.

ಜನರಿಗೆ ಅನುಕೂಲವಾಗಲಿ ಎಂದು ಲಾಕ್​ಡೌನ್ ನಡುವೆಯು ಮಂಡಿ ತೆರೆಯುತ್ತೇವೆ. ಆದರೆ ಪೊಲೀಸರು ಹಣ್ಣು ಸರಬರಾಜು ಮಾಡುವ ಗೂಡ್ಸ್ ವಾಹನಗಳನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಾರೆ.‌ ಸರ್ಕಾರ ಅಗತ್ಯ ವಸ್ತುಗಳನ್ನು ಗೂಡ್ಸ್ ವಾಹನಗಳಲ್ಲಿ ತರಲು ಯಾವುದೇ ಅಡೆತಡೆ ಇಲ್ಲ ಎಂದಿದೆ. ಆದರೂ ಹಣ್ಣು ಮಂಡಿ ವ್ಯಾಪಾರಿಗಳಿಗೆ ಕಿರುಕುಳ ಮಾತ್ರ ತಪ್ಪುತ್ತಿಲ್ಲ. ಎಪಿಎಂಸಿ ನೀಡಿರುವ ಗುರುತಿನ ಚೀಟಿ ತೋರಿಸಿದರು ಪೊಲೀಸರು ಬಿಡುತ್ತಿಲ್ಲ. ಇದರ ನಡುವೆ ಹೇಗೋ ಕಷ್ಟಪಟ್ಟು ಮಂಡಿ ತೆರೆದರೆ ಹಣ್ಣು ಖರೀದಿಸಲು ಗ್ರಾಹಕರು ಬರುತ್ತಿಲ್ಲ. ಸಾರ್ವಜನಿಕರು ಹಣ್ಣುಗಳನ್ನು ಸೇವಿಸುವ ಮೂಲಕ ಆರೋಗ್ಯವಂತರಾಗಿ ಎಂದು ಹಣ್ಣಿನ ಮಂಡಿ ವ್ಯಾಪಾರಿ ಸಯ್ಯದ್ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದರಲ್ಲಿ ಲಾಕ್​ಡೌನ್ ಪಾತ್ರ ಸಾಕಷ್ಟು ಇದೆ. ಆದರೆ ಲಾಕ್​ಡೌನ್​ನಿಂದಾಗಿ ಸಾಕಷ್ಟು ಮಂದಿ ವ್ಯಾಪಾವಿಲ್ಲದೆ ಪರದಾಟ ಕೂಡ ನಡೆಸುತ್ತಿದ್ದಾರೆ. ಹಾಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಜನರ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ದೃಷ್ಟಿಯಿಂದ ಕ್ರಮಕೈಗೊಳ್ಳಬೇಕಿದೆ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್: ಬೆಳೆದ ಬೆಳೆಗೆ ಬೆಲೆ ಇಲ್ಲ; ಕಟಾವು ಮಾಡದೆ ಬೆಳೆಯನ್ನು ಜಮೀನಿನಲ್ಲೇ ಬಿಟ್ಟ ಮಂಡ್ಯದ ರೈತ

ಚಿತ್ರದುರ್ಗದ ಪ್ರವಾಸಿ ತಾಣ ಬಂದ್​; ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಮಾರ್ಗದರ್ಶಿಗಳು

Follow us on

Related Stories

Most Read Stories

Click on your DTH Provider to Add TV9 Kannada