ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮಹತ್ವಾಕಾಂಕ್ಷೆ ಯೋಜನೆ ಅನ್ನಭಾಗ್ಯ (Anna Bhagya Scheme) ಯೋಜನೆಗೆ ದಶಕದ ಸಂಭ್ರಮ. ಈ ಹಿನ್ನೆಲೆ 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ 170 ರೂ. ಹಣ ಜಮೆ ಮಾಡುವ ಕಾರ್ಯಕ್ರಮಕ್ಕೆ ಇಂದು (ಜು.10) ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ಕೆಜಿಗೆ 34 ರೂ.ನಂತೆ 170 ರೂ. ವರ್ಗಾವಣೆ ಮಾಡಲಾಗುತ್ತದೆ.
ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ಗಳಿವೆ. ಸುಮಾರು 4.5 ಕೋಟಿ ಜನರು ಉಚಿತ ಅಕ್ಕಿಯ ಫಲಾನುಭವಿಗಳಿದ್ದಾರೆ. ಇವರಿಗೆ ಕೆಜಿಗೆ 34 ರೂ. ಹಾಕಲು ಸರ್ಕಾರಕ್ಕೆ 733 ಕೋಟಿ ರೂಪಾಯಿ ಹಣ ಬೇಕು. 1.22 ಕೋಟಿ ಜನರು ಆಧಾರ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಿದ್ದಾರೆ. ಇನ್ನು 6 ಲಕ್ಷದಷ್ಟು ಅಕೌಂಟ್ಗಳು ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಿಲ್ಲ.
2013ರ ಮೇ 13 ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ಸ್ವೀಕಾರದ ನಂತರ ಸಿದ್ದರಾಮಯ್ಯವರು ಐತಿಹಾಸಿಕ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದರು. ಜುಲೈ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ವ್ಯಕ್ತಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಇದನ್ನೂ ಓದಿ: ಬಡವರ ಪಾಲಾಗಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲು, ಗದಗದಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ ವಶಕ್ಕೆ
ಅನ್ನಭಾಗ್ಯ ಯೋಜನೆ ಆರಂಭವಾದಾಗ 1.08 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದಿದ್ದವು. 2013ರಲ್ಲಿ ಪ್ರತಿ ತಿಂಗಳು 2.93 ಲಕ್ಷ ಟನ್ ಆಹಾರ ಧಾನ್ಯ ಬಿಡುಗಡೆಯಾಗುತ್ತಿತ್ತು. 2013ರಲ್ಲಿ ಅನ್ನಭಾಗ್ಯ ಯೋಜನೆಗಾಗಿ 4,300 ಕೋಟಿ ರೂಪಾಯಿಗಳನ್ನ ಮೀಸಲಿರಿಸಲಾಗಿತ್ತು. 2013-2014ರ ಸಾಲಿನಲ್ಲಿ ಅನ್ನಭಾಗ್ಯಕ್ಕಾಗಿ 3,050 ಕೋಟಿ ವೆಚ್ಚವಾಗಿತ್ತು.
ಅನ್ನಭಾಗ್ಯ ಯೋಜನೆ ಪ್ರಾರಂಭಿಸಿ ೧೦ ವರ್ಷಗಳಾದ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ನಲ್ಲಿ ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೋತ್ತಾಯ ಸಮಾವೇಶ ಮಧ್ಯಾಹ್ನ 1.30 ಕ್ಕೆ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಭಾಗಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಗಿಯಾಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ