ಬೆಂಗಳೂರು, ಫೆಬ್ರವರಿ 19: ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣದ ಬದಲು ಅಕ್ಕಿ ಕೊಡಲು ತೀರ್ಮಾನಿಸಲಾಗಿದೆ. ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆಜಿ ಅಕ್ಕಿಗೆ ಪರ್ಯಾಯವಾಗಿ 170 ರೂ. ನೀಡಲಾಗುತ್ತಿತ್ತು. ಇದೀಗ, ಹಣದ ಬದಲು 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದು, ಇದೇ ತಿಂಗಳಿನಿಂದ ನೀಡುತ್ತಿದ್ದೇವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳಿಂದ ಅಕ್ಕಿಯನ್ನು ಫಲಾನುಭವಿಗಳಿಗೆ ಕೊಡುತ್ತಿದ್ದೇವೆ. ನಮಗೆ ಬೇಕಾಗಿರುವ 5 ಕೆಜಿ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರವು ಒಪ್ಪಿಗೆ ಕೊಟ್ಟಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಅಕ್ಕಿ ಅವಶ್ಯಕತೆ ಇದೆ ಎಂದು ಹೇಳಿದರು.
ನಮ್ಮ ಇಲಾಖೆ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಪಂದಿಸಿದ್ದಾರೆ. ಈಗ ಕೇಂದ್ರ ಸಚಿವರು ಅಕ್ಕಿ ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಹಾಕುತ್ತೇವೆ. ಫೆಬ್ರವರಿಯಿಂದ 10 ಕೆಜಿ ಅಕ್ಕಿ ಕೊಡುವ ತೀರ್ಮಾನ ಮಾಡಿದ್ದೇವೆ. 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ಅಕ್ಕಿ, ಹಣ ಎರಡನ್ನೂ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ: ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ: ಸಚಿವ ಜಾರ್ಜ್ ಉಡಾಫೆ ಉತ್ತರ
ಕೆಂದ್ರ ಸರ್ಕಾರ ಮೊದಲು ಒಂದು ಕೆಜಿ ಅಕ್ಕಿಗೆ 28 ರೂ. ನಿಗದಿಪಡಿಸಿತ್ತು. ಜನವರಿಯಿಂದ ಪ್ರತಿ ಕೆಜಿಗೆ 22.50 ರೂ ನಂತೆ ಕೊಡಲು ನಿರ್ಧರಿಸಿದೆ. ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಮೂರು ತಿಂಗಳು ಹಣ ಹಾಕಿಲ್ಲ. ಒಂದು ವಾರದೊಳಗೆ ಸಕಾಲದಲ್ಲಿ ಹಣ ಹಾಕುತ್ತೇವೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ ಎಂದು ಭರವಸೆ ನೀಡಿದರು.
Published On - 1:46 pm, Wed, 19 February 25