ಮಂಗಳೂರಿನಲ್ಲಿ ಮತ್ತೊಂದು ವಿವಾದ: ಅ 15ರಂದು ಉಗ್ರ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ಕರೆ
ಮಂಗಳೂರಿನಲ್ಲಿ ದ್ವೇಷ ಭಾಷಣ ಆರೋಪದಡಿ ಪ್ರಾಧ್ಯಾಪಕನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸದ್ಯ ಈ ವಿಚಾರವಾಗಿ ಅ.15ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ಕರೆನೀಡಿದೆ. ಹಿಂದೂಗಳನ್ನು ಗುರಿಯಾಗಿಸಿ ಕೇಸ್ ದಾಖಲಿಸಲಾಗಿದೆ. ಡಾ.ಅರುಣ್ ಉಳ್ಳಾಲ್ ಪರವಾಗಿ ವಿಹೆಚ್ಪಿ ನಿಲ್ಲುತ್ತದೆ ಎಂದು ಶಿವಾನಂದ ಮೆಂಡನ್ ಹೇಳಿದ್ದಾರೆ.
ಮಂಗಳೂರು, ಅಕ್ಟೋಬರ್ 10: ದ್ವೇಷ ಭಾಷಣ ಆರೋಪದಡಿ ನಗರದ ಪ್ರತಿಷ್ಠಿತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ್ ಉಳ್ಳಾಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸದ್ಯ ಈ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಅ.15ಕ್ಕೆ ಮಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಕರೆ ನೀಡಿದೆ.
ಡಾ.ಅರುಣ್ ಉಳ್ಳಾಲ್ ಪರವಾಗಿ ವಿಹೆಚ್ಪಿ ನಿಲ್ಲುತ್ತದೆ: ಶಿವಾನಂದ ಮೆಂಡನ್
ಈ ಬಗ್ಗೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹೆಚ್ಪಿ ಮುಖಂಡ ಶಿವಾನಂದ ಮೆಂಡನ್, ಹಿಂದೂಗಳನ್ನು ಗುರಿಯಾಗಿಸಿ ಅರುಣ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಡಾ.ಅರುಣ್ ಉಳ್ಳಾಲ್ ಪರವಾಗಿ ವಿಹೆಚ್ಪಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಧರ್ಮ ದ್ವೇಷದ ಭಾಷಣ ಆರೋಪ; ಸಹಾಯಕ ಪ್ರಾಧ್ಯಾಪಕನ ವಿರುದ್ಧ ಎಫ್ಐಆರ್ ದಾಖಲು
ದ್ವೇಷ ಭಾಷಣ ಮಾಡಿದ್ದಾರೆ ಎಂದು ಡಾ ಅರುಣ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಡಾ ಅರುಣ್ ಉಪನ್ಯಾಸಕರಾಗಿದ್ದ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಯಿಂದ ವಜಾ ಮಾಡಲಾಗಿದೆ. ಅವರು ತಮ್ಮ ಫ್ರೀ ಸಮಯದಲ್ಲಿ ಧರ್ಮ ಶಿಕ್ಷಣ ನೀಡುತ್ತಿದ್ದರು. ಇದನ್ನು ನೆಪ ಮಾಡಿ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಡಾ ಅರುಣ್ ಅವರನ್ನು ವಜಾ ಮಾಡಿದೆ. ಇದೇ ರೀತಿ ಹಲವಾರು ಹಿಂದೂ ಉಪನ್ಯಾಸಕರನ್ನು ಕೂಡ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆ ವಜಾ ಮಾಡಿದೆ ಎಂದಿದ್ದಾರೆ.
ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆ ತಾರತಮ್ಯ ಧೋರಣೆ ಅನುಸರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ನ್ಯಾಯ ಸಿಗುತ್ತಿಲ್ಲ. ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರ ಇದೆ. ಇತ್ತೀಚೆಗೆ ರಾಜ್ಯಪಾಲರ ವಿರುದ್ಧ ಎಂಎಲ್ಸಿ ಐವನ್ ಡಿಸೋಜಾ ಬಾಂಗ್ಲಾ ಮಾದರಿ ದಾಳಿ ಮಾಡುವ ಎಚ್ಚರಿಕೆ ನೀಡಿದ್ದರು. ಅವರ ವಿರುದ್ದ ಈವರೆಗೂ ಎಫ್ಐಆರ್ ಆಗಿಲ್ಲ. ರಾಜ್ಯ ಸರಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಪ್ಯಾಲಿಸ್ತೀನ್ ಪರ ಒಲವು: ಬಸ್ಗೆ ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟ ಖಾಸಗಿ ಬಸ್ ಮಾಲೀಕ
ಅಲ್ಪಸಂಖ್ಯಾತರ ಓಲೈಕೆಗೋಸ್ಕರ ರಾಜ್ಯ ಸರಕಾರ ಹಿಂದೂಗಳನ್ನು ಗುರಿಯಾಗಿಸುತ್ತಿದೆ. ಈ ಎಲ್ಲಾ ವಿಚಾರ ಮುಂದಿಟ್ಟು ಅಕ್ಟೋಬರ್ 15ಕ್ಕೆ ಮಂಗಳೂರಿನಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ವಿಹೆಚ್ಪಿ ಮುಖಂಡ ಶಿವಾನಂದ ಮೆಂಡನ್ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.