ಮುನಿರತ್ನಗೆ ಮತ್ತೊಂದು ಶಾಕ್: ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಸ್ಪೀಕರ್​ಗೆ SIT ಮನವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2024 | 4:46 PM

ಬೆಂಗಳೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಇದು ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಹೀಗಿರುವಾಗ ಶಾಸಕ ಮುನಿರತ್ನ ವಿರುದ್ಧ ಪ್ರಾಸಿಕ್ಯೂಷನ್​ಗೆ ಎಸ್​ಐಟಿ ಸ್ಪೀಕರ್​ಗೆ ಮನವಿ ಮಾಡಿದೆ. ಆ ಮೂಲಕ ಮತ್ತೊಂದು ಸಂಕಷ್ಟ ಎದುರಾಗಿದೆ.

ಮುನಿರತ್ನಗೆ ಮತ್ತೊಂದು ಶಾಕ್: ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಸ್ಪೀಕರ್​ಗೆ SIT ಮನವಿ
ಮುನಿರತ್ನಗೆ ಮತ್ತೊಂದು ಶಾಕ್: ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಸ್ಪೀಕರ್​ಗೆ SIT ಮನವಿ
Follow us on

ಬೆಂಗಳೂರು, ಡಿಸೆಂಬರ್​ 25: ಬಿಜೆಪಿ ಶಾಸಕ ಮುನಿರತ್ನಗೆ (BJP MLA Munirathna) ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಇತ್ತೀಚೆಗೆ ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಈ ಮಧ್ಯೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಲಂಚ ಬೇಡಿಕೆ, ಬೆದರಿಕೆ ಹಾಕಿ ಹಣ ವಸೂಲಿ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಸ್ಪೀಕರ್​ ಯು.ಟಿ.ಖಾದರ್​ಗೆ ಎಸ್​ಐಟಿ ತಂಡ ಇಂದು ಮನವಿ ಸಲ್ಲಿಸಲಾಗಿದೆ.

ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಮುನಿರತ್ನ ಕಸ ವಿಲೇವಾರಿ ಗುತ್ತಿಗೆ ನೀಡಲು 30 ಲಕ್ಷ ರೂ. ಲಂಚಕ್ಕೆ ಬೇಡಿಕೆ ಆರೋಪ ಕೇಳಿಬಂದಿತ್ತು. ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಬೇಕಿದೆ. ಹೀಗಾಗಿ ಸ್ಪೀಕರ್ ಯು.ಟಿ.ಖಾದರ್​ಗೆ ಎಸ್​ಐಟಿ ಅನುಮತಿ ಕೋರಿದೆ. ಈ ಮನವಿಗೆ ಸ್ಪಂದಿಸಿ ಸ್ಪೀಕರ್‌ ಯು.ಟಿ.ಖಾದರ್​ ಅನುಮತಿ ನೀಡಿದರೆ, ಮುನಿರತ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಯೋಗಿಸಲಾಗುತ್ತದೆ.

ಇದನ್ನೂ ಓದಿ: ಮುನಿರತ್ನ ಮೇಲೆ ಮೊಟ್ಟೆ ಎಸೆತ: ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕುಮ್ಮಕ್ಕಿನಿಂದಲೇ ಕೃತ್ಯ ಎಂದ ಬಿಜೆಪಿ ಶಾಸಕ

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜುಗೆ ನಿಂದಿಸಿ ಬೆದರಿಕೆ ಹಿನ್ನೆಲೆ ವೈಯಾಲಿಕಾವಲ್ ಠಾಣೆಯಲ್ಲಿ ಜೀವ ಬೆದರಿಕೆಯಡಿ ಎಫ್​ಐಆರ್​ ದಾಖಲಾಗಿತ್ತು. ಕಸ ಸಾಗಾಣಿಕೆ ಗುತ್ತಿಗೆ ನೀಡಲು 30 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಈಗಾಗಲೇ 10 ಲಕ್ಷ ರೂ. ಹಣವನ್ನು ಕೊಟ್ಟಿದ್ದಾಗಿ ಆರೋಪಿಸಿದ್ದರು. ಚುನಾಯಿತ ಪ್ರತಿನಿಧಿಯಾಗಿರುವ ಶಾಸಕರಿಂದ ಅಧಿಕಾರ ದುರ್ಬಳಕೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಗೆ ಅನುಮತಿ ಕೇಳಲಾಗಿದೆ.

ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಕೇಸ್​: ಮುನಿರತ್ನ ಬಂಧನದ ನಂತರ ಮತ್ತೊಂದು ಆಡಿಯೋ ವೈರಲ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ ಲಕ್ಷ ರೂ. ಹಣ ಲಂಚ ನೀಡುವಂತೆ ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು ಎಂಬ ಆಡಿಯೋ ಕೂಡ ವೈರಲ್​ ಆಗಿತ್ತು. ಆಡಿಯೋದಲ್ಲಿ ಚೆಲುವರಾಜು ಮತ್ತು ಸ್ನೇಹಿತ ಸಹ ಮಾತಾಡಿದ್ದರು ಎನ್ನಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.