ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳ.. ಮಗನನ್ನು ಕಳೆದುಕೊಂಡು ಕಣ್ಣೀರಿಟ್ಟ ಜಾನಪದ ಕಲಾವಿದೆ ಬೋವಿ ಜಯಮ್ಮ
ಮಾನವೀಯತೆ ಮರೆತು ಸಾವಿನ ಮನೆಗೆ ಬಂದು ಬಡ್ಡಿ ಹಣಕ್ಕಾಗಿ ಕುಟುಂಬಸ್ಥರನ್ನು ಪೀಡಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ: ಜಿಲ್ಲೆಯಲ್ಲಿ ಮೀಟರ್‌ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಮಾನವೀಯತೆ ಮರೆತು ಸಾವಿನ ಮನೆಗೆ ಬಂದು ಬಡ್ಡಿ ಹಣಕ್ಕಾಗಿ ಕುಟುಂಬಸ್ಥರನ್ನು ಪೀಡಿಸಿದ ಘಟನೆ ನಡೆದಿದೆ. ಮೃತದೇಹ ಮಣ್ಣು ಮಾಡಲೂ ಬಿಡದೆ ಸಾಲದ ಹಣಕ್ಕೆ ಬೇಡಿಕೆ ಇಟ್ಟು ದರ್ಪ ಮೆರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಜಾನಪದ ಕಲಾವಿದೆ ಬೋವಿ ಜಯಮ್ಮರ ಪುತ್ರ ಅರುಣ್ ಮತ್ತು ಕುಟುಂಬ ಅಂಬೇಡ್ಕರ್ ಬಡಾವಣೆಯಲ್ಲಿ ವಾಸವಾಗಿದ್ದರು. ಕೆಲ ಕಾರಣಗಳಿಂದ ಅರುಣ್, ಬೋವಿಹಟ್ಟಿಯ ಭಾಗ್ಯಮ್ಮ, ಸುಮಾ ಎಂಬುವವರ ಬಳಿ ಸಾಲಪಡೆದಿದ್ದರು. ಆದ್ರೆ ಸಾಲ ತೀರಿಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತದೇಹ ಮನೆಯಲ್ಲೇ ಇರುವಾಗಲೇ ಮಾನವೀಯತೆ ಮರೆತು ಸಾವಿನ ಮನೆಗೆ ಬಂದು ಬಡ್ಡಿ ಹಣಕ್ಕಾಗಿ ಕುಟುಂಬಸ್ಥರನ್ನು ಪೀಡಿಸಿದ್ದಾರಂತೆ. ಶವ ಅಂತ್ಯಕ್ರಿಯೆ ಮಾಡಲೂ ಬಿಡದೆ ಸಾಲದ ಹಣ ಕೇಳಿದ್ದಾರೆ ಎಂದು ಅರುಣ್ ಪತ್ನಿ ಅನುಷಾ ಬೋವಿಹಟ್ಟಿಯ ಭಾಗ್ಯಮ್ಮ, ಸುಮಾ ವಿರುದ್ಧ ದರ್ಪ ಆರೋಪಿಸಿದ್ದಾರೆ. ಜಾನಪದ ಕಲಾವಿದೆ ಬೋವಿ ಜಯಮ್ಮ ಪುತ್ರನ ಸಾವು, ಸಾಲಗಾರರ ಕಾಟದಿಂದ ಕಣ್ಣೀರಿಟ್ಟಿದ್ದಾರೆ. ಸಾಲಗಾರರ ಕಾಟದಿಂದ ಮುಕ್ತಿ ನೀಡುವಂತೆ ಟಿವಿ9 ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಸದ್ಭವ ಕನ್‌ಸ್ಟ್ರಕ್ಷನ್ ಸಂಸ್ಥೆ ವಿರುದ್ಧ ಆರೋಪ, ಕಾಮಗಾರಿ ಹೆಸರಲ್ಲಿ ನಡೀತಿದೆಯಾ ಅಕ್ರಮ ಮಣ್ಣು ಗಣಿಗಾರಿಕೆ?