ನಳೀನ್ ಕುಮಾರ್​ದು ಎನ್ನಲಾದ ಆಡಿಯೋ ವೈರಲ್: ಆಪ್ತರ ಮೂಲಕ ಆಡಿಯೋ ಮಾಹಿತಿ ಪಡೆದುಕೊಂಡ ಉಸ್ತುವಾರಿ ಅರುಣ್ ಸಿಂಗ್

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಡಿಯೋ ಕ್ಲಿಪ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆಪ್ತರ ಮೂಲಕ ಆಡಿಯೋ ಕ್ಲಿಪ್ ತರೆಸಿಕೊಂಡು ಅದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ನಳೀನ್ ಕುಮಾರ್​ದು ಎನ್ನಲಾದ ಆಡಿಯೋ ವೈರಲ್: ಆಪ್ತರ ಮೂಲಕ ಆಡಿಯೋ ಮಾಹಿತಿ ಪಡೆದುಕೊಂಡ ಉಸ್ತುವಾರಿ ಅರುಣ್ ಸಿಂಗ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಬೆಂಗಳೂರು: ನಾಯಕತ್ವ ಬದಲಾವಣೆ ಬಡಿದಾಟಲ್ಲಿ ರಾಜ್ಯ ಬಿಜೆಪಿ ಈಗಾಗಲೇ ಬಣಗಳಾಗಿ ಚೂರು ಚೂರಾಗಿ ನಿಂತಿದೆ. ಬಿಎಸ್ವೈ ವಿರುದ್ಧ ಶಾಸಕರ ತಂಡವೇ ರೆಬೆಲ್ ಆಗಿ ನಾಯಕತ್ವ ಬದಲಾವಣೆ ಪಟ್ಟು ಹಿಡಿದಿದೆ. ಸಿಎಂ ಪರ ಹಾಗೂ ವಿರೋಧಿ ಬಣದ ಹಾದಿರಂಪ ಬೀದಿರಂಪದಿಂದ ಹೈಕಮಾಂಡ್ ಕೂಡಾ ಹೈರಾಣಾಗಿ ಹೋಗಿದೆ. ಇನ್ನೇನು ಬದಲಾವಣೆ ಬಡಿದಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ ಅನ್ನುವಷ್ಟರಲ್ಲಿ ಹೊಸ ಬಾಂಬ್ ಸಿಡಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ರದ್ದು ಎನ್ನಲಾಗಿರೋ ಆಡಿಯೋ ಬಿಜೆಪಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತುಳು ಭಾಷೆಯಲ್ಲಿ ಮಾತಾಡಿರೋ 47 ಸೆಕೆಂಡುಗಳ ಆಡಿಯೋದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸ್ಫೋಟಕ ಮಾತುಗಳು ರೆಕಾರ್ಡ್ ಆಗಿವೆ. ಆಡಿಯೋದ ಮೊದಲ ಭಾಗದಲ್ಲೇ ರಾಜ್ಯ ಬಿಜೆಪಿಯ ಹಿರಿಯ ನಾಯಕರಾದ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ರನ್ನು ಮೂಲೆಗುಂಪು ಮಾಡೋ ಮಾತು ಕೇಳಿಬಂದಿದೆ.

ಆಡಿಯೋ ಮಾಹಿತಿ ಪಡೆದುಕೊಂಡ ಅರುಣ್ ಸಿಂಗ್
ಇನ್ನು ಮತ್ತೊಂದು ಕಡೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಡಿಯೋ ಕ್ಲಿಪ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆಪ್ತರ ಮೂಲಕ ಆಡಿಯೋ ಕ್ಲಿಪ್ ತರೆಸಿಕೊಂಡು ಅದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಆಡಿಯೋದಲ್ಲಿ ಹೇಳಿರೋದೇನು?
ಯಾರಿಗೂ ಹೇಳೋಕೆ ಹೋಗ್ಬೇಡ. ಈಶ್ವರಪ್ಪ, ಜಗದೀಶ್ ಶೆಟ್ಟರ್ರ ಟೀಮನ್ನೇ ತೆಗೆದು ಹಾಕ್ತಾರೆ. ಎಲ್ಲಾ ಹೊಸ ಟೀಂ ಮಾಡ್ತಾ ಇದ್ದೇವೆ. ಯಾರ ಬಳಿಯೂ ಹೇಳೋಕೆ ಹೋಗ್ಬೇಡ. ಈಗ ಸದ್ಯಕ್ಕೆ ಯಾರಿಗೂ ಕೊಡ್ಬೇಡಿ ಅಂದಿದ್ದಾರೆ. ಏನೂ ತೊಂದರೆ ಆಗಲ್ಲ, ಹೆದರಬೇಡ ನಾವಿದ್ದೇವೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಆದರೆ ಆಡಿಯೋ ಬಹಿರಂಗವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಆ ಧ್ವನಿ ತಮ್ಮದಲ್ಲ ಎಂದು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ವೈರಲ್; ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ