ವರ್ಡ್ ಪವರ್ ಈಸ್ ವರ್ಲ್ಡ್ ಪವರ್: ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿರುವಾಗಲೇ ಡಿಕೆ ಶಿವಕುಮಾರ್ ಮಾರ್ಮಿಕ ಎಕ್ಸ್ ಸಂದೇಶ!
ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ತೀವ್ರವಾಗಿರುವಾಗ ಡಿಕೆ ಶಿವಕುಮಾರ್ ಮಾರ್ಮಿಕ X ಸಂದೇಶ ಪ್ರಕಟಿಸಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ ಎಂದು ಅವರು ಪೋಸ್ಟ್ ಮಾಡಿದ್ದು, ಈ ಮೂಲಕ ಅವರು ಏನು ಸೂಚಿಸುತ್ತಿದ್ದಾರೆ ಎಂಬ ಕುತೂಹಲ ಮೂಡಿದೆ. ಇದಕ್ಕೆ ತರಹೇವಾರಿ ಕಮೆಂಟ್ಗಳೂ ವ್ಯಕ್ತವಾಗಿವೆ.

ಬೆಂಗಳೂರು, ನವೆಂಬರ್ 27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾರ್ಮಿಕವಾಗಿ ಸಂದೇಶ ಪ್ರಕಟಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಬುಧವಾರವಷ್ಟೇ ಡಿಕೆ ಶಿವಕುಮಾರ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಪ್ಲೀಸ್ ವೈಟ್’ ಎಂಬ ಸಂದೇಶ ಕಳುಹಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರದಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದವು. ಅದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಸಂದೇಶ ಪ್ರಕಟಿಸಿದ್ದಾರೆ.
ಡಿಕೆ ಶಿವಕುಮಾರ್ ಎಕ್ಸ್ ಸಂದೇಶದಲ್ಲಿ ಏನಿದೆ?
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅವರು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಡಿಕೆ ಶಿವಕುಮಾರ್ ಎಕ್ಸ್ ಸಂದೇಶ
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! pic.twitter.com/klregNRUtv
— DK Shivakumar (@DKShivakumar) November 27, 2025
ಏತನ್ಮಧ್ಯೆ, ರಾಹುಲ್ ಗಾಂಧಿ ಜತೆ ಡಿಕೆ ಶಿವಕುಮಾರ್ ಸಹ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮಾತುಕತೆ ಗುಟ್ಟನ್ನು ಬಿಟ್ಟುಕೊಡ ಡಿಕೆ ಶಿವಕುಮಾರ್, ‘ರಾಹುಲ್ ಗಾಂಧಿಯವರು ನನ್ನೊಂದಿಗೆ ಏನು ಸಂವಹನ ಮಾಡಿದ್ದಾರೆ ಎಂಬುದು ಮಾಧ್ಯಮದಲ್ಲಿ ಮಾತನಾಡುವ ವಿಚಾರವಲ್ಲ, ಹೇಳುವ ಅವಶ್ಯಕತೆಯೂ ಇಲ್ಲ’ ಎಂದಿದ್ದಾರೆ. ಆದರೆ, ತಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಸೀಟು ಪಡೆಯುವುದು ಮತ್ತು ದೇಶದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡುವುದಾಗಿದೆ ಎಂದು ಹೇಳಿದ್ದಾರೆ.
ಎರಡು ದಿನ ಹಿಂದಷ್ಟೇ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರ ಜೊತೆ ಮಾತುಕತೆ ನಡೆಸಿ ದೆಹಲಿಗೆ ತೆರಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂದೇಶ ಕಳುಹಿಸಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 25 ನಿಮಿಷ ಕಾಲ ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆ ನಂತರ ಮಾತನಾಡಿದ್ದ ಅವರು, ಇಲ್ಲಿನ ಸಮಸ್ಯೆಗಳಿಗೆ ಔಷಧಿ ನೀಡುತ್ತೇವೆ. ಹೈಕಮಾಂಡ್‌ನಲ್ಲಿ ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ, ಅಧಿನಾಯಕಿ ಸೋನಿಯಾ ಗಾಂಧಿ ಇದ್ದಾರೆ. ನಾವೆಲ್ಲ ಕುಳಿತು ಯೋಚಿಸಿ ಏನು ಪರಿಹಾರ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದರು.
ಇದನ್ನೂ ಓದಿ: ಕರ್ನಾಟಕ ಅಧಿಕಾರ ಹಂಚಿಕೆ: ಖರ್ಗೆ ಜತೆ ರಾಹುಲ್ ಗಾಂಧಿ 25 ನಿಮಿಷ ಮಾತುಕತೆ! ಏನೇನು ಚರ್ಚೆ ನಡೆಯಿತು ನೋಡಿ
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವುದು ಗಮನ ಸೆಳೆದಿದೆ. ಈ ಪೋಸ್ಟ್ ಮೂಲಕ ಡಿಕೆ ಶಿವಕುಮಾರ್ ಯಾರಿಗೆ, ಏನು ಸಂದೇಶ ಕೊಡಲು ಉದ್ದೇಶಿಸಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
