Ashada Amavasya: ಆಷಾಡ ಅಮಾವಾಸ್ಯೆ; ಹಲವೆಡೆ ದೇವಸ್ಥಾನಗಳು ಬಂದ್, ಬಾಗಿಲುಗಳ ಮುಂದೆಯೇ ಭಕ್ತರ ಪೂಜೆ
ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಬಲಿ ನೀಡಿ, ತಡೆ ಹೊಡೆಸಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು. ಬಾಡೂಟವನ್ನು ಸಹ ಮಾಡುತ್ತಿದ್ದರು. ಇದೀಗ ಭಕ್ತರಿಗೆ ನಿಷೇಧ ಇರುವ ಹಿನ್ನೆಲೆಯಲ್ಲಿ ಜನರಿಲ್ಲದೆ ದೇವಾಲಯ ಬಿಕೋ ಎನ್ನುತ್ತಿದೆ.
ಬೆಂಗಳೂರು: ಇನ್ನೇನು ಆಷಾಡ ಮುಗಿದು ನಾಳೆಯಿಂದ ಶ್ರಾವಣ ಆರಂಭವಾಗಲಿದೆ. ಸಾಲು ಸಾಲು ಹಬ್ಬಗಳು, ವ್ರತಗಳು ಆರಂಭವಾಗಲಿದೆ. ಇಂದು ಆಷಾಡ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಜ್ಯದ ಕೆಲ ದೇವಸ್ಥಾನಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ಹಾಗೂ ಮತ್ತೆ ಕೆಲವು ಕಡೆ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಭೀಮನ ಅಮಾವಾಸ್ಯೆಯಾದ ಇಂದು ಒಂದು ಕೋಟಿಗೂ ಅಧಿಕ ಆದಾಯ ಬರುತ್ತಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯಾ ದೇವಿ ಮಾರಮ್ಮ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧ ಮಾಡಲಾಗಿದೆ. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಇಂದು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ದೇವಾಲಯದ ಒಂದು ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೈಸೂರಿನಲ್ಲಿ ಭೀಮನ ಅಮಾವಾಸ್ಯೆ ಪೂಜೆ ಹಿನ್ನೆಲೆಯಲ್ಲಿ ಅಗ್ರಹಾರದ ರೇಣುಕಾಂಬ ದೇಗುಲದಲ್ಲಿ ಸಂಭ್ರಮ ಮನೆ ಮಾಡಿದೆ. 05,10,20 ಹಾಗೂ 50 ರೂಪಾಯಿಗಳ ಹೊಸ ನೋಟುಗಳಿಂದ ರೇಣುಕಾಂಬೆಗೆ ಅಲಂಕಾರ ಮಾಡಲಾಗಿದ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ವೀಕೆಂಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದೆ.
ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಬಲಿ ನೀಡಿ, ತಡೆ ಹೊಡೆಸಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು. ಬಾಡೂಟವನ್ನು ಸಹ ಮಾಡುತ್ತಿದ್ದರು. ಇದೀಗ ಭಕ್ತರಿಗೆ ನಿಷೇಧ ಇರುವ ಹಿನ್ನೆಲೆಯಲ್ಲಿ ಜನರಿಲ್ಲದೆ ದೇವಾಲಯ ಬಿಕೋ ಎನ್ನುತ್ತಿದೆ.
ಇನ್ನು ಯಾದಗಿರಿಯಲ್ಲಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿದ್ದಾರೆ. ಯಾದಗಿರಿ ತಾಲೂಕಿನ ಮೈಲಾಪುರದಲ್ಲಿರುವ ಮೈಲಾರಲಿಂಗೇಶ್ವರ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಶ್ರಾವಣಮಾಸ ಹಿನ್ನೆಲೆ ದೇವಾಲಯಕ್ಕೆ ಪ್ರವೇಶ ನಿಷೇಧವಿತ್ತು. ಇಂದು, ನಾಳೆ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆದೇಶಿಸಿದ್ದರು. ಆದ್ರೆ ಡಿಸಿ ಆದೇಶವನ್ನು ಲೆಕ್ಕಿಸದೆ ದೇವಾಲಯಕ್ಕೆ ಭಕ್ತರು ಆಗಮಿಸಿದ್ದಾರೆ. ಅಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಕೂಡ ಭಕ್ತರು ಆಗಮಿಸುತ್ತಿದ್ದಾರೆ. ಸದ್ಯ ಈಗ ದೇವಸ್ಥಾನದ ಗೇಟ್ ಬಳಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಕಲಬುರಗಿಯಲ್ಲೂ ಅಮಾವಾಸ್ಯೆ ಪೂಜೆ ಜೋರಾಗಿದೆ. ವೀಕೆಂಡ್ ಕರ್ಫ್ಯೂ ನಡುವೆಯೂ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕಲಬುರಗಿಯ ಶರಣಬಸವೇಶ್ವರ ದೇವಾಲಯದ ಬಾಗಿಲು ಕ್ಲೋಸ್ ಮಾಡಲಾಗಿದೆ. ಹೀಗಾಗಿ ದೇಗುಲದ ಮುಂದೆಯೇ ಭಕ್ತರು ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.
ಆಷಾಢ ಅಮಾವಾಸ್ಯೆ ಹಿನ್ನೆಲೆಯಲ್ಲಿ ಉಡುಪಿಯ ಕಮಲಶಿಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ನೂರಾರು ಭಕ್ತರು ಶ್ರೀ ಬ್ರಾಹ್ಮೀ ದುರ್ಗಾಪರಾಮೇಶ್ವರಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದ ಗಡಿ ಜಿಲ್ಲೆ ಬೀದರ್ನಲ್ಲಿ ವೀಕೆಂಡ್ ಕರ್ಫೂ ಹಿನ್ನೆಲೆಯಲ್ಲಿ ಮುಜರಾಯಿ ಇಲಾಕೆ ವ್ಯಾಪ್ತಿಯ ಜಿಲ್ಲೆಯ ಎಲ್ಲಾ ದೇವಸ್ಥಾನ ಲಾಕ್ ಮಾಡಲಾಗಿದೆ. ದೇವಸ್ಥಾನ ಬಂದ್ ಇದ್ದರೂ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ನಗರದ ಉಗ್ರ ನರಸಿಂಹ ದೇವಸ್ಥಾನಕ್ಕೆ ತೆಲಂಗಾಣ ರಾಜ್ಯದಿಂದ ಭಕ್ತರು ಬಂದಿದ್ದಾರೆ. ದೇವಸ್ಥಾನ ಲಾಕ್ ಇರುವ ಕಾರಣ ಹೊರಗಡೆಯಿಂದ ದೇವರ ದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: Bheemana Amavasya 2021: ಭೀಮನ ಅಮಾವಾಸ್ಯೆಯ ಮಹತ್ವವೇನು?; ಗಂಡನ ಪಾದಪೂಜೆ ಮಾಡಲು ಕಾರಣ ಇಲ್ಲಿದೆ
Published On - 12:22 pm, Sun, 8 August 21