ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ, ನಾಲ್ವರಿಗೆ ಬೈಪಾಸ್ ಸರ್ಜರಿ: ಹೃದಯಹಿಂಡುವ ಕಥೆ
ಲಬ್ ಡಬ್.. ಲಬ್ ಡಬ್.. ಹೃದಯ ಸುಳಿವು ಕೊಡದೆ ಕೈಕೊಡುತ್ತಿದೆ. ಕರ್ನಾಟಕದ ಹಲವೆಡೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಹಾಸನದಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಹಾಸನದಲ್ಲಾಗುತ್ತಿರುವ ಹೃದಯಾಘಾತಕ್ಕೆ ಅಸಲಿ ಕಾರಣ ಕಂಡು ಹಿಡಿಯುವುದೇ ಸವಾಲ್ ಆಗಿದೆ. ಇದರ ಮಧ್ಯೆ ಬಾಗಲಕೋಟೆ ಜಿಲ್ಲೆಯ ಒಂದು ಕುಟುಂಬಕ್ಕೆ ಆನುವಂಶಿಕ ಕಾಯಿಲೆ ರೀತಿಯಲ್ಲಿ ತಲೆಮಾರು ಕಳೆದಂತೆ ಹೃದಯ ಸಂಬಂಧಿ ಕಾಯಿಲೆ ಕಾಡುತ್ತಿದೆ.

ಬಾಗಲಕೋಟೆ, (ಜುಲೈ 03): ಹೃದಯಾಘಾತ (Heart Attack )ಎನ್ನುವ ಪದ ಇತ್ತೀಚೆಗೆ ಪ್ರತಿಯೊಬ್ಬರ ಎದೆ ಬಡಿತವನ್ನು ಹೆಚ್ಚುವಂತೆ ಮಾಡುತ್ತಿದೆ. ವಯಸ್ಸಿನ ಮಿತಿಯೇ ಇಲ್ಲದೆ ಬಾಲಕರಿಂದ ವೃದ್ಧರವರೆಗೂ ಹೃದಯದ ಕಾಯಿಲೆ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಇದರ ನಡುವೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಇಡೀ ಕುಟುಂಬವೇ ಹೃದಯ ಕಾಯಿಲೆಯಿಂದ ಬಳಲಿ ಬೆಂಡಾಗಿದೆ. ಏಳು ಜನ ಹೃದಯಾಘಾತಕ್ಕೆ ಬಲಿಯಾದ್ರೆ ಈಗ ಇನ್ನೂ ನಾಲ್ಕು ಜನ ಚಿಕಿತ್ಸೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ಹೌದು.. ಬಾಗಲಕೋಟೆ ಜಿಲ್ಲೆಯ ಮುಧೋಳ (mudhol) ತಾಲೂಕಿನ ಚೌಡಾಪುರ ತೋಟದ ಹಾದಿನಮನಿ ಕುಟುಂಬ ನೂರಾರು ವರ್ಷಗಳಿಂದ ಕೃಷಿ ನಂಬಿ ಜೀವನ ಕಟ್ಟಿಕೊಂಡಿದೆ. ಆದ್ರೆ ಈ ತುಂಬು ಕುಟುಂಬಕ್ಕೆ ಹೃದಯಾ ಆಘಾತವಾಗಿದೆ. ‘ಹೃದಯ ಬೇನೆ’ ಎಂಬ ಮಹಾಮಾರಿ ಇಡೀ ಕುಟುಂಬ ವಂಶವಾಹಿನಿಯನ್ನೇ ನುಂಗಿ ನೀರು ಕುಡಿಯುತ್ತಿದೆ.
ಕುಟುಂಬಕ್ಕೆ ಹೃದಯಾಘಾತ
ಚೌಡಾಪುರ ತೋಟದ ಹಾದಿನಮನಿ ಕುಟುಂಬದ 7 ಜನ ಈಗಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದು, ನಾಲ್ವರು ಬೈಪಾಸ್ ಸರ್ಜರಿ ಮಾಡಿಸಿಕೊಂಡು ತಪಾಸಣೆ, ಚಿಕಿತ್ಸೆ, ಔಷಧಿಯಿಂದ ದಿನದೂಡುತ್ತಿದ್ದಾರೆ. 15 ವರ್ಷಗಳಲ್ಲಿ ಆಸ್ಪತ್ರೆ ಸೇರಿ ಮೃತಪಟ್ಟ 7 ಜನರ ಸಾವಿಗೆ ಹೃದಯಾಘಾತವೇ ಕಾರಣ ಎಂದು ಖಚಿತವಾಗಿದೆ. ಅಲ್ಲದೇ ಈಗಿರುವ ಅಜ್ಜಿ, ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಹೃದಯ ಬೇನೆ ಬೆಂಬಿಡದೆ ಕಾಡುತ್ತಿದೆ. ಕುಟುಂಬದವರು ಆಗಾಗ ಇಸಿಜಿ ಮಾಡಿಸಿಕೊಳ್ಳುತ್ತಾ ಯಾವಾಗ ಏನಾಗುತ್ತೋ ಎನ್ನುವ ಭಯದಲ್ಲಿ ಬದುಕುವ ಸ್ಥಿತಿ ಇವರದ್ದಾಗಿದೆ.
ಇದನ್ನೂ ಓದಿ: ಮಹಿಳೆಯರೇ ಎಚ್ಚರ: ಹೃದಯಘಾತಕ್ಕೆ ಕಾರಣವಾಗುತ್ತಿವೆ ಗರ್ಭ ನಿರೋಧಕ ಮಾತ್ರೆ
ಹೃದಯಾಘಾತಕ್ಕೆ ಈಗಾಗಲೇ 7 ಜನ ಬಲಿ
ಈ ಕುಟುಂಬ ಯಲ್ಲಪ್ಪ ಹಾದಿಮನಿ ಹಾಗೂ ಯಮನವ್ವ ಹಾದಿಮನಿ ದಂಪತಿಗೆ ದುರಗಪ್ಪ, ಸಂತಪ್ಪ, ರಾಮಪ್ಪ, ರಾಣಪ್ಪ, ಸಂತವ್ವ, ನೀಲವ್ವ, ಹನುಮವ್ವ ಎಂಬ ಏಳು ಮಕ್ಕಳು. ತಾಯಿ ಯಮನವ್ವ ಮಲಗಿದಲ್ಲೇ ಇಹಲೋಕ ತ್ಯಜಿಸಿದ್ದಳು. ವೈದ್ಯರು ನೋಡಿದಾಗ ಗೊತ್ತಾಗಿದ್ದು ಸೀವಿಯರ್ ಹಾರ್ಟ್ ಅಟ್ಯಾಕ್ ಅಂತ. 2001ರಲ್ಲಿ 55 ವರ್ಷದ ರಾಮಪ್ಪ ಮನೆಯಲ್ಲಿ ಊಟ ಮಾಡಿ ಹೊರಗೆ ಹೋಗಲು ಸಿದ್ದರಾಗುವ ವೇಳೆ ಹೃದಯಾಘಾತವಾಗಿತ್ತು. 2002ರಲ್ಲಿ 60 ವರ್ಷದ ರಾಣಪ್ಪ ದನ ಮೇಯಿಸಲು ಹೋದಾಗ ಹೃದಯಾಘಾತ ಆಗಿತ್ತು. ಬಳಿಕ ಮೂರೇ ದಿನಗಳಲ್ಲಿ 24 ವರ್ಷದ ಪಾರವ್ವ ಮನೆಯಲ್ಲಿ ಕೆಲಸ ಮಾಡುವಾಗ ಎದೆ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು.
ಇನ್ನು 2020ರಲ್ಲಿ 70 ವರ್ಷದ ದುರ್ಗಪ್ಪ ಮನೆಯಲ್ಲಿದ್ದಾಗಲೇ ಮೃತಪಟ್ಟಿದ್ದಾರೆ. 2021ರಲ್ಲಿ 65 ವರ್ಷದ ಸಂತಪ್ಪ ಕೂಡ ಮನೆಯಲ್ಲಿದ್ದಾಗಲೇ ಸಾವಾಗಿತ್ತು. ಇನ್ನು 2023ರಲ್ಲಿ ಮೊಮ್ಮಕ್ಕಳಾದ 35 ವರ್ಷದ ಯಲ್ಲಪ್ಪ ತನ್ನ ಮಗನನ್ನು ಹಾಸ್ಟೆಲ್ ಗೆ ಬಿಟ್ಟು ಬರುವಾಗ,ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅವರಿಗೂ ಹೃದಯ ಸಮಸ್ಯೆ ಎಂದು ತಿಳಿದುಬಂದಿದೆ. 2015ರಲ್ಲಿ 50 ವರ್ಷದ ಕಾಶಪ್ಪ ಹೊಲದಲ್ಲಿ ಬಿತ್ತನೆ ಮಾಡುವಾಗ ಹೃದಯಾಘಾತವಾಗಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲಿ ಸಂಭವಿಸುತ್ತಿರುವ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಐಸಿಎಂಆರ್
ನಾಲ್ಕು ಜನರಿಗೆ ಬೈಪಾಸ್ ಸರ್ಜರಿ
ಸದ್ಯ ಒಂದು ವರ್ಷದ ಹಿಂದೆ 70 ವರ್ಷದ ಯಲ್ಲವ್ವ, 50 ವರ್ಷದ ಯಲ್ಲಪ್ಪ, 15 ವರ್ಷದ ಸಂಗಮೇಶ್ ಗೆ ಬೈಪಾಸ್ ಸರ್ಜರಿಯಾಗಿದ್ರೆ, 33 ವರ್ಷದ ಪುಂಡಲೀಕಗೆ ನಾಲ್ಕು ವರ್ಷದ ಹಿಂದೆ ಸರ್ಜರಿಯಾಗಿದೆ. ಸದ್ಯ ನಾಲ್ಕು ಜನರು ಬೈಪಾಸ್ ಸರ್ಜರಿ ಮಾಡಿಸಿಕೊಂಡು ಪ್ರತಿ ದಿನ ಔಷಧಿ, ಚಿಕಿತ್ಸೆ, ತಪಾಸಣೆ ಅಂತ ಆತಂಕದಲ್ಲೇ ನಾಲ್ವರು ಜೀವನ ಕಳೆಯುತ್ತಿದ್ದಾರೆ. ಈ ಕುಟುಂಬದ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಹಲವರು ಹೀಗೆ ಮೃತಪಟ್ಟಿದ್ದಾರೆ ಎನ್ನುವ ಅಂಶ ತಿಳಿದುಬಂದಿದೆ.ಬಡ ಕುಟುಂಬಕ್ಕೆ ಚಿಕಿತ್ಸೆ ಖರ್ಚು ವೆಚ್ಚ ಬಾರವಾಗಿದ್ದು,ಸರಕಾರ ಹಾಗೂ ಜನರು ಸಹಾಯಹಸ್ತಚಾಚಬೇಕಿದೆ.
ಒಟ್ಟಿನಲ್ಲಿ ಹೃದಯಕಾಯಿಲೆ ಈ ಇಡೀ ಕುಟುಂಬಕ್ಕೆ ಬೇತಾಳನಂತೆ ಬೆನ್ನು ಹತ್ತಿದೆ. ಇದರಿಂದ ಬಡ ರೈತ ಕುಟುಂಬದ ದಿಕ್ಕು ತೋಚದಂತಾಗಿದೆ.