ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವು
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಹುನಗುಂದ ತಾಲೂಕಿನ ಧನ್ನೂರು ಕ್ರಾಸ್ ಬಳಿ ನಡೆದಿದೆ.
ಬಾಗಲಕೋಟೆ: ಕೆಎಸ್ಆರ್ಟಿಸಿ (KSRTC) ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಹುನಗುಂದ ತಾಲೂಕಿನ ಧನ್ನೂರು ಕ್ರಾಸ್ ಬಳಿ ನಡೆದಿದೆ. ಹಾಜಿಸಾಬ್ ಬಾಗವಾನ್(50), ಪರಶುರಾಮ ಕಟ್ಟಿ(45) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಮತ್ತೋರ್ವ ಸವಾರ ರಾಜು ಚವ್ಹಾಣ್ (45) ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮೂಲದವರು ಎಂದು ತಿಳಿದು ಬಂದಿದೆ.
ಕಿಯಾ ಕಾರ್ವೊಂದು ಮುದ್ದೇಬಿಹಾಳದಿಂದ ಇಳಕಲ್ ಕಡೆ ಬರುತ್ತಿತ್ತು. ಈ ವೇಳೆ ಕಾರು ಮೊದಲು ಫೋರ್ಡ್ ಎಂಡವರ್ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಇಳಕಲ್ನಿಂದ ಮುದ್ದೇಬಿಹಾಳ ಕಡೆ ಹೊರಟಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮತ್ತು ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಮಂಡ್ಯ: ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಕಲ್ಲಹಳ್ಳಿ ಬಳಿಯ ಮೈಸೂರು ಬೆಂಗಳೂರು ಹೆದ್ದಾರಿ ಬಳಿಯ ಬಿಸಿಲುಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಸಿದ್ದಯ್ಯನಕೊಪ್ಪಲು ಗ್ರಾಮದ ಸತೀಶ್ (40) ಮೃತ ದುರ್ದೈವಿ. ಸತೀಶ್ ತೆಂಗಿನ ಕಾಯಿ ವ್ಯಾಪಾರ ಮುಗಿಸಿಕೊಂಡು ತೆರಳುತ್ತಿರುವ ವೇಳೆ ಅವಘಡ ಸಂಭವಿಸಿದೆ.
ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದು ದೇವಾಲಯದ ಕಾಂಪೌಂಡ್ಗೆ ನುಗ್ಗಿದೆ. ಕಾಂಪೌಂಡ ಡಿಕ್ಕಿಯಾಗಿ ಕಾರು ನಿಂತಿದ್ದರಿಂದ ಅನಾಹುತ ತಪ್ಪಿದೆ. ಕಾರಿನಲ್ಲಿದ್ದ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ