ಪರೀಕ್ಷೆಯಲ್ಲಿ ನಕಲು ಆರೋಪ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
17 ವರ್ಷದ ತೇಜಸ್ವಿನಿ ದೊಡ್ಡಮನಿ ಎಂಬ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಕಾಲೇಜು ಸಿಬ್ಬಂದಿ ನಕಲು ಮಾಡುತ್ತಿರುವುದನ್ನು ಗಮನಿಸಿ ಪ್ರಶ್ನಿಸಿದ್ದರು. ಮನನೊಂದ ತೇಜಸ್ವಿನಿ ಕಾಣೆಯಾಗಿದ್ದು, ನಂತರ ಅವರ ಮೃತದೇಹ ಮಹಾರಾಣಿ ಕೆರೆಯಲ್ಲಿ ಪತ್ತೆಯಾಗಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ, ಮಾರ್ಚ್ 02: ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಧೋಳ (Mudhol) ನಗರದಲ್ಲಿ ನಡೆದಿದೆ. ತೇಜಸ್ವಿನಿ ದೊಡ್ಡಮನಿ (17) ಮೃತ ವಿದ್ಯಾರ್ಥಿನಿ. ತೇಜಸ್ವಿನಿ ದೊಡ್ಡಮನಿ ಮುಧೋಳ ನಗರದ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದಳು. ಫೆಬ್ರವರಿ 27 ರಂದು ರಸಾಯನಶಾಸ್ತ್ರ ವಿಷಯದ ವಾರ್ಷಿಕ ಪರೀಕ್ಷೆ ನಡೆಯಿತು. ಪರೀಕ್ಷೆಯಲ್ಲಿ ತೇಜಸ್ವಿನಿ ನಕಲು ಮಾಡುವುದನ್ನು ಕಂಡ ಕಾಲೇಜು ಸಿಬ್ಬಂದಿ ಪ್ರಶ್ನೆ ಮಾಡಿದರು.
ಈ ವಿಚಾರವನ್ನು ತೇಜಸ್ವಿನಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ, ಪೋಷಕರು ಫೆಬ್ರವರಿ 28 ರಂದು ಕಾಲೇಜಿಗೆ ಬಂದು, ನಕಲು ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು. ಆಗ ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮೆರಾ ದೃಶ್ಯ ತೋರಿಸಲು ಮುಂದಾದರು. ಅಲ್ಲದೇ, ಕಾಲೇಜು ಸಿಬ್ಬಂದಿ ಪೋಷಕರ ಸಮ್ಮುಖದಲ್ಲಿ ತೇಜಸ್ವಿನಿಗೆ ಬುದ್ದಿವಾದ ಹೇಳಿದ್ದಾರೆ.
ಮನನೊಂದ ವಿದ್ಯಾರ್ಥಿನಿ ತೇಜಸ್ವಿನಿ ಕಾಲೇಜಿನಿಂದ ಹೊರಗೆ ಓಡಿ ಹೋಗಿದ್ದಾಳೆ. ಎಷ್ಟೂ ಹುಡುಕಿದರೂ ತೇಜಸ್ವಿನಿ ಸಿಗಲಿಲ್ಲ. ಬಳಿಕ, ಪೋಷಕರು ಮುಧೋಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದರು. ರವಿವಾರ (ಮಾ.02) ಮಹಾರಾಣಿ ಕೆರೆಯಲ್ಲಿ ತೇಜಸ್ವಿನಿ ಶವವಾಗಿ ಪತ್ತೆಯಾಗಿದ್ದಾಳೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಕಾಣೆಯಾಗಿದ್ದ ಉದ್ಯಮಿ ಶವವಾಗಿ ಪತ್ತೆ
ಬೆಂಗಳೂರು: ಕಾಣೆಯಾಗಿದ್ದ ಉದ್ಯಮಿಯ ಶವ ರವಿವಾರ ಪತ್ತೆಯಾಗಿದೆ. ಅಶ್ವಿನ್ ಕುಮಾರ್ (42) ಮೃತ ಉದ್ಯಮಿ. ಕೊಡಿಗೇಹಳ್ಳಿಯ ಮಾನಸ್ ಆಸ್ಪತ್ರೆಯ ಬಳಿ ಕಾರಿನಲ್ಲಿ ಉದ್ಯಮಿ ಅಶ್ವಿನ್ ಕುಮಾರ್ ಶವವಾಗಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಹೃದಯಾಘಾತದಿಂದ ಅಶ್ವಿನ್ ಕುಮಾರ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಉದ್ಯಮಿ ಅಶ್ವಿನ್ ಕುಮಾರ್ ಶನಿವಾರ ಬೆಳಗ್ಗೆ ಕೆಲಸದ ನಿಮಿತ್ತ ತೆರಳಿದ್ದರು. ಹಲವು ಬಾರಿ ಕರೆ ಮಾಡಿದರೂ ಅಶ್ವಿನ್ ಕುಮಾರ್ ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ಗಾಭರಿಗೊಂಡಿದ್ದ ಕುಟುಂಬಸ್ಥರು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರು.
ಇದನ್ನೂ ಓದಿ: ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ಲೊಕೇಶನ್ ಪರಿಶೀಲನೆ ವೇಳೆ ಮಾನಸ್ ಆಸ್ಪತ್ರೆ ಬಳಿ ಉದ್ಯಮಿ ಅಶ್ವನ್ ಕುಮಾರ್ ಇರೋದು ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದ್ದಾಗ ರಸ್ತೆ ಬದಿ ತನ್ನದೇ ಕಾರಿನಲ್ಲಿ ಅಶ್ವಿನ್ ಕುಮಾರ್ ಮಲಗಿರೋ ಸ್ಥಿತಿಯಲ್ಲಿ ಕಂಡಿದ್ದಾರೆ. ಕಾರಿನ ಡೋರ್ ಲಾಕ್ ಆಗಿದ್ದರಿಂದ ಗ್ಲಾಸ್ ಒಡೆದು ಪಕ್ಕದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಉದ್ಯಮಿ ಅಶ್ವಿನ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Sun, 2 March 25