ಗ್ರಾಪಂ ಸದಸ್ಯನನ್ನು ಹನಿಟ್ರ್ಯಾಪ್ ಮಾಡಲು ಯತ್ನ: ಮೂವರು ಆರೋಪಿಗಳನ್ನು ಹಿಡಿದು ಥಳಿಸಿದ ಗ್ರಾಮಸ್ಥರು
ಗ್ರಾಮಸ್ಥರು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಪಂ ಸದಸ್ಯ ಅನಿಲ ದಳವಾಯಿ ಹನಿಟ್ರ್ಯಾಪ್ಗೆ ಒಳಗಾದ ವ್ಯಕ್ತಿ. ಅನಿಲ ದಳವಾಯಿ ಕಿಡ್ನಾಪ್ ಮಾಡಿ ಎಂಟು ಲಕ್ಷಕ್ಕೆ ರೂ. ಬೇಡಿಕೆಯಿಡಲಾಗಿದೆ.
ಬಾಗಲಕೋಟೆ: ಗ್ರಾಪಂ ಸದಸ್ಯನನ್ನು ಹನಿಟ್ರ್ಯಾಪ್ (honeytrap) ಮಾಡಲು ಯತ್ನಿಸಿದ್ದು, ಮೂವರನ್ನು ಹಿಡಿದು ಗ್ರಾಮಸ್ಥರು ಥಳಿಸಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದಲ್ಲಿ ನಡೆದಿದೆ. ರವಿ ದೊಡ್ಡಮನಿ, ಹನುಮಂತ ಭಜಂತ್ರಿ, ನರಸಪ್ಪ ಗಡೇಕಲ್ ಎಂಬ ವ್ಯಕ್ತಿಗಳಿಗೆ ಹೊಡೆಯಲಾಗಿದೆ. ಗ್ರಾಮಸ್ಥರು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಪಂ ಸದಸ್ಯ ಅನಿಲ ದಳವಾಯಿ ಹನಿಟ್ರ್ಯಾಪ್ಗೆ ಒಳಗಾದ ವ್ಯಕ್ತಿ. ಅನಿಲ ದಳವಾಯಿ ಕಿಡ್ನಾಪ್ ಮಾಡಿ ಎಂಟು ಲಕ್ಷಕ್ಕೆ ರೂ. ಬೇಡಿಕೆಯಿಡಲಾಗಿದೆ. ನಂತರ ಎರಡು ಲಕ್ಷಕ್ಕೆ ಇಬ್ಬರು ವಂಚಕರು ಒಪ್ಪಿದ್ದು, ಹುನ್ನೂರು ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾಗ ಇಬ್ಬರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಇದೆ ವೇಳೆ ಅನಿಲ ದಳವಾಯಿ ಕಿಡ್ನಾಪ್ ಸುದ್ದಿ ಹರಡಿತ್ತು. ವಿಚಾರಣೆ ವೇಳೆ ಮೂವರ ಹೆಸರು ತಿಳಿದು ಥಳಿಸಲಾಗಿದೆ.
ಅನಿಲ ದಳವಾಯಿಯನ್ನು ಹುನ್ನೂರು ಬಳಿಯ ಕುಲ್ಹಳ್ಳಿ ಗುಡ್ಡಕ್ಕೆ ಕರೆದೊಯ್ದಿದ್ದರು. ಶ್ರೀದೇವಿ ಎಂಬ ಮಹಿಳೆ ಮೂಲಕ ಕುಲ್ಹಳ್ಳಿ ಗುಡ್ಡಕ್ಕೆ ಕರೆದೊಯ್ದಿದ್ದರು. ಮಹಿಳೆ ಜೊತೆ ನಿಂತಾಗ ಹಿಡಿದು ಹಣ ವಸೂಲಿಗೆ ಮುಂದಾಗಿದ್ದರು. ನಿನ್ನ ಬಗ್ಗೆ ಯುಟ್ಯೂಬ್ ಚಾನಲ್‌ನಲ್ಲಿ ಸುದ್ದಿ ಹಾಕುತ್ತೇವೆ. ಮಾನಮರ್ಯಾದೆ ಹರಾಜು ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಹಣ ವಸೂಲಿಗೆ ಇಳಿದಿದ್ದರು. ರವಿ ದೊಡ್ಡಮನಿ ಯುಟ್ಯೂಬ್ ಚಾನಲ್ ಮೂಲಕ ಪತ್ರಕರ್ತ ಎಂದು ವಂಚನೆಗೆ ಇಳಿದಿದ್ದ. ಮೂವರಿಗೂ ಥಳಿಸಿ ಹುನ್ನೂರು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿಲ್ಲ. ಹನಿಟ್ರ್ಯಾಪ್ನಲ್ಲಿ ಭಾಗಿಯಾಗಿದ್ದ ಮಹಿಳೆ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಿದ್ದಾರೆ.
ಡಿಗ್ರಿ ಹಾಗೂ ಪಿಯುಸಿ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ: ಇಬ್ಬರ ಬಂಧನ
ಬೆಂಗಳೂರು: ಡಿಗ್ರಿ ಹಾಗೂ ಪಿಯುಸಿ ಮಾರ್ಕ್ಸ್ ಕಾರ್ಡ್ಗಳನ್ನ ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಅಯೂಬ್ ಪಾಷ ಅಲಿಯಾಸ್ ಅಯೂಬ್, ಹಾಗೂ ಖಲೀಲ್ ವುಲ್ಲಾ ಬೇಗ್ ಅಲಿಯಾಸ್ ಖಲೀಲ್ ಬಂಧಿತರು. ಬಂಧಿತರಿಂದ 38 ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಫೇಕ್ ಸರ್ಟಿಫಿಕೇಟ್ಗಳನ್ನ ನಕಲಿ ಮಾಡಿ, 10 ರಿಂದ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. 10ನೇ ತರಗತಿ, ಪಿಯುಸಿ ಹಾಗೂ ಡಿಗ್ರಿ ಅಂಕಪಟ್ಟಿಗಳನ್ನ ಮಾಡಿ ಮಾರಾಟ ಮಾಡುತ್ತಿದ್ದರು. ಯಾರಿಗೆ ಅವಶ್ಯಕತೆ ಇರುತ್ತೊ ಅಂತವರಿಗೆ ಅಸಲಿ ತಲೆ ಮೇಲೆ ಹೊಡೆದಂತೆ ನಕಲಿ ದಾಖಲೆಗಳ ಸೃಷ್ಟಿ ಮಾಡಿ ಮಾರುತ್ತಿದ್ದರು.
ಸದ್ಯ 4 ಜನ ಮಾರ್ಕ್ಸ್ ಕಾರ್ಡ್ಗಳನ್ನ ಪಡೆದಿರುವ ಫಲಾನುಭವಿಗಳ ಪತ್ತೆ ಮಾಡಲಾಗಿದೆ. ಮೂಲತಃ ಚಿಕ್ಕಬಳ್ಳಾಪುರದ ಆರೋಪಿಗಳು ಶೇಷಾದ್ತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. 2003ರಲ್ಲಿ ಒಂದು ಕೇಸ್ ದಾಖಲಾಗಿತ್ತು. ಸ್ಥಳೀಯ ಹುಡುಗರ ಮೂಲಕ ನಕಲಿ ದಾಖಲೆಗಳನ್ನ ಮಾರಾಟ ಮಾಡ್ತಿದ್ದ ಖಲೀಲ್ ವುಲ್ಲಾ, ಸದ್ಯ ಇಬ್ಬರು ಬಂಧಿತರನ್ನ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.
ಉಪನ್ಯಾಸಕರು ಬೈದಿದ್ದಕ್ಕೆ ಮನನೊಂದು ಇಲಿ ಪಾಷಾಣ ಸೇವಿಸಿದ ಮೂವರು ವಿದ್ಯಾರ್ಥಿನಿಯರು
ಶಿವಮೊಗ್ಗ: ಹಾಸ್ಟೆಲ್ ಒಂದರಲ್ಲಿ ಇಲಿ ಪಾಷಾಣ ಸೇವಿಸಿ ಮೂವರು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ತೀರ್ಥಹಳ್ಳಿಯ ಪದವಿ ಪೂರ್ವ ಕಾಲೇಜಿನ ಹಾಸ್ಟೆಲ್ನಲ್ಲಿ ನಡೆದಿದೆ. 17 ವರ್ಷ ವಯಸ್ಸಿನ ಮೂವರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ತರಗತಿ ಸರಿಯಾಗಿ ಬರುತ್ತಿಲ್ಲ ಎಂದು ಉಪನ್ಯಾಸಕರು ಬೈದಿದ್ದರಿಂದ ವಿದ್ಯಾರ್ಥಿನಿಯರು ಇಲಿ ಪಾಷಾಣ ಸೇವಿಸಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಕಾಲೇಜು ಮುಗಿಸಿಕೊಂಡು ಹಾಸ್ಟೆಲ್ಗೆ ಹೋಗಿದ್ದ ವಿದ್ಯಾರ್ಥಿನಿಯರು ರಾತ್ರಿ ಇಲಿ ಪಾಷಾಣ ಸೇವಿಸಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ಕೂಡಲೇ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.