ಸಹೋದರನ ಸ್ನೇಹಿತನ ತಾಯಿ ಜೊತೆಯೇ ಅನೈತಿಕ ಸಂಬಂಧ ಭೀಕರ ಕೊಲೆಯಲ್ಲಿ ಅಂತ್ಯ: ಒಂದೇ ಫೋನ್ ಕಾಲ್ನಿಂದ ಬಯಲಾಯ್ತು ರಹಸ್ಯ!
ಅವರಿಬ್ಬರೂ ಸ್ನೇಹಿತರು. ಅಂದು ಎಣ್ಣೆ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದರು. ಅದು ಎಷ್ಟರಮಟ್ಟಿಗೆ ಅಂದರೆ, ಇಬ್ಬರಿಗೂ ನಡೆಯಲೂ ಆಗದ ರೀತಿ. ನಂತರ ಬೆಳಗ್ಗೆ ಇಬ್ಬರಲ್ಲಿ ಒಬ್ಬ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಇನ್ನೊಬ್ಬ ನಾಪತ್ತೆಯಾಗಿದ್ದ. ಒಂದೇ ಒಂದು ಫೋನ್ ಕಾಲ್ನಿಂದ ಪೊಲೀಸರು ಪ್ರಕರಣ ಭೇದಿಸಿದ್ದು, ಪರಾರಿಯಾಗಿದ್ದ ಸ್ನೇಹಿತನೇ ಕೊಲೆಗಾರ ಎಂಬುದು ಗೊತ್ತಾಗಿದೆ. ಅಷ್ಟಕ್ಕೂ ಈ ಕೊಲೆಗೆ ಕಾರಣವಾಗಿದ್ದು, ಸ್ನೇಹಿತನ ಸಹೋದರ ಕೊಲೆಗಾರನ ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದು!

ಬಾಗಲಕೋಟೆ, ಸೆಪ್ಟೆಂಬರ್ 26: ಹಲವಾರು ವರ್ಷಗಳ ಸ್ನೇಹವೊಂದನ್ನು ಅನೈತಿಕ ಸಂಬಂಧ, ಕುಡಿತದ ಅಮಲು ಬಲಿ ತೆಗೆದುಕೊಂಡಿದೆ. ಬಾಗಲಕೋಟೆ (Bagalkot) ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ನಡೆದ ರಹಸ್ಯ ಕೊಲೆ ಪ್ರಕರಣವೊಂದನ್ನು ಪೊಲೀಸರು ಕೊನೆಗೂ ಬಯಲಿಗೆಳೆದಿದ್ದು, ಸಿನಿಮೀಯ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತರಾದ ಬಸಯ್ಯ ಮಠಪತಿ (34) ಹಾಗೂ ಬಸವರಾಜ ಲಿಂಗನೂರು (24) ಇಬ್ಬರೂ ಸ್ನೇಹಿತರು, ಸೆಪ್ಟೆಂಬರ್ 12 ರಂದು ರಾತ್ರಿ ಎಣ್ಣೆ ಪಾರ್ಟಿ ಮಾಡಿ ಮನೆಗೆ ತೆರಳಿದ್ದರು. ಆದರೆ, ಮಾರ್ಗ ಮಧ್ಯೆ, ಸ್ನೇಹಿತ ಬಸಯ್ಯ ಮಠಪತಿ ಹೆಣವಾಗಿ ಹೋಗಿದ್ದ.
ಮರುದಿನ ಬೆಳಗ್ಗೆ 34 ವರ್ಷದ ಬಸಯ್ಯ ಮಠಪತಿ ದೇಹ ಕತ್ತು ಬಿಗಿದು ಕೊಲೆಯಾದ ಸ್ಥಿತಿಯಲ್ಲಿ ಸಿಕ್ಕಿತ್ತು. ಆದರೆ ಈತನ ಜೊತೆಗೆ ಮದ್ಯ ಸೇವಿಸಿದ್ದ ಬಸವರಾಜ ಲಿಂಗನೂರು ನಾಪತ್ತೆಯಾಗಿದ್ದ. ಬಸವರಾಜ ಲಿಂಗನೂರು ನಾಪತ್ತೆಯಾದ ಕಾರಣ ಆತನ ಮೇಲೆ ಪೊಲೀಸರಿಗೆ ಸಂಶಯವಿತ್ತು, ಆದರೆ ಅದು ಸಾಬೀತಾಗಿರಲಿಲ್ಲ. ಕೊಲೆಗೂ ಮುನ್ನ ಇಬ್ಬರು ನಶೆಯಲ್ಲಿ ನಡೆದುಕೊಂಡು ಹೋದ ದೃಶ್ಯ ಬಟ್ಟೆ ಅಂಗಡಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಆ ಒಂದು ಫೋನ್ ಕಾಲ್ ನೀಡಿತ್ತು ಆರೋಪಿಯ ಸುಳಿವು
ಈ ಮಧ್ಯೆ, ನಾಪತ್ತೆಯಾಗಿದ್ದ ಬಸವರಾಜ ಲಿಂಗನೂರು ತಾಯಿಗೆ ಕರೆ ಮಾಡಿ, ‘ಮನೆಗೆ ಪೊಲೀಸರು ಬಂದಿದ್ದರಾ’ ಎಂದು ವಿಚಾರಿಸಿದ್ದ. ಸಿಸಿ ಕ್ಯಾಮರಾ ದೃಶ್ಯ ಹಾಗೂ ಅದೊಂದು ಕರೆಯಾಧರಿಸಿ ಬೀಳಗಿ ಪೊಲೀಸರು ಕೊಲೆಗಾರನ ಪತ್ತೆ ಹಚ್ಚಿದ್ದಾರೆ. ಬಸವರಾಜ ಲಿಂಗನೂರನೇ ಕೊಲೆ ಆರೋಪಿಯಾಗಿದ್ದು, ಬಂಧನಕ್ಕೊಳಗಾಗಿದ್ದಾನೆ.
ಬಸವರಾಜ ಲಿಂಗನೂರ ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಠಪತಿಯ ಸಹೋದರ
ಈ ಇಬ್ಬರು ಸ್ನೇಹಿತರ ಮಧ್ಯೆ ಹತ್ತು ವರ್ಷ ಅಂತರವಿತ್ತು, ಆದರೂ ಸ್ನೇಹ ಇತ್ತು. ಇವರಿಬ್ಬರ ಜೊತೆ ಇನ್ನೊಬ್ಬ ಸ್ನೇಹಿತ ಸೇರಿ ಒಟ್ಟು ಮೂರು ಜನ ಅಂದು ಊರ ಹೊರಗೆ ಸಾರಾಯಿ ಕುಡಿದಿದ್ದರು. ಅಲ್ಲೂ ಬಸಯ್ಯ ಹಾಗೂ ಲಿಂಗನೂರು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಇನ್ನೊಬ್ಬ ಸ್ನೇಹಿತ ಗಲಾಟೆ ಬಿಡಿಸಿ ಕಳಿಸಿದ್ದಾನೆ. ನಂತರ ಇಬ್ಬರು ಸೇರಿ ಬಸಯ್ಯ ಮಠಪತಿಯ ಯಾರೂ ವಾಸವಿರದ ಮನೆಗೆ ಬಂದು ಪುನಃ ಗಲಾಟೆ ಮಾಡಿದ್ದಾರೆ. ಆಗ ಟವೆಲ್ನಿಂದ ಬಿಗಿದು ಬಸಯ್ಯನನ್ನು ಬಸವರಾಜ ಲಿಂಗನೂರು ಕೊಲೆ ಮಾಡಿದ್ದಾನೆ. ಇದಕ್ಕೆ ಕಾರಣ ಪರಿಶೀಲನೆ ವೇಳೆ ಗೊತ್ತಾಗಿದೆ. ಬಸಯ್ಯ ಮಠಪತಿಯ ಸಹೋದರ ಬಸವರಾಜ ಲಿಂಗನೂರು ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಕುಡಿತದ ಅಮಲಿನಲ್ಲಿ ಇಬ್ಬರೂ ಜಗಳವಾಡಿಕೊಂಡಿದ್ದರು ಎಂಬುದು ಬಯಲಾಗಿದೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ ಬಸವರಾಜ, ನಂತರ ಬೈಕ್ ತೆಗೆದುಕೊಂಡು ಮಹಾರಾಷ್ಟ್ರ ಕಡೆ ಪರಾರಿಯಾಗಿದ್ದ. ಮಾರ್ಗ ಮಧ್ಯೆ ಕೃಷ್ಣಾ ನದಿಯಲ್ಲಿ ಟವೆಲ್ ಎಸೆದಿದ್ದ. ಮಹಾರಾಷ್ಟ್ರದ ಸೊಲ್ಲಾಪುರದಿಂದ ತಾಯಿಗೆ ಕರೆ ಮಾಡಿದ್ದ. ಆ ಮೂಲಕ ತಾನು ಇರುವ ಜಾಗವನ್ನು ತನಗೆ ಅರಿವಿಲ್ಲದೇ ಪೊಲೀಸರಿಗೆ ಗೊತ್ತಾಗಲು ಕಾರಣನಾಗಿದ್ದಾನೆ.
ಇದನ್ನೂ ಓದಿ: ಪೆನ್ನು ವಿಚಾರಕ್ಕೆ ಜಗಳ: 5ನೇ ಕ್ಲಾಸ್ ವಿದ್ಯಾರ್ಥಿಯ ಕಣ್ಣುಗುಡ್ಡೆಯನ್ನೇ ಕಿತ್ತ 1ನೇ ತರಗತಿ ವಿದ್ಯಾರ್ಥಿ!
ಒಟ್ಟಿನಲ್ಲಿ, ಸಹೋದರನ ಅನೈತಿಕ ಸಂಬಂಧಕ್ಕೆ ಅಣ್ಣ ಬಲಿಯಾಗಿದ್ದಾನೆ. ಸ್ನೇಹಿತರ ಮಧ್ಯೆ ಇದ್ದ ಅನೈತಿಕ ಸಂಬಂಧದ ಧ್ವೇಷ ಕೊಲೆಯಲ್ಲಿ ಅಂತ್ಯವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 am, Fri, 26 September 25




