
ಬಾಗಲಕೋಟೆ, ನವೆಂಬರ್ 26: ಹೋಮ್‌ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಎರಡನೇ ತರಗತಿಯ ಬಾಲಕನ ಮೇಲೆ ಸಹ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಬಾಲಕನ ಮೈಮೇಲೆ ಬಾಸುಂಡೆಗಳು ಮೂಡಿದ್ದು, ಗಾಯಗೊಂಡಿರುವ ವಿದ್ಯಾರ್ಥಿಯನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕರ ಅಮಾನವೀಯ ವರ್ತನೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವಲಗಿ ಗ್ರಾಮದ ರಾಣಿ ಚೆನ್ನಮ್ಮ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎರಡನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಆಸಂಗಿ ಮೇಲೆ ಸಹ ಶಿಕ್ಷಕಿ ವಿಜಯಲಕ್ಷ್ಮಿ ತಳವಾರ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಅಲ್ಲಿದ್ದ ಮುಖ್ಯಶಿಕ್ಷಕ ಅಂಬಿ ಕೂಡ ಲಾಠಿಯಿಂದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶ್ರೇಯಸ್ ಅನಾರೋಗ್ಯದ ಕಾರಣ ಕಳೆದ ಎರಡು ದಿನಗಳಿಂದ ಶಾಲೆಗೆ ಹಾಜರಾಗಿರಲಿಲ್ಲ. ಬುಧವಾರ ಮತ್ತೆ ಶಾಲೆಗೆ ಬಂದಾಗ ಹೋಮ್‌ವರ್ಕ್ ಮಾಡದಿರುವುದನ್ನು ಪ್ರಶ್ನಿಸಿ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಮುಖ್ಯಶಿಕ್ಷಕರು ಕೂಡ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಾಲಕನಿಗೆ ಊಟ ನೀಡದೆ, ಕೈಗಳನ್ನು ಎತ್ತಿಕೊಂಡು ದೀರ್ಘಕಾಲ ಬಗ್ಗಿ ನಿಲ್ಲುವ ಶಿಕ್ಷೆ ವಿಧಿಸಲಾಗಿದೆ. ಇದರಿಂದ ಮಗು ಜ್ವರದಿಂದ ಬಳಲುತ್ತಿದೆ ಎಂದು ಪೋಷಕರು ದೂರಿದ್ದಾರೆ.
ಮಗುವಿನ ಮೇಲೆ ಹಲ್ಲೆ ನಡೆಸಲು ಶಿಕ್ಷಕರಿಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಪ್ರಶ್ನಿಸಿರುವ ಕುಟುಂಬಸ್ಥರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾ ಉಪನಿರ್ದೇಶಕ ಸೀರಾತಾಮ್ ಅವರು ಘಟನೆ ಕುರಿತು ಪರಿಶೀಲನೆ ನಡೆಸಿ, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್, ಎಐ ಯುಗದಲ್ಲೂ ಪತ್ರ ಸಂಸ್ಕೃತಿ ಜೀವಂತವಾಗಿಟ್ಟ ಶಿಕ್ಷಕ! 53 ಸಾವಿರ ಪತ್ರ ಬರೆದು ದಾಖಲೆ
ಮಕ್ಕಳಿಗೆ ಶಿಸ್ತು ಕಲಿಸುವ ನೆಪದಲ್ಲಿ ದೈಹಿಕ ಹಲ್ಲೆ ನಡೆಸಿರುವ ಆರೋಪಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿತ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ