ಬಾಗಲಕೋಟೆ ಕಾಂಗ್ರೆಸ್​ನಲ್ಲಿ ಬಂಡಾಯದ ಗಾಳಿ, ಆಪರೇಷನ್​ಗೆ ಇಳಿದ ಬಿಜೆಪಿ; ವೀಣಾ ಕಾಶಪ್ಪನವರ್​ಗೆ ಗಾಳ

| Updated By: Rakesh Nayak Manchi

Updated on: Mar 28, 2024 | 11:09 AM

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್​ ಅವರಿಗೆ ಘೋಷಣೆಯಾಗಿದೆ. ಇದರಿಂದಾಗಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಅವರು ತೀವ್ರ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಗಾಳಿ ಬೀಸುತ್ತಿದೆ. ಈ ನಡುವೆ ಸುದ್ದಿಲ್ಲದೆ ಬಿಜೆಪಿ ಆಪರೇಷನ್ ಕಮಲಕ್ಕೆ ಇಳಿದಿದ್ದು, ವೀಣಾ ಕಾಶಪ್ಪನವರ್ ಅವರನ್ನು ಸಂಪರ್ಕಿಸಿದೆ.

ಬಾಗಲಕೋಟೆ ಕಾಂಗ್ರೆಸ್​ನಲ್ಲಿ ಬಂಡಾಯದ ಗಾಳಿ, ಆಪರೇಷನ್​ಗೆ ಇಳಿದ ಬಿಜೆಪಿ; ವೀಣಾ ಕಾಶಪ್ಪನವರ್​ಗೆ ಗಾಳ
ಬಾಗಲಕೋಟೆ ಕಾಂಗ್ರೆಸ್​ನಲ್ಲಿ ಬಂಡಾಯ, ಆಪರೇಷನ್​ಗೆ ಇಳಿದ ಬಿಜೆಪಿ; ವೀಣಾ ಕಾಶಪ್ಪನವರ್​ಗೆ ಗಾಳ
Follow us on

ಬಾಗಲಕೋಟೆ, ಮಾ.28: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ (Samyukta Patil)​ ಅವರಿಗೆ ಘೋಷಣೆಯಾಗಿರುವುದರಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿದೆ. ಅಸಮಾಧಾನ ಶಮನಕ್ಕೆ ನಾಯಕರು ಯತ್ನಿಸುತ್ತಿದ್ದಾರೆ. ಈ ನಡುವೆ, ಬಿಜೆಪಿ ಸುದ್ದಿಲ್ಲದೆ ಆಪರೇಷನ್ ಕಮಲಕ್ಕೆ ಇಳಿದಿದ್ದು, ಪಕ್ಷ ಸೇರುವಂತೆ ವೀಣಾ ಕಾಶಪ್ಪನವರ್ (Veena Kashappanavr)​ ಅವರಿಗೆ ಬಿಜೆಪಿ ಆಹ್ವಾನ ನೀಡಿದೆ ಎಂಬ ಮಾಹಿತಿ ಖಚಿತ ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್​ನಲ್ಲಿ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಪಂಚಮಸಾಲಿ ಮುಖಂಡರ ಸಭೆಯಲ್ಲಿ ಕುತಂತ್ರ, ಹುನ್ನಾರ ನಡೆದಿದೆ ಎಂದು ಸ್ವ ಸಮುದಾಯದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಮಾಜಕ್ಕೆ ದುಡಿದವರು ನಾವು, ಅದರ ಫಲ ಪಡೆದವರು ಇನ್ನೊಬ್ಬರು ಎಂದು ವೀಣಾ ಕಾಶಪ್ಪನವರ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪತಿಯನ್ನು ಎಳೆತರದೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿ ನನಗಿದೆ: ವೀಣಾ ಕಾಶಪ್ಪನವರ್, ಕಾಂಗ್ರೆಸ್ ನಾಯಕಿ

ಇದರ ಬೆನ್ನಲ್ಲೇ, ನಮ್ಮ ಪಕ್ಷ ಬರುವಂತೆ ವೀಣಾ ಅವರಿಗೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಗೆ ಬನ್ನಿ, ನಿಮಗೆ ನಮ್ಮ ಪಕ್ಷದಲ್ಲಿ ಭವಿಷ್ಯ ಇದೆ ಎಂದು ಕಳೆದ ಮೂರು ದಿನಗಳಿಂದ ಬಿಜೆಪಿ ನಾಯಕರು ವೀಣಾ ಕಾಶಪ್ಪನವರ್ ಅವರಿಗೆ ಆಫರ್ ನೀಡುತ್ತಿದ್ದಾರೆ. ಈ ಬಗ್ಗೆ ವೀಣಾ ಅವರು ತಮ್ಮ ಆಪ್ತರ ಬಳಿ ಸಮಾಲೋಚನೆ ಮಾಡಿದ್ದಾರೆ. ಅಲ್ಲದೆ, ಯಾವುದೇ ನಿರ್ಧಾರ ತಿಳಿಸದೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಪತಿ ಕಾಂಗ್ರೆಸ್​ನಲ್ಲಿ ಇದ್ದಾರೆ, ಕಾಂಗ್ರೆಸ್ ಶಾಸಕರು, ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ವೀಣಾ ಕಾಶವಪ್ಪನವರ್ ಪಕ್ಷ ಬಿಟ್ಟು ಹೋಗಲ್ಲ ಎನ್ನುವ ಮಾತು ಕೇಳಿಬರುತ್ತಿವೆ. ಅದಾಗ್ಯೂ, ಕಾದು ನೋಡುವ ತಂತ್ರ ಅನುಸರಿಸುತ್ತಿರುವ ವೀಣಾ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ