ಬಾಗಲಕೋಟೆ: ಕಬ್ಬಿಗೆ (Sugarcane) ಸೂಕ್ತ ಬೆಲೆ ನಿಗದಿಪಡಿಸುವಂತೆ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು (ನ.14) ಸರ್ಕಾರ ಪ್ರತಿಭಟನಾಕರರ ಹೋರಾಟಕ್ಕೆ ಮಣಿದು ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ನ್ಯೂ ಆಡಿಟೋರಿಯಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟಿಲ್, ಸಕ್ಕರೆ ಸಚಿವ ಶಂಕರಪಾಟಿಲ್ ಮುನೇನಕೊಪ್ಪ, ಸಚಿವ ಕಾರಜೋಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಗಳ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 2900 ರೂ ದರ ನಿಗದಿ ಮಾಡುವಂತೆ ರೈತರು ಕೇಳಿದರು. ಆದರೆ ಇದಕ್ಕೆ ಒಪ್ಪದ ಕಾರ್ಖಾನೆ ಆಡಳಿತ ಮಂಡಳಿ 2800 ಮಾತ್ರ ಕೊಡೋದಾಗಿ ಕಾರ್ಖಾನೆ ಆಡಳಿತ ಮಂಡಳಿಗಳು ಹೇಳಿದವು. ಇದಕ್ಕೆ ಒಪ್ಪದ ರೈತರು ಸರ್ಕಾರ, ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಸಿ.ಸಿ ಪಾಟೀಲ್ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮಾತನಾಡಿದರು ಸಮಸ್ಯೆ ಬಗೆಹರಿಯಲಿಲ್ಲ. ಆಗ ಸಿ.ಸಿ ಪಾಟೀಲ್ ಇನ್ನೇರಡು ದಿನ ಸಮಯ ಕೊಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಬೆಲೆ ಅಂತಿಮಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಹೋರಾಟಗಾರರು ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈಗಲೇ ಘೋಷಣೆಮಾಡಿ ಎಂದು ಸಚಿವರಿಗೆ ಕಬ್ಬು ಬೆಳೆಗಾರರ ಮುತ್ತಿಗೆ ಹಾಕಿದರು. ನಾಳೆ (ನ.15) ಮಧ್ಯಾಹ್ನ ಅಥವಾ ಸಂಜೆವರೆಗೆ ಟೈಮ್ ಕೊಡಿ ಎಂದು ಸಚಿವರು ಕೇಳಿದರು. ಆಗ ಹೋರಾಟಗಾರರು ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಮುಧೋಳ ನಗರ ಬಂದ್ !
ಸಭೆ ಬಳಿಕ ಮುಧೋಳ-ವಿಜಯಪುರ ಬೈಪಾಸ್ ರಸ್ತೆಯಲ್ಲಿ ಕಬ್ಬು ಬೆಳೆಗಾರರು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ನಾಳೆ (ನ.15) ಮುಧೋಳ ನಗರ ಬಂದ್ಗೆ ಕರೆ ಕೊಟ್ಟಿದ್ದಾರೆ. ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟು ಬಹುತೇಕ ಬಂದ್ ಸಾಧ್ಯತೆ. ಬಸ್ ಸಂಚಾರ ವ್ಯತ್ಯಯವಾಗಲಿದ್ದು, ಶಾಲಾ ವಾಹನ, ಹಾಲಿನ ವಾಹನ, ಆಂಬುಲೆನ್ಸ್ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಎಲ್ಲ ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ