AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ: 59 ಜನರ ವಿರುದ್ಧ FIR ದಾಖಲು

ಬಾಗಲಕೋಟೆ ಜಿಲ್ಲೆ ಕಲಾದಗಿಯಲ್ಲಿರೋ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ವಿವಾದ 8 ವರ್ಷದ ನಂತರ ಮತ್ತೆ ಸ್ಪೋಟವಾಗಿದೆ. ಈ ಇದರ ಮಧ್ಯೆ ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರುಷರು, ಮಹಿಳೆಯರು ಸೇರಿ 59 ಜನರ ವಿರುದ್ಧ ಬಾಗಲಕೋಟೆ ತಾಲೂಕಿನ ಕಲಾದಗಿ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.​ ಮಠಕ್ಕೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ: 59 ಜನರ ವಿರುದ್ಧ FIR ದಾಖಲು
ರಂಭಾಪುರಿ ಶ್ರೀ, ಚಪ್ಪಲಿ ಎಸೆತ
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 18, 2024 | 3:21 PM

Share

ಬಾಗಲಕೋಟೆ, ಫೆಬ್ರವರಿ 18: ರಂಭಾಪುರಿ ಶ್ರೀಗಳ (Rambhapuri seer) ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರುಷರು, ಮಹಿಳೆಯರು ಸೇರಿ 59 ಜನರ ವಿರುದ್ಧ ಬಾಗಲಕೋಟೆ ತಾಲೂಕಿನ ಕಲಾದಗಿ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.​ ರಂಭಾಪುರಿ ಶ್ರೀಗಳ ಭಕ್ತರ ಕಡೆಯಿಂದ ದೂರು ಹಿನ್ನೆಲೆ ಪೊಲೀಸ್​ ಅಧಿಕಾರಿಗಳು ಎಫ್​ಐಆರ್​ ದಾಖಲು ಮಾಡಿದ್ದಾರೆ. ವಿವಾದ ಕೋರ್ಟ್​​ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು, ಶಾಂತಿ ಕದಡುವ ಉದ್ದೇಶದ ಗಲಾಟೆ ಮತ್ತು ಶ್ರೀಗಳಿಗಾದ ಅವಮಾನ ಎಲ್ಲವನ್ನೂ ಪರಿಗಣಿಸಿ ಎಫ್​​ಐಆರ್​ ದಾಖಲಿಸಲಾಗಿದೆ. ​ಘಟನೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಬಾಗಲಕೋಟೆ ಎಸ್​ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.

ಅದು ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಠ. ಎಂಟು ವರ್ಷದ ಹಿಂದೆ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ತದನಂತರ ರಂಭಾಪುರಿ ಶ್ರೀಗಳು ಓರ್ವ ಸ್ವಾಮೀಜಿಯನ್ನ ಪೀಠಾಧಿಪತಿಯಾಗಿ ನೇಮಿಸಿದ್ದರು. ಆದರೆ ಭಕ್ತರು ವಿರೋಧಿಸಿದ್ದರು. ವಿವಾದ ಕೋರ್ಟ್​​​​ನಲಿದ್ದರೂ ಭಕ್ತರ ಆಕ್ರೋಶ ನಿನ್ನೆ ಸ್ಫೋಟವಾಗಿತ್ತು.

ಇದನ್ನೂ ಓದಿ: ಗುರುಲಿಂಗೇಶ್ವರ ಸ್ವಾಮೀಜಿ ಚಿನ್ನದ ಸರ, ಕಿರೀಟ ನಾಪತ್ತೆ: ರಂಭಾಪುರಿ ಶ್ರೀ ವಿರುದ್ಧ ಭಕ್ತರಿಂದ ಗಂಭೀರ ಆರೋಪ

ಜಿಲ್ಲೆಯ ಕಲಾದಗಿಯಲ್ಲಿರುವ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದಲ್ಲಿ ನಿನ್ನೆ ಭಕ್ತರು ಆಕ್ರೋಶಗೊಂಡಿದ್ದರು. ಇದಕ್ಕೆ ಕಾರಣ ಮಠದ ಪೀಠಾಧಿಪತಿ ಆಯ್ಕೆ ವಿವಾದ. ಮಠದ ಪೀಠಾಧಿಪತಿಯಾಗಿ ಗಂಗಾಧರ ಶ್ರೀಗಳನ್ನು ನೇಮಕ ಮಾಡಿದ್ದಕ್ಕೆ ಭಕ್ತರು ರೊಚ್ಚಿಗೆದ್ದಿದ್ದರು.

ಇದನ್ನೂ ಓದಿ: ಗುರುಲಿಂಗೇಶ್ವರ ಮಠದಲ್ಲಿ ಭುಗಿಲೆದ್ದ ಭಕ್ತರ ಆಕ್ರೋಶ, ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆತ

ಪೀಠಾಧಿಪತಿಯಾಗಿ ಆಯ್ಕೆ ವಿವಾದ ಸದ್ಯ ಕೋರ್ಟ್​​​ನಲ್ಲಿದೆ. ಹೀಗಾಗಿ, ಮಠದ ದುರಸ್ತಿ, ಮಠದ ಆಸ್ತಿ ಸಾಗುವಳಿ‌ ಮಾಡುವಂತಿಲ್ಲ ಅಂತ ಕೋರ್ಟ್ ಆದೇಶಿಸಿತ್ತು. ಆದರೆ ಗಂಗಾಧರ ಸ್ವಾಮೀಜಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಕ್ತರು ಆಕ್ರೋಶಗೊಂಡಿದ್ದರು.

ಚಪ್ಪಲಿ ತೂರಿದ ಉದ್ರಿಕ್ತ ಮಹಿಳೆ 

ಸಂಘರ್ಷದ ನಡುವೆ ಉದಗಟ್ಟಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಕಾರ್ಯಕ್ರಮವಿತ್ತು. ಇದರಲ್ಲಿ ಪಾಲ್ಗೊಳ್ಳಲು ರಂಭಾಪುರಿ ಶ್ರೀ ಕಲಾದಗಿ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಭಕ್ತರು ಶ್ರೀ ಕಾರನ್ನ ತಡೆಯಲು ಯತ್ನಿಸಿ, ಧಿಕ್ಕಾರ ಕೂಗಿದ್ದರು. ಉದ್ರಿಕ್ತ ಮಹಿಳೆ ಶ್ರೀಗಳ ಕಾರಿನತ್ತ ಚಪ್ಪಲಿ ತೂರಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಭಕ್ತರು ಚಪ್ಪಲಿ ತೂರಿಲ್ಲ ಎಂದ ರಂಭಾಪುರಿ ಶ್ರೀ

ಕಲಾದಗಿ ಮಠ 50 ಎಕರೆ ಆಸ್ತಿ, ಹೈಸ್ಕೂಲ್, ಕಾಲೇಜು ಸೇರಿ 25 ಕೋಟಿ ರೂ. ಬೆಲೆ ಬಾಳುತ್ತೆ. ಇದನ್ನ ಹೊಡೆಯುವ ಹುನ್ನಾರ ನಡೀತಿದೆ ಅಂತ ಭಕ್ತರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಂಭಾಪುರಿ ಶ್ರೀಗಳು, ವಿವಾದ ಕೋರ್ಟ್​ನಲ್ಲಿದೆ. ಏನನ್ನೂ ಮಾತಾಡಲ್ಲ. ಆದರೆ ನಮ್ಮ ಕಾರಿನ ಭಕ್ತರು ಚಪ್ಪಲಿ ತೂರಿಲ್ಲ. ಹೂ ಹಾಕಿ ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.