ಬಾಗಲಕೋಟೆ: ಬ್ಲ್ಯಾಕ್ ಫಂಗಸ್​ನಿಂದ ಮುಖದ ಅಂದಕ್ಕೆ ಧಕ್ಕೆ ಆದವರಿಗೆ ಸೌಂದರ್ಯ ಶಸ್ತ್ರಚಿಕಿತ್ಸೆ; ವಿಶೇಷ ವರದಿ ಇಲ್ಲಿದೆ

ಬಾಗಲಕೋಟೆ: ಬ್ಲ್ಯಾಕ್ ಫಂಗಸ್​ನಿಂದ ಮುಖದ ಅಂದಕ್ಕೆ ಧಕ್ಕೆ ಆದವರಿಗೆ ಸೌಂದರ್ಯ ಶಸ್ತ್ರಚಿಕಿತ್ಸೆ; ವಿಶೇಷ ವರದಿ ಇಲ್ಲಿದೆ
ಶಸ್ತ್ರಚಿಕಿತ್ಸೆಗೆ ಒಳಗಾದವರು

ಕೊವಿಡ್ ಬಳಿಕ ಕಂಡು ಬಂದ ಬ್ಲ್ಯಾಕ್ ಫಂಗಸ್ ಮಾರಿಗೆ ತುತ್ತಾಗಿರುವ ಕೆಲ ಜನರು ತಮ್ಮ ವಿರೂಪಗೊಂಡ ಮುಖಗಳಿಗೆ ಶಸ್ತ್ರಚಿಕಿತ್ಸೆ ಪಡೆದು ಮೊದಲಿನಂತೆ ಹೊಸ ರೂಪಕ್ಕೆ ಬಂದಿದ್ದಾರೆ. ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಮೊದಲಿನಂತಾಗಲು ವೈದ್ಯರ ತಂಡ ಸಹಕರಿಸಿದೆ.

TV9kannada Web Team

| Edited By: ganapathi bhat

Jan 26, 2022 | 11:21 AM

ಬಾಗಲಕೋಟೆ: ವಿವಿಧ ಕಾಯಿಲೆಗಳ ಕಾರಣದಿಂದಾಗಿ ಕೆಲವರು ಮುಖ ವಿರೂಪವಾಗಿಸಿ ಮಾನಸಿಕವಾಗಿ ನೋವು ಅನುಭವಿಸುತ್ತ ಇರುತ್ತಾರೆ. ಅದರಲ್ಲೂ ಕೊವಿಡ್ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಕೆಲವರಲ್ಲಿ ಬ್ಲ್ಯಾಕ್ ಫಂಗಸ್ ಆಗಿ ಮುಖದ ಸೌಂದರ್ಯಕ್ಕೆ ಧಕ್ಕೆ ಆಗಿದ್ದುಂಟು. ಹೀಗೆ ವಿರೋಪಗೊಂಡ ಮುಖಗಳಿಗೆ ಶಸ್ತ್ರ ಚಿಕಿತ್ಸೆ ನೀಡಿ ಅವರಿಗೆ ಹೊಸ ರೂಪ ಕೊಡಲಾಗುತ್ತಿದೆ. ಇದರಿಂದ ಅನೇಕರ ವಿರೂಪಗೊಂಡ ಮುಖ ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಬಾಗಲಕೋಟೆ ಪಿಎಂಎನ್ ಡೆಂಟಲ್ ಕಾಲೇಜ್ ಆಸ್ಪತ್ರೆ ವೈದ್ಯರು ವಿಕೃತ ಮುಖಗಳಿಗೆ ಅಂದದ ರೂಪ ನೀಡುತ್ತಿದ್ದಾರೆ.

ಕೊವಿಡ್ ಬಳಿಕ ಕಂಡು ಬಂದ ಬ್ಲ್ಯಾಕ್ ಫಂಗಸ್ ಮಾರಿಗೆ ತುತ್ತಾಗಿರುವ ಕೆಲ ಜನರು ತಮ್ಮ ವಿರೂಪಗೊಂಡ ಮುಖಗಳಿಗೆ ಶಸ್ತ್ರಚಿಕಿತ್ಸೆ ಪಡೆದು ಮೊದಲಿನಂತೆ ಹೊಸ ರೂಪಕ್ಕೆ ಬಂದಿದ್ದಾರೆ. ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಮೊದಲಿನಂತಾಗಲು ವೈದ್ಯರ ತಂಡ ಸಹಕರಿಸಿದೆ. ಪಿಎಂಎನ್ ಡೆಂಟಲ್ ಕಾಲೇಜ್ ಇಂತದ್ದೊಂದು ಉತ್ತಮ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು ಇದೀಗ ಗುಣಮುಖರಾಗಿರುವ ಜನರ ಆರೋಗ್ಯ ವಿಚಾರಿಸುತ್ತಿದೆ. ಬಾಗಲಕೋಟೆಯ ಪ್ರತಿಷ್ಠಿತ ಬಿವಿವಿ ಸಂಘದ ಪಿ.ಎಂ. ನಾಡಗೌಡ ಡೆಂಟಲ್ ಕಾಲೇಜ್ ನಲ್ಲಿ ಈ ಕಾರ್ಯ ನಡೆಯುತ್ತಿದೆ.

ಹೌದು, ಅಪಘಾತ, ಕ್ಯಾನ್ಸರ್ ಇತ್ಯಾದಿ ಮಾರಕ ಸಂದರ್ಭದಲ್ಲಿ ರೋಗಿಗಳ ಮುಖ ವಿರೋಪವಾಗುವುದು ಕಂಡು ಬರುತ್ತದೆ. ಹಾಗೆಯೇ ಕೊವಿಡ್ ಎರಡನೇ ಅಲೆಯಲ್ಲಿ ಕೊರೊನಾದಿಂದ ಗುಣಮುಖರಾಗಿದ್ದ ಕೆಲವರಲ್ಲಿ ಬ್ಲ್ಯಾಕ್ ಫಂಗಸ್ ಕಾಟ ಕೆಲವರ ಜೀವ ನುಂಗಿ ಹಾಕಿದ್ದರೆ ಮತ್ತೆ ಕೆಲವರ ಮುಖ ವಿರೋಪಗೊಳಿಸಿರುವ ಪ್ರಸಂಗಗಳು ನಡೆದಿವೆ. ಹೀಗೆ ಮುಖ ವಿರೂಪವಾಗಿದ್ದ ಜನರಿಗೆ ಬಾಗಲಕೋಟೆ ಬಿವಿವಿ ಸಂಘದ ಪಿ.ಎಂ. ನಾಡಗೌಡ ಡೆಂಟಲ್ ಕಾಲೇಜ್ ವೈದ್ಯರ ತಂಡ ಸೂಕ್ತ ಶಸ್ತ್ರ ಚಿಕಿತ್ಸೆ ನೀಡಿ ಅವರಿಗೆ ಮೊದಲಿನ ರೂಪ ಬರುವಂತೆ ಮಾಡುತ್ತಿದ್ದಾರೆ.

ಈಗಾಗಲೇ 80 ರಿಂದ 100 ಜನರಿಗೆ ಶಸ್ತ್ರಚಿಕಿತ್ಸೆ

ಈಗಾಗಲೇ 80 ರಿಂದ 100 ಜನರಿಗೆ ಶಸ್ತ್ರಚಿಕಿತ್ಸೆ ಆಗಿದ್ದು, ಅನೇಕರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನು ಬಿವಿವಿ ಸಂಘದ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್, ಕುಮಾರೇಶ್ವರ ಆಸ್ಪತ್ರೆ ವೈದ್ಯರ ಸಹಕಾರದೊಂದಿಗೆ ಡೆಂಟಲ್ ಕಾಲೇಜ್ ನಲ್ಲಿ ಈ ಕಾರ್ಯ ನಡೆದಿದ್ದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ ಕೊವಿಡ್ 1 ಮತ್ತು 2ನೇ ಅಲೆಯಲ್ಲಿ ಸರ್ಕಾರದ ಒಡಂಬಡಿಕೆಯಂತೆ ಸೋಂಕಿತರಿಗೆ ಎಲ್ಲ ಸೌಲಭ್ಯ ಒಳಗೊಂಡಿದ್ದ ನೂರಾರು ಬೆಡ್ ಗಳನ್ನು ಒದಗಿಸಿ, ಎಬಿಆರ್ ಕೆ ಅಡಿಯಲ್ಲಿ ಚಿಕಿತ್ಸೆ ನೀಡಿದ್ದರು. ಬ್ಲ್ಯಾಕ್ ಫಂಗಸ್ ಬಂದವರಿಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೂ ತಮ್ಮ ವೈದ್ಯರ ತಂಡವನ್ನು ಕಳುಹಿಸುತ್ತಿದ್ದರು.

Bagalkot Doctors Black Fungus Treatment

ವೈದ್ಯರ ತಂಡದೊಂದಿಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು

ಪ್ರತಿ ತಿಂಗಳು ಒಬ್ಬರಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ

ಇದೀಗ ಬ್ಲ್ಯಾಕ್ ಫಂಗಸ್ ನಿಂದ ಮುಖ ವಿರೂಪಗೊಂಡಿರುವ ಅನೇಕರಿಗೆ ಸರ್ಜರಿ ಮುಖಾಂತರ ಅವರಿಗೆ ಮೊದಲಿನಂತೆ ರೂಪ ಬರುವಂತೆ ಮಾಡುತ್ತಿದ್ದಾರೆ. ಇಲ್ಲೂ ಸಹ ಸರ್ಕಾರದ ಎಬಿಆರ್​ಕೆ ಅಡಿಯಲ್ಲಿ ಸರ್ಜರಿಯನ್ನು ಉಚಿತವಾಗಿ ಮಾಡಿದರೆ ಉಳಿದ ಬಿಲ್ ಗೆ ರಿಯಾಯಿತಿ ಕೊಡುತ್ತಿದ್ದಾರೆ. ಅಲ್ಲದೇ ಎಬಿಆರ್ ಕೆ ಯೋಜನೆಯೂ ಅನ್ವಯವಾಗದಿದ್ದರೆ, ಬಿಪಿಎಲ್ ಕಾರ್ಡ್ ನಿಂದಲೂ ವಂಚಿತವಾದ ಕಡುಬಡವ ರೋಗಿ ಇದ್ದಲ್ಲಿ ಪ್ರತಿ ತಿಂಗಳು ಒಬ್ಬರಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಇನ್ನು ಬ್ಲ್ಯಾಕ್ ಫಂಗಸ್ ನಿಂದ ಮುಖ ವಿರೂಪಗೊಂಡವರಿಗೆ ದೇಹದ ಬೇರೆ ಭಾಗದಿಂದ ಚರ್ಮವನ್ನು ಪಡೆದು ಅವರಿಗೆ ಮೇಲ್ದವಡೆ, ಕೆಳದವಡೆ ಪುನರ್ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಕೆಲವರಿಗೆ ಕಣ್ಣುಗಳು ಹೋಗಿದ್ದು, ಅಂತವರಿಗೆ ಕೃತಕ ಕಣ್ಣು, ಹಲ್ಲು ಎಲ್ಲವನ್ನು ಅಳವಡಿಸಲಾಗುತ್ತಿದೆ. ಇನ್ನು ಬ್ಲ್ಯಾಕ್ ಫಂಗಸ್ ನಿಂದ ಮುಖ ವಿರೂಪಗೊಂಡು ಇದೀಗ ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖ ಆಗಿರುವ ಅನೇಕ ರೋಗಿಗಳು ಖುಷಿ ವ್ಯಕ್ತಪಡಿಸುತ್ತಾರೆ.

PM Nadagouda Hospital Bagalkot

ಆಸ್ಪತ್ರೆ

ಒಟ್ಟಾರೆ, ಅಫಘಾತ, ಸೀಳುತುಟಿ, ಬ್ಲ್ಯಾಕ್ ಫಂಗಸ್, ಬಾಯಿ ಕ್ಯಾನ್ಸರ್ ಗೆ ತುತ್ತಾಗಿ ಮುಖ ವಿರೂಪಗೊಂಡು ಮಾನಸಿಕ ಹಿಂಸೆ ಅನುಭವಿಸುತ್ತಿದ್ದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಸ್ಥಳೀಯವಾಗಿಯೂ ಶಸ್ತ್ರಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ಇದಕ್ಕಾಗಿ ಶ್ರಮಿಸುತ್ತಿರುವ ವೈದ್ಯರ ತಂಡಕ್ಕೆ ಹಾಗೂ ಬೆಂಬಲವಾಗಿ ನಿಂತಿರುವ ಬಿವಿವಿ ಸಂಘದ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಶೇಷ ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ

ಇದನ್ನೂ ಓದಿ: ಸಾಧನೆಗೆ ಬಡತನ ಅಡ್ಡಿ ಎಂಬುದು ಸುಳ್ಳು! ಕಷ್ಟಪಟ್ಟು ಓದಿ ಪಿಎಸ್​ಐ ಆದ ಹೆಣ್ಣುಮಗಳು; ಇಲ್ಲಿದೆ ವಿಶೇಷ ವರದಿ

ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆ ಗ್ರಾಮವೊಂದರ ಸರ್ಕಾರಿ ಜಾಗದಲ್ಲಿ ಸ್ಥಾಪಿಸಿದ್ದ ಪ್ರತಿಮೆಗಳನ್ನು ತೆರವುಗೊಳಿಸಿದ್ದಕ್ಕೆ ಜನರ ಆಕ್ರೋಶ

Follow us on

Related Stories

Most Read Stories

Click on your DTH Provider to Add TV9 Kannada