ಬಾಗಲಕೋಟೆ: ಸರ್ಕಾರಕ್ಕೆ ಸೆಡ್ಡು ಹೊಡೆದು ಕಂಕನವಾಡಿ ರೈತರಿಂದ ಬ್ಯಾರಲ್ ತೇಲುಸೇತುವೆ ನಿರ್ಮಾಣ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ರೈತರು ಬ್ಯಾರಲ್ ತೇಲುಸೇತುವೆ ನಿರ್ಮಾಣ ಮಾಡಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದಾರೆ. ಕಂಕನವಾಡಿ ಗ್ರಾಮದಿಂದ ಕಂಕನವಾಡಿ ಗುಹೇಶ್ವರ ನಡುಗಡ್ಡೆ ಸಂಪರ್ಕ ಕಲ್ಪಿಸಲು ಕೃಷ್ಣಾ ನದಿ ಅಡ್ಡಲಾಗಿ ಇದನ್ನು ನಿರ್ಮಿಸಿ ಸಾಧನೆ ಮಾಡಿದ್ದಾರೆ.
ಬಾಗಲಕೋಟೆ, ಸೆ.28: ರೈತರು ಕೇವಲ ಉಳುಮೆ ಮಾಡಿ ಬೆಳೆ ಬೆಳೆಯತುವುದಕ್ಕೆ ಮಾತ್ರ ಸೀಮಿತವಲ್ಲ. ನಮಲ್ಲೂ ಪ್ರತಿಭೆ ಇದೆ ಎಂದು ಬಾಗಲಕೋಟೆ (Bagalkot) ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕನವಾಡಿ ಗ್ರಾಮದ ರೈತರು ತೋರಿಸಿದ್ದಾರೆ. ನಾವು ಯಾವ ಇಂಜಿನಿಯರ್ಗಳಿಗೂ ಕಮ್ಮಿಯಿಲ್ಲ ಎಂದು ಕೆಲಸದ ಮೂಲಕ ಸಾಬೀತು ಮಾಡಿದ್ದಾರೆ.
ರೈತರು ಕಳೆದ 25 ವರ್ಷದಿಂದ ನದಿಯಲ್ಲೊಂದು ಸೇತುವೆ ಕಟ್ಟಿಸಿ ಎಂದು ಕೇಳುತ್ತಲೇ ಬಂದಿದ್ದರು. ಆದರೆ ಅದು ಮುಳುಗಡೆ ಪ್ರದೇಶ ಅಂತ ಯಾವುದೇ ಸರಕಾರ ಇವರ ಬೇಡಿಕೆಗೆ ಕೇರ್ ಮಾಡಲೇ ಇಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ ರೈತರು ದಿಟ್ಟ ನಿರ್ಧಾರ ಕೈಗೊಂಡು ಯಾರ ಬಳಿ ಕೈ ಚಾಚದೇ ಸ್ವಂತ ಹಣ ಹಾಕಿ ನದಿಯಲ್ಲಿ ತೇಲುಸೇತುವೆ ಕಟ್ಟಿಸಿ ಸಾಧನೆ ಮಾಡಿದ್ದಾರೆ.
ಕೃಷ್ಣಾ ನದಿಗೆ ಅಡ್ಡವಾಗಿ 600 ಅಡಿ ಉದ್ದದ ಎಂಟು ಅಡಿ ಅಗಲದ ಸೇತುವೆಯನ್ನು ಸ್ವತಃ ರೈತರೇ ಕಟ್ಟಿ ಸಾಧನೆ ಮಾಡಿದ್ದಾರೆ. 15 ಟನ್ ಕಬ್ಬಿಣ, ಹತ್ತು ಟನ್ ಕಟ್ಟಿಗೆ ಒಂದು ಕ್ವಿಂಟಲ್ ಪ್ಲಾಷ್ಟಿಕ್ ಹಗ್ಗ ಬಳಸಿ ಕಂಕನವಾಡಿ ಗ್ರಾಮದ ರೈತರೇ ಸೇತುವೆ ಕಟ್ಟಿದ್ದಾರೆ.
ಕಂಕನವಾಡಿ ಗ್ರಾಮ ಹಾಗೂ ಗ್ರಾಮದ ಗುಹೇಶ್ವರ ನಡುಗಡ್ಡೆ ನಡುವೆ ಸಂಪರ್ಕ ಕಲ್ಪಿಸಲು ಕೃಷ್ಣಾ ನದಿಗೆ ಬ್ಯಾರಲ್ ಸೇತುವೆ ಕಟ್ಟಿದ್ದಾರೆ. ಒಂದು ವರ್ಷದ ಹಿಂದೆ ನದಿಯಲ್ಲಿ ಬ್ಯಾರಲ್ ಜೋಡಿಸಿ ಮಂಟಪ ರಚಿಸಿದ ರೈತರು ರಾತ್ರಿ ಬಣ್ಣದ ಕಾರಂಜಿ ಹಚ್ಚಿದ್ದರು. ಇದರ ಪ್ರೇರಣೆಯಿಂದ ಇಂದು ಸೇತುವೆ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಕಳಪೆ ಗುಣಮಟ್ಟದ ಆಹಾರ ಸೇವಿಸಿ ಗರ್ಭಿಣಿ ಆರೋಗ್ಯದಲ್ಲಿ ಏರುಪೇರು
ಜೊತೆಗೆ ಕಳೆದ ವರ್ಷ ಬೋಟ್ ಮೇಲೆಯೇ ಕಬ್ಬು ಸಾಗಿಸಿ ದಾಖಲೆ ಮಾಡಿದ್ದರು. 25 ವರ್ಷದಿಂದಲೂ ಸೇತುವೆ ಬೇಡಿಕೆ ಇಟ್ಟಿದ್ದ ಗ್ರಾಮಸ್ಥರಿಗೆ ಯಾವ ಸರಕಾರವೂ ಸ್ಪಂದಿಸಿಲ್ಲ. ಇದರಿಂದ ತಾವೆ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸರ್ಕಾರಕ್ಕೆ ಸೆಡ್ಡು ಹೊಡೆದು ಸೇತುವೆ ಕಟ್ಟಿದ್ದಾರೆ.
ಈ ಸೇತುವೆಗೆ 300 ಪ್ಲಾಷ್ಟಿಕ್ ಬ್ಯಾರಲ್ಗಳನ್ನು ಬಳಸಿದ್ದಾರೆ. ಸೇತುವೆ ಯಾವುದೇ ಕಡೆ ವಾಲದಂತೆ ಸದೃಢವಾಗಿ ಕಟ್ಟಿದ್ದಾರೆ. ಎಕರೆಗೆ ಒಂದು ಸಾವಿರದಂತೆ ಪಟ್ಟಿ ಹಣ ಹಾಕಿದ್ದಾರೆ. ಜೊತೆಗೆ ಗ್ರಾಮದ ದೇವಸ್ಥಾನದ ಹಣ ಬಳಸಿಕೊಂಡು 25 ಲಕ್ಷ ಕೂಡಿಸಿ ಕಟ್ಟಿದ್ದಾರೆ. ಒಂದೂವರೆ ಎರಡು ತಿಂಗಳ ಕಾಲ ವೆಲ್ಡಿಂಗ್ ಮೆಸ್ತ್ರಿ, ಕಾರ್ಪೆಂಟರ್ ಜೊತೆ ಸರದಿ ಪಾಳಿಯಂತೆ 25 ಜನ ರೈತರು ಈ ಕಾರ್ಯಕ್ಕೆ ಶ್ರಮವಹಿಸಿದ್ದಾರೆ.
ಇನ್ನು ಎಂಟು ದಿನದಲ್ಲಿ ಇದು ಪೂರ್ತಿಯಾಗಲಿದ್ದು, ನಂತರ ಉದ್ಘಾಟನೆಯಾಗಲಿದೆ. ಇದುವರೆಗೂ ಕಂಕನವಾಡಿ ಗ್ರಾಮಸ್ಥರು ತಮ್ಮೂರ ಗುಹೇಶ್ವರ ನಡುಗಡ್ಡೆಗೆ ಹೋಗಲು ಬೋಟ್ ಬಳಸುತ್ತಾ ಬಂದಿದ್ದಾರೆ. ಈಗಲೂ ಅದನ್ನೇ ಬಳಸುತ್ತಿದ್ದಾರೆ.
ಆದರೆ ಬೋಟ್ನಲ್ಲಿ ಪ್ರಯಾಣ ಮಾಡುವುದರಿಂದ ಹಣ ಖರ್ಚು ಆಗುತ್ತಿತ್ತು. ಜೊತೆಗೆ ಎಷ್ಟೊ ಹೊತ್ತು ಕಾಯುವ ಸ್ಥಿತಿ ಇತ್ತು. ಅಪಾಯಕಾರಿ ಕೂಡ ಹೌದು. ಗುಹೇಶ್ವರ ನಡುಗಡ್ಡೆಯಲ್ಲಿ 150 ಕುಟುಂಬಗಳಿದ್ದು ಶಾಲಾ ಮಕ್ಕಳು ಶಾಲೆಗೆ ಹೋಗಲು, ಜನರು ಸಂತೆ ಪೇಟೆಗೆ ಹೋಗಲು ಎಷ್ಟೊ ಹೊತ್ತು ಕಾಯುವ ಸ್ಥಿತಿ ಇದೆ. ಜೊತೆಗೆ ರಾತ್ರಿ ಬೋಟ್ ಇರುವುದಿಲ್ಲ. ಆದರೆ ಈಗ ಈ ಸೇತುವೆ ನಿರ್ಮಾಣ ಆಗುತ್ತಿರುವುದರಿಂದ ಹಣ ಸಮಯ ಎಲ್ಲವೂ ಉಳಿತಾಯವಾಗಲಿದೆ. ನಮಗೆ ಬಹಳ ಸಂತಸವಾಗಿದೆ ಎಂದು ಮಹಿಳೆಯರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಒಗ್ಗಟ್ಟೇ ಬಲ ಎಂಬಂತೆ ಗ್ರಾಮದ ಎಲ್ಲ ರೈತರು ಒಗ್ಗಟ್ಟಾಗಿ ಸರಕಾರ ಮಾಡದ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ. ರೈತರ ಈ ಸಾಧನೆ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ