AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ ರಾಮ, ನಾನು ಲಕ್ಷ್ಮಣ; ಭಾರತದ ಗಗನಯಾತ್ರಿ ಪ್ರಶಾಂತ್ ನಾಯರ್ ಸಂವಾದ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಐತಿಹಾಸಿಕ ಕಾರ್ಯಾಚರಣೆಯನ್ನು ನಡೆಸಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಭಾರತದ ಇನ್ನೋರ್ವ ಗಗನಯಾತ್ರಿ ಪ್ರಶಾಂತ್ ನಾಯರ್ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಇಸ್ರೋ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾರತದ ಈ ಇಬ್ಬರು ಗಗನಯಾತ್ರಿಗಳು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ ರಾಮ, ನಾನು ಲಕ್ಷ್ಮಣ; ಭಾರತದ ಗಗನಯಾತ್ರಿ ಪ್ರಶಾಂತ್ ನಾಯರ್ ಸಂವಾದ
Isro Press Conference
ಸುಷ್ಮಾ ಚಕ್ರೆ
|

Updated on: Aug 21, 2025 | 4:12 PM

Share

ನವದೆಹಲಿ, ಆಗಸ್ಟ್ 21: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಇಂದು (ಗುರುವಾರ) ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಆಕ್ಸಿಯಮ್ ಮಿಷನ್ 4ಗಾಗಿ ಶುಭಾಂಶು ಶುಕ್ಲಾ ಅವರ ನಿಯೋಜಿತ ಬ್ಯಾಕಪ್ ಆಗಿದ್ದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (Prashant B Nair) ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದರು. ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ “ಗಗನಯಾನ” ಕಾರ್ಯಕ್ರಮದ ಭಾಗವಾಗಿರುವ 4 ಗಗನಯಾತ್ರಿಗಳಲ್ಲಿ ಶುಭಾಂಶು ಶುಕ್ಲಾ ಮತ್ತು ಪ್ರಶಾಂತ್ ನಾಯರ್ ಕೂಡ ಸೇರಿದ್ದಾರೆ. ಭಾರತವು 2027ರಲ್ಲಿ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟವನ್ನು ಕೈಗೊಳ್ಳಲು ಮತ್ತು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸಿದೆ. ಭಾರತವು 2040ರ ವೇಳೆಗೆ ಚಂದ್ರನ ಮೇಲೆ ತನ್ನದೇ ಆದ ಗಗನಯಾತ್ರಿಯನ್ನು ಇಳಿಸುವ ಗುರಿಯನ್ನು ಹೊಂದಿದೆ.

ಶುಭಾಂಶು ಶುಕ್ಲಾ ರಾಮ, ನಾನು ಲಕ್ಷ್ಮಣ:

ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದು, “ಇನ್ನು ಕೆಲವು ತಿಂಗಳುಗಳ ನಂತರ ನಮಗೆ ದೀಪಾವಳಿ ಹಬ್ಬ ಬರುತ್ತದೆ. ಶ್ರೀ ರಾಮ ಅಯೋಧ್ಯೆಯನ್ನು ಪ್ರವೇಶಿಸಿದ ಸಮಯ ಅದು. ನಾವು ಈಗ ರಾಮ-ಲಕ್ಷ್ಮಣರಾಗಿ ಭಾರತಕ್ಕೆ ಬಂದಿದ್ದೇವೆ. ಶುಭಾಂಶು ಶುಕ್ಲಾ ರಾಮನಾದರೆ ನಾನು ನನ್ನನ್ನು ಲಕ್ಷ್ಮಣ ಎಂದು ಕರೆದುಕೊಳ್ಳುತ್ತೇನೆ. ಇಂದು ಇಲ್ಲಿ ದೀಪಾವಳಿಯಂತೆ ಭಾಸವಾಗುತ್ತಿದೆ. ನಮ್ಮ ಎಲ್ಲಾ ದೇಶವಾಸಿಗಳು ನಮ್ಮನ್ನು ಸ್ವೀಕರಿಸಲು ಇಲ್ಲಿದ್ದಾರೆ. ಆದರೆ ನಾನು ಶುಭಾಂಶುಗಿಂತ ಹಿರಿಯನಾದರೂ ನಾನು ಪ್ರತಿದಿನ ಈ ರಾಮನಿಗೆ ಲಕ್ಷ್ಮಣನಾಗಲು ಇಷ್ಟಪಡುತ್ತೇನೆ. ಶ್ರೀ ರಾಮ ಮತ್ತು ಲಕ್ಷ್ಮಣರಿಗೆ ವಾನರ ಸೇನೆಯಿಂದ ಸಾಕಷ್ಟು ಸಹಾಯ ಸಿಕ್ಕಿತು. ಆ ವಾನರ ಸೇನೆ ನಮ್ಮ ಅದ್ಭುತ ಇಸ್ರೋ ತಂಡ. ನಮಗೆ ಎಲ್ಲ ಸಹಕಾರ ನೀಡುತ್ತಿರುವ ಇಸ್ರೋ ತಂಡಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಇಸ್ರೋದಿಂದ ಮೊದಲ ಗಗನಯಾನ ಪರೀಕ್ಷಾ ಮಿಷನ್ ಪ್ರಾರಂಭ

ಈಗ ಭಾರತದ ಸಮಯ ಬಂದಿದೆ. ಅದು ತಾಂತ್ರಿಕ ಪರಾಕ್ರಮವಾಗಿರಲಿ, ಉದ್ಯಮವಾಗಿರಲಿ ಅಥವಾ ಜೋಶ್ ಆಗಿರಲಿ ಈಗ ಭಾರತಕ್ಕೂ ತಕ್ಕ ಸಮಯ ಬಂದಿದೆ ಎಂದು ಪ್ರಶಾಂತ್ ನಾಯರ್ ಹೇಳಿದ್ದಾರೆ.

ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ:

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶುಭಾಂಶು ಶುಕ್ಲಾ, ಭಾರತ ಇಂದಿಗೂ “ಸಾರೆ ಜಹಾನ್ ಸೆ ಅಚ್ಚಾ” (ಇಡೀ ಪ್ರಪಂಚಕ್ಕಿಂತ ಉತ್ತಮ) ಎಂದು ನನಗೆ ಕಾಣುತ್ತದೆ ಎಂದು ಹೇಳಿದ್ದಾರೆ. 1984ರಲ್ಲಿ ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ ಅವರು ತಮ್ಮ ಬಾಹ್ಯಾಕಾಶ ಯಾನದ ನಂತರ ಮೊದಲು ಬಳಸಿದ ಪ್ರಸಿದ್ಧ ಪದಗಳನ್ನು ಶುಭಾಂಶು ಶುಕ್ಲಾ ಪ್ರತಿಧ್ವನಿಸಿದರು. ಆಕ್ಸಿಯಮ್ -4 ಕಾರ್ಯಾಚರಣೆಯೊಂದಿಗಿನ ತಮ್ಮ ಅನುಭವವನ್ನು ಪ್ರತಿಬಿಂಬಿಸುತ್ತಾ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮಾನವ ಬಾಹ್ಯಾಕಾಶ ಯಾನದ ಪ್ರಯೋಜನಗಳು ತರಬೇತಿಯನ್ನು ಮೀರಿವೆ ಎಂದು ಹೇಳಿದರು. ಭಾರತವು ತನ್ನದೇ ಆದ ಕ್ಯಾಪ್ಸುಲ್ ಮತ್ತು ರಾಕೆಟ್ ಬಳಸಿ ತನ್ನದೇ ಆದ ಮಣ್ಣಿನಿಂದ ತನ್ನದೇ ಆದ ಗಗನಯಾತ್ರಿಗಳನ್ನು ಕಳುಹಿಸಲಿದೆ ಎಂದು ಅವರು ಹೇಳಿದರು. ಮಾನವ ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗುವುದರಿಂದ ಬಾಹ್ಯಾಕಾಶದಲ್ಲಿನ ಅನುಭವವು ನೆಲದ ಮೇಲೆ ಕಲಿಯುವುದಕ್ಕಿಂತ ಬಹಳ ಭಿನ್ನವಾಗಿದೆ ಎಂದು ಶುಭಾಂಶು ಶುಕ್ಲಾ ಹೇಳಿದರು.

ಇದನ್ನೂ ಓದಿ: ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ಬಾಹ್ಯಾಕಾಶ ಯಾನದ ಅನುಭವವನ್ನು ಬಿಚ್ಚಿಟ್ಟ ಶುಭಾಂಶು ಶುಕ್ಲಾ, “ಬಾಹ್ಯಾಕಾಶದಲ್ಲಿ 20 ದಿನಗಳನ್ನು ಕಳೆದ ನಂತರ ನಮ್ಮ ದೇಹವು ಗುರುತ್ವಾಕರ್ಷಣೆಯಲ್ಲಿ ಹೇಗೆ ಬದುಕಬೇಕೆಂದು ಮರೆತುಬಿಡುತ್ತದೆ. ನಾನು ಬಾಹ್ಯಾಕಾಶಕ್ಕೆ ಹೋಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ, ನಾನು ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದಾದರೆ ನೀವೆಲ್ಲರೂ ಸಹ ಅದನ್ನು ಮಾಡಬಹುದು ಎಂದರ್ಥ. ನಾವು ಗಗನಯಾನ, ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಹಲವಾರು ಕಾರ್ಯಾಚರಣೆಗಳನ್ನು ಪ್ಲಾನ್ ಮಾಡಿದ್ದೇವೆ. ಭಾರತವು ಇಂದಿಗೂ ಸಹ ಆಂಟ್ರಿಕ್ಸ್‌ನಿಂದ ನೋಡಿದಾಗ ಸಾರೇ ಜಹಾನ್ ಸೆ ಅಚ್ಚಾ ಆಗಿ ಕಾಣುತ್ತದೆ”ಎಂದು ಅವರು ಹೇಳಿದರು” ಎಂದಿದ್ದಾರೆ.

“ನಾವು ರಷ್ಯಾದ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದೆವು. ನಂತರ ನಾವು ಭಾರತಕ್ಕೆ ಹಿಂತಿರುಗಿ ಇಸ್ರೋದಲ್ಲಿ ತರಬೇತಿ ಪಡೆದೆವು. ಅದಾದ ನಂತರ ನಾವು ಆಕ್ಸಿಯಮ್ 4 ಮಿಷನ್‌ಗಾಗಿ ತರಬೇತಿಗಾಗಿ ಅಮೆರಿಕಕ್ಕೆ ಹೋದೆವು. ಆಕ್ಸಿಯಂ ಮಿಷನ್​ನ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು 4 ಆಸನಗಳನ್ನು ಹೊಂದಿತ್ತು. ಕಮಾಂಡರ್ ಜೊತೆಗೆ ಕೆಲಸ ಮಾಡಲು ಮತ್ತು ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಲು ನಾನು ಜವಾಬ್ದಾರನಾಗಿದ್ದೆ. ಭಾರತೀಯ ಸಂಶೋಧಕರು ಕಲ್ಪಿಸಿದ, ಅಭಿವೃದ್ಧಿಪಡಿಸಿದ ಮತ್ತು ಕಾರ್ಯಗತಗೊಳಿಸಿದ ಪ್ರಯೋಗಗಳನ್ನು ನಡೆಸುವ ಜೊತೆಗೆ STEM ಪ್ರದರ್ಶನಗಳನ್ನು ನಿರ್ವಹಿಸುವ ಮತ್ತು ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವ ಕಾರ್ಯವನ್ನು ನನಗೆ ವಹಿಸಲಾಗಿತ್ತು ಎಂದು ಅವರು ಹೇಳಿದರು.” ಎಂದು ಶುಭಾಂಶು ಶುಕ್ಲಾ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ