ಬಾಗಲಕೋಟೆ: ಆವರಣದಲ್ಲಿ ಸ್ವಚ್ಛತೆ, ಶುಚಿತ್ವದಿಂದ ಕೂಡಿದ ಬೆಡ್, ಬಾಣಂತಿಯರಿಗೆ, ಅವಶ್ಯಕತೆಯಿದ್ದವರಿಗೆ ಸೊಳ್ಳೆ ಪರದೆಯ ವ್ಯವಸ್ಥೆ, ಸುಸಜ್ಜಿತ ಔಷಧ ವಿಭಾಗ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಸೇರಿದಂತೆ ಈ ರೀತಿ ಸರ್ಕಾರಿ ಆಸ್ಪತ್ರೆಯೊಂದು ತನ್ನ ಗುಣಮಟ್ಟ ಕಾಪಾಡಿಕೊಂಡು ಮಾದರಿ ಆಸ್ಪತ್ರೆಯಾಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಮ್ಮಿ ಇಲ್ಲ. ಇಲ್ಲಿ ಸ್ವಚ್ಛತೆ, ಶುಚಿತ್ವಕ್ಕೆ ಕೊರತೆಯೇ ಇಲ್ಲ. ಗುಣಮಟ್ಟದ ಚಿಕಿತ್ಸೆ ಸೌಲಭ್ಯವಿದೆ. ಇಲ್ಲಿನ ಸಿಬ್ಬಂದಿ ಕೂಡ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಸೇವೆ ಗಮನಿಸಿ ಸರ್ಕಾರ ಈ ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮೆಟಗುಡ್ಡ ಗ್ರಾಮದಲ್ಲಿನ ಈ ಆರೋಗ್ಯ ಕೇಂದ್ರ ಹತ್ತಾರು ಹಳ್ಳಿಗಳಿಗೆ ಸಂಜೀವಿನಿಯಾಗಿದೆ. ಬಡವರ ಜೀವ ಕಾಪಾಡುವ ಸುರಕ್ಷತಾ ಆಸ್ಪತ್ರೆಯಾಗಿದೆ. ಎಲ್ಲ ರೀತಿಯ ಚಿಕಿತ್ಸೆ ಸೌಲಭ್ಯ ಇಲ್ಲಿ ನಿರಂತರ ನಡೆಯುತ್ತಿದೆ. ಇಡೀ ಗ್ರಾಮದ ಜನರು ಹಾಗೂ ಸುತ್ತಲಿನ ಹಳ್ಳಿಯ ಜನರಿಗೆ ಈ ಆಸ್ಪತ್ರೆ ಅಂದ್ರೆ ಅಚ್ಚುಮೆಚ್ಚು. ಒಟ್ಟಾರೆ ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಈ ಕಾಲದಲ್ಲಿ ಈ ಆಸ್ಪತ್ರೆ ಮಾತ್ರ ಎಲ್ಲರಿಗೂ ಮಾದರಿಯಾಗಿದೆ.