AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋದ ಸಿದ್ದರಾಮಯ್ಯ; ಕಾರಿನ ಮೇಲೆ ನೋಟಿನ ಕಂತೆ ಎಸೆದ ಮಹಿಳೆ

ನಮಗೆ ಹಣ ಬೇಡ, ಶಾಂತಿ ಬೇಕು ಎಂದು‌ ಗಾಯಾಳು ಕುಟುಂಬಸ್ಥ ಮಹಿಳೆ ಹಣ ಎಸೆದಿರುವಂತಹ ಘಟನೆ ಗಾಯಾಳುಗಳ ಆರೋಗ್ಯ ವಿಚಾರಿಸಿ ಬರುವಾಗ ನಡೆದಿದೆ.

ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋದ ಸಿದ್ದರಾಮಯ್ಯ; ಕಾರಿನ ಮೇಲೆ ನೋಟಿನ ಕಂತೆ ಎಸೆದ ಮಹಿಳೆ
ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 15, 2022 | 3:17 PM

Share

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರಿನಲ್ಲಿ ಗುಂಪು ಘರ್ಷಣೆ ಪ್ರಕರಣ (mob clash case) ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಗರದ ಆಶೀರ್ವಾದ ಆಸ್ಪತ್ರೆಯಲ್ಲಿದ್ದ ಮುಸ್ಲಿಂ ಗಾಯಾಳುಗಳನ್ನು ಭೇಟಿ ಮಾಡಿ, ನಾಲ್ವರಿಗೆ 2 ಲಕ್ಷ ರೂ. ಪರಿಹಾರ ನೀಡಲು ಮುಂದಾದಾಗ ಗಾಯಾಳು ವ್ಯಕ್ತಿಯ ಸಂಬಂಧಿ ಮಹಿಳೆ ರಜ್ಮಾ ನಿರಾಕರಿಸಿದರು. ಮಹಿಳೆ ಹಣ ನಿರಾಕರಿಸಿದರೂ ಒತ್ತಾಯವಾಗಿ ನೀಡಲಾಗಿದೆ. ಸಿದ್ದರಾಮಯ್ಯ ತೆರಳುತ್ತಿದ್ದ ವೇಳೆ ಕಾರಿನ ಮೇಲೆ ಮಹಿಳೆ ಹಣ ಎಸೆದಿದ್ದು, ನಮಗೆ ಹಣ ಬೇಡ, ಶಾಂತಿ ಬೇಕು ಎಂದು ಗಾಯಾಳು ಕುಟುಂಬ ಸದಸ್ಯರು ಆಗ್ರಹಿಸಿದರು. ಹಿಂದೂ, ಮುಸ್ಲಿಮರು ನೆಮ್ಮದಿಯಿಂದ ಬದುಕುವ ವಾತಾವರಣ ಬೇಕು ಎಂದು ಅಳುತ್ತಲೇ ಸಿದ್ದರಾಮಯ್ಯ ವಾಹನಕ್ಕೆ ರಜ್ಮಾ ಹಣ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಭೇಟಿ ನಿರಾಕರಿಸಿದ ಹಿಂದೂ ಸಂಘಟನೆ ಗಾಯಾಳುಗಳು:

ಹಿಂದೂ ಸಂಘಟನೆ ಗಾಯಾಳುಗಳು ಸಿದ್ದರಾಮಯ್ಯ ಭೇಟಿ ನಿರಾಕರಿಸಿದ್ದು, ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಆಸ್ಪತ್ರೆ ಭೇಟಿ ಕ್ಯಾನ್ಸಲ್ ಮಾಡಿದರು. ಆಸ್ಪತ್ರೆಗೆ ಸಿದ್ದರಾಮಯ್ಯ ಬರುವುದು ಬೇಡ ಬಾಗಲಕೋಟೆ ಎಸ್​ಪಿಗೆ ಹಿಂದೂ ಸಂಘಟನೆ ಗಾಯಾಳುಗಳು ಕರೆ ಮಾಡಿದ್ದಾರೆ. ಜುಲೈ 6ರಂದು ಕೆರೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಘರ್ಷಣೆಯಾಗಿತ್ತು. ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಸೇರಿದಂತೆ ನಾಲ್ವರಿಗೆ ಗಾಯವಾಗಿತ್ತು. ಗಾಯಾಳುಗಳ ಭೇಟಿಗೆ ಬಾದಾಮಿ ಶಾಸಕ ಸಿದ್ದರಾಮಯ್ಯ ಮುಂದಾಗಿದ್ದರು. ದಾಳಿಯಲ್ಲಿ ಮುಸ್ಲಿಂ ಸಮುದಾಯದ ಐವರು ಗಾಯಗೊಂಡಿದ್ದರು. ಸದ್ಯ ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. 2 ಸಮುದಾಯದ ಗಾಯಾಳುಗಳ ಭೇಟಿಗೆ ಸಿದ್ದರಾಮಯ್ಯ ಮುಂದಾಗಿದ್ದರು. ಆದರೆ ಹಿಂದೂ ಜಾಗರಣ ವೇದಿಕೆಯ ಗಾಯಾಳುಗಳು ಭೇಟಿ ನಿರಾಕರಿಸಿದರು.

ಪ್ರಕರಣ ಏನು? ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ನಿನ್ನೆ ರಾತ್ರಿ (ಜುಲೈ 6) ಎರಡು ಗುಂಪುಗಳು ಪರಸ್ಪರ ಹೊಡೆದಾಟಕ್ಕೆ ಇಳಿದಿದ್ದವು. ಗುಂಪು ಘರ್ಷಣೆಯಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದರು. ಚಾಕು ಇರಿತದಿಂದ ಗಾಯಗೊಂಡ ಒಂದು ಗುಂಪಿನ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ಷ್ಮಣ, ಅರುಣ, ಯಮನೂರ ಗಾಯಗೊಂಡವರು. ಮತ್ತೊಂದು ಗುಂಪಿನ ಬಂದೇನವಾಜ್ ಗೋಕಾಕ ಎಂಬಾತ ಗಾಯಗೊಂಡಿದ್ದು, ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆಗೆ ‌ದಾಖಲು ಮಾಡಲಾಗಿತ್ತು.

ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡಿದ್ದು, ಪಟ್ಟಣ ವ್ಯಾಪ್ತಿಯಲ್ಲಿ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ತರಕಾರಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಾಯಾಳುಗಳಾದ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರು ಹಿಂದೂ ಜಾಗರಣ ವೇದಿಕೆ ಸದಸ್ಯರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ತಳ್ಳುವ ಗಾಡಿಗೆ ಬೆಂಕಿ ಹಚ್ಚಿ, ಅಂಗಡಿ ಧ್ವಂಸಗೊಳಿಸಿ, ಬೈಕ್ ಜಖಂಗೊಳಿಸಲಾಗಿತ್ತು. ಪುಂಡರ ಹಾವಳಿಯಿಂದ ಹಾಳಾಗಿರುವ ತರಕಾರಿ ಅಂಗಡಿಗಳನ್ನು ವ್ಯಾಪಾರಸ್ಥರು ದುರಸ್ತಿ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತ್ತು.

ಯುವತಿಯರನ್ನು ಚೂಡಾಯಿಸಿದ್ದೇ ಗಲಾಟೆಗೆ ಕಾರಣ!

ಘಟನೆ ಸಂಬಂಧ ಪೊಲೀಸರು ಇದುವರೆಗೆ ಸುಮಾರು 18 ಜನರನ್ನ ವಶಕ್ಕೆ ಪಡೆದಿದ್ದರು. ನಾಪತ್ತೆಯಾದ 15ಕ್ಕೂ ಹೆಚ್ಚು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಎಸ್​ಪಿ ಜಯಪ್ರಕಾಶ್ ಕೆರೂರು ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್​ಪಿ, ಹಳೇ ದ್ವೇಷ ಹಾಗೂ ಯುವತಿಯರನ್ನು ಚೂಡಾಯಿಸಿದ್ದೇ ಇದಕ್ಕೆ ಕಾರಣ. ಸಾಮಾಜಿಕ ಜಾಲತಾಣದಲ್ಲಿ ಯಾರೂ ಕೂಡ ತಪ್ಪು ಸಂದೇಶ ರವಾನೆ ಮಾಡಬಾರದು ಎಂದಿದ್ದರು.

Published On - 12:46 pm, Fri, 15 July 22