
ಬಾಗಲಕೋಟೆ, ಜೂನ್ 20: ಬಣ್ಣದಿಂದ ಕಂಗೊಳಿಸುತ್ತಿರುವ ಅಂಗನವಾಡಿಗಳ ಹಿಂದೆ ಅಕ್ರಮ ಸದ್ದಿಲ್ಲದೆ ನಡೆದು ಹೋಗಿದೆ. ಇನ್ನು ಪುರುಷನೊಬ್ಬ ಮಹಿಳೆಯ ವೇಷ ತೊಟ್ಟು ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಗೆ ಪೋಸ್ ನೀಡಿದ್ದಾನೆ. ಮಂಗಳಮ್ಮ ಆರಿ ಹೆಸರಲ್ಲಿ ಪುರುಷನೊಬ್ಬ ಸೀರೆಯುಟ್ಟು ಪೋಸ್ ಕೊಟ್ಟಿದ್ದಾನೆ! ಇಳಕಲ್ ತಾಲ್ಲೂಕಿನ ಸಿದ್ದನಕೊಳ್ಳ ಗ್ರಾಮದಲ್ಲಿ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಗೆ ಈ ಫೋಟೊ ಅಪ್ಲೋಡ್ ಮಾಡಲಾಗಿದೆ. ಈ ಒಂದೇ ಫೋಟೊ ವಿವಿಧ ಅಂಗನವಾಡಿ ಕಾಮಗಾರಿಗಳಿಗೆ ದುರ್ಬಳಕೆಯಾಗಿದೆ. ಇಂತಹ ಅಕ್ರಮ ನಡೆದಿರುವುದು ಬಾಗಲಕೋಟೆ (Bagalkot) ಜಿಲ್ಲೆ ಹುನಗುಂದ ಹಾಗೂ ಇಳಕಲ್ ತಾಲ್ಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ. ನರೇಗಾ (MNAREGA) ಯೋಜನೆಯ ಹಣ ಪಡೆಯಲು ಈ ರೀತಿಯ ಅಕ್ರಮಗಳನ್ನು ಎಸಗಲಾಗಿದೆ.
ಹುನಗುಂದ ತಾಲ್ಲೂಕಿನಲ್ಲಿ ಒಟ್ಟು 23 ಅಂಗನವಾಡಿಗಳ ಕಟ್ಟಡ ಕಾಮಗಾರಿ ನಡೆಯುತ್ತಿವೆ. ಹುನಗುಂದ ಪಂಚಾಯತ್ ರಾಜ್ ಇಲಾಖೆಯಿಂದ ಅಂಗನವಾಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಹುನಗುಂದ ಪಂಚಾಯತ್ ರಾಜ್ ಇಲಾಖೆಯ ಅಕ್ರಮ ಈಗ ಬಯಲಾಗಿದೆ. ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನರೇಗಾ ಕೂಲಿಕಾರ್ಮಿಕರ ಬಳಕೆಯಲ್ಲಿ ಭಾರಿ ಅಕ್ರಮ ಎಸಗಲಾಗಿದೆ. ಕೂಲಿ ಕಾರ್ಮಿಕರ ಒಂದೇ ಫೋಟೊ ಎರಡೆರಡು ಗ್ರಾಪಂ ವ್ಯಾಪ್ತಿಯಲ್ಲಿ ಬಳಕೆಯಾಗಿದೆ. ಹುನಗುಂದ ತಾಲ್ಲೂಕಿನ ಗಂಜಿಹಾಳ ಗ್ರಾಪಂ ವ್ಯಾಪ್ತಿ ಅಂಗನವಾಡಿ ಕಟ್ಟಡ 3 ಕ್ಕೆ, ಬಿಂಜವಾಡಗಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಟ್ಟಡ 2 ಕ್ಕೆ ಒಂದೆ ಗ್ರೂಪ್ ಕಾರ್ಮಿಕರ ಫೊಟೊ ಬಳಸಲಾಗಿದೆ.
ಹುನಗುಂದ ತಾಲ್ಲೂಕಿನ ರಾಮವಾಡಗಿ, ಇಳಕಲ್ ತಾಲ್ಲೂಕಿನ ಚಿನ್ನಾಪುರ ಎಸ್ಟಿ ಅಂಗನವಾಡಿ ಕಟ್ಟಡಕ್ಕೆ ಒಂದೇ ಫೋಟೊ ಅಪ್ಲೋಡ್ ಮಾಡಲಾಗಿದೆ. ಫೋಟೊ ಒಂದೇ ಆದರೂ ಹೆಸರು ಹೆಸರು ಮಾತ್ರ ಬೇರೆ ಬೇರೆಯಾಗಿವೆ! ಆಯಾ ಗ್ರಾಪಂ ವ್ಯಾಪ್ತಿಯ ಕಾಮಗಾರಿಗೆ ಅದೇ ಪಂಚಾಯತ್ ವ್ಯಾಪ್ತಿಯ ಕಾರ್ಮಿಕರ ಬಳಸಿಕೊಳ್ಳಬೇಕು. ಆದರೆ ಇಲ್ಲಿ ನಿಯಮಗಳನ್ನು ಬೇಕಾಬಿಟ್ಟಿಯಾಗಿ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಗ್ರಾಪಂ ಪಿಡಿಒಗಳು, ತಾಪಂ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದು ನಮ್ಮ ತಪ್ಪಲ್ಲ, ಪಂಚಾಯತ್ ರಾಜ್ ಇಲಾಖೆ ವತಿಯಿಂದ ಅಂಗನವಾಡಿ ಕೆಲಸ ನಡೆದಿದೆ. ಅವರು ನಮಗೆ ಕಾರ್ಮಿಕರ ಬೇಡಿಕೆ ಇಟ್ಟಿರುತ್ತಾರೆ. ಆ ಪ್ರಕಾರ, ನಾವು ಅವರಿಗೆ ಕಾರ್ಮಿಕರ ಲಿಸ್ಟ್ ಮಾತ್ರ ಕೊಡುತ್ತೇವೆ. ಅವರು ತಮ್ಮ ಕೆಲಸದಲ್ಲಿ ಈ ರೀತಿ ಮಾಡಿದ್ದಾರೆ ಎಂದು ಬಿಂಜವಾಡಗಿ ಗ್ರಾಪಂ ಪಿಡಿಒ ಪ್ರವೀಣ ಕಂಚಿ ಹೇಳಿದ್ದಾರೆ. ಇನ್ನು ಹುನಗುಂದ ತಾಪಂ ಇಒ ಮುರಳಿ ದೇಶಪಾಂಡೆ ಅವರಿಂದಲೂ ಅದೇ ಸಮರ್ಥನೆ ಬಂದಿದೆ. ಅದು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಗಿದೆ. ಇದರಲ್ಲಿ ನಮ್ಮಪಾತ್ರವಿಲ್ಲ ಆದರೂ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಹುನಗುಂದ ಪಂಚಾಯತ್ ರಾಜ್ ಇಲಾಖೆ ಎಇಇ ಕೃಷ್ಣರಾವ್ ನಾಯಕ್ ಅವರನ್ನು ಕೇಳಿದರೆ, ಅಂಗನವಾಡಿ ಕಟ್ಟಡಕ್ಕೆ ನರೇಗಾದಿಂದ 8 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 15 ಲಕ್ಷ ರೂ, ಒಟ್ಟು 32 ಲಕ್ಷ ರೂ. ಹಣ ನೀಡಲಾಗುತ್ತದೆ. ಹುನಗುಂದ ತಾಲ್ಲೂಕಿನಲ್ಲಿ 23 ಅಂಗನವಾಡಿ ಕಟ್ಟಡ ಕಾಮಗಾರಿ ನಡೆದಿವೆ. ಕಾಮಗಾರಿ ಪಂಚಾಯತ್ ರಾಜ್ ಇಲಾಖೆಯಿಂದ ನಡೆದಿದೆ. ಒಂದೆ ಫೋಟೊ ಬೇರೆ ಕಡೆ ಬಳಸಿದ್ದು ತಪ್ಪು. ಇದನ್ನು ನರೇಗಾದವರು ಮಾಡಿರುತ್ತಾರೆ. ನಮ್ಮ ಜ್ಯೂನಿಯರ್ ಇಂಜಿನಿಯರ್ಗಳು ಕೆಲಸದ ಒತ್ತಡದಲ್ಲಿ ಗಮನಿಸಿರಲಿಕ್ಕಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ದೆವ್ವ ಬಿಡಿಸುವುದಾಗಿ ಮಹಿಳೆಗೆ ಜ್ಯೋತಿಷಿ ಮಾಡುವುದು ಹೀಗಾ..?
ಒಟ್ಟಿನಲ್ಲಿ ನರೇಗಾ ಪ್ರಮುಖ ಯೋಜನೆ ಗ್ರಾಮೀಣ ಮಟ್ಟದಲ್ಲಿ ಬಾರಿ ದುರ್ಬಳಕೆಯಾಗುತ್ತಿದೆ. ಇದಕ್ಕೆ ಈ ಅಕ್ರಮ ಸಾಕ್ಷಿಯಾಗಿದ್ದು, ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.